







ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ‘ನಿಸರ್ಗೋತ್ಸವ’ ಎಂಬ ವಿನೂತನ ಕಾರ್ಯಕ್ರಮವು ಶ್ರೀ ಶಶಿಧರ ಉರ್ಕ ಅವರ ಭತ್ತದ ಗದ್ದೆಯಲ್ಲಿ ನಡೆಯಿತು.


ಘಟಕದ ಸ್ವಯಂಸೇವಕರು ಗದ್ದೆಯಲ್ಲಿ ನಮ್ಮ ದೇಶದ ಪಾರಂಪರಿಕ ಆಟಗಳನ್ನು ಆಡಿದರು. ಪ್ರಕೃತಿಯ ಮಡಿಲಿನಲ್ಲಿ ಒಂದು ದಿನದ ಪರಿಸರ ಅಧ್ಯಯನ ಮಾಡಿದರು.




ಈ ಸಂದರ್ಭದಲ್ಲಿ ಹಿರಿಯರಿಂದ ನೇಜಿ ನಡುವ ಕಲೆಯನ್ನೂ ಕಲಿತುಕೊಂಡರು.ಕಾರ್ಯಕ್ರಮ ಉದ್ಘಾಟಿಸಿದ ಗದ್ದೆಯ ಮಾಲೀಕರು ಹಾಗೂ ಹಿರಿಯರಾದ ಶಶಿಧರ ಉರ್ಕ ಅವರು ಮಾತನಾಡಿ, “ಈಗಿನ ಕಾಲದ ಜನರು ಮಣ್ಣಿನಿಂದ ದೂರವಾಗುತ್ತಿದ್ದಾರೆ. ಪೇಟೆಯ ಕಡೆಗೆ ಹೆಚ್ಚಿನವರು ಒಲವು ತೋರುತ್ತಿದ್ದಾರೆ. ಆದರೆ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಈ ವಿದ್ಯಾರ್ಥಿಗಳು ಪರಿಸರಕ್ಕೆ ಹತ್ತಿರವಾಗುವ ಆಸಕ್ತಿ ತೋರಿಸಿದ್ದಾರೆ. ಈ ಆಸಕ್ತಿ ಇನ್ನಷ್ಟು ಭದ್ರವಾಗಿ ಪರಿಸರ ಸಂರಕ್ಷಣೆಯಾಗಲಿ” ಎಂದರು.
ಕೆಸರಿನಲ್ಲಿ ಈ ದಿನದ ಮಹತ್ವ ಮತ್ತು ಪ್ರಕೃತಿಯಿಂದ ಕಲಿತ ಪಾಠಗಳ ಬಗ್ಗೆ ಘಟಕದ ನಾಯಕಿ ಪ್ರೈಶಿಕಾ ಮಾತನಾಡಿದರು. ಘಟಕದ ಯೋಜನಾಧಿಕಾರಿ ಕೀರ್ತನ್ ಕಾರ್ಯಕ್ರಮ ಸಂಯೋಜಿಸಿದರು. ಸಹಯೋಜನಾಧಿಕಾರಿ ಪ್ರಮೀಳ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್ ಸಹಕರಿಸಿದರು. ಪ್ರಾಂಶುಪಾಲ ಚಂದ್ರಶೇಖರ ಕೆ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಹಿರಿಯರಾದ ಶಶಿಧರ ಉರ್ಕ ಅವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಲಿಶಾ ಶೆಟ್ಟಿ ಸ್ವಾಗತಿಸಿದರು. ಜನನಿ ಸರೋಳಿ ವಂದಿಸಿದರು. ಭವಿಷ್ಯ ನಿರೂಪಿಸಿದರು.










