







ಮರ್ದಾಳ: ಶತಮಾನ ಕಂಡ ಕಡಬ ತಾಲೂಕಿನ ಬಂಟ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಆ.12ರಂದು ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.


ಶಾಲಾ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಮೇಲ್ಛಾವಣಿಯ ಭಾಗಗಳು ಉದುರುತ್ತಿದೆ. ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಪೋಷಕರು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಎ.ಆರ್. ಕ್ಯಾಸ್ಟಲಿಯೊ, ತಾ.ಪಂ.ಸಹಾಯಕ ನಿರ್ದೇಶಕ ಸಂದೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಅಧಿಕಾರಿಗಳ ತಂಡ ಭರವಸೆ ನೀಡಿದೆ. ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮ, ಎಸ್ಡಿಎಂಸಿ ಅಧ್ಯಕ್ಷ ಸಂತೋಷ್ ಕೇನ್ಯ, ಶಾಲಾ ಶಿಕ್ಷಕಿ ಸವಿತಾ, ಛಾಯಾಗ್ರಾಹಕರ ಸಂಘದ ಮಾಜಿ ಜಿಲ್ಲಾ ನಿರ್ದೇಶಕ, ಮಾಜಿ ಉಪಾಧ್ಯಕ್ಷರೂ ಆದ ಬಾಲಕೃಷ್ಣ ಗೌಡ ಅವರು ಅಧಿಕಾರಿಗಳಿಗೆ ಶಿಥಿಲಗೊಂಡ ಕಟ್ಟಡದ ಕುರಿತು ಮಾಹಿತಿ ನೀಡಿದರು.













