







ಸ್ವಾತಂತ್ರ್ಯ ದಿನ ಬಂತೆಂದರೆ ಭಾರತೀಯರಾದ ನಮ್ಮ ಪಾಲಿಗೆ ಸಂತಸದ ಹಬ್ಬ.ಈ ಹಬ್ಬವು ಶಾಲೆ ಕಾಲೇಜು,ಸರಕಾರಿ ಇಲಾಖೆಯ ಗ್ರಾಮ ಪಂಚಾಯತ್,ಜಿಲ್ಲಾ ಪಂಚಾಯತ್,ತಾಲೂಕ್ ಕಚೇರಿ ಮುಂತಾದ ಸ್ಥಳಗಳಲ್ಲಿ ಮಾತ್ರ ಧ್ವಜಾರೋಹಣ ಗೈದು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರೆ ಸಾಲದು ಇದು ಪ್ರತೀ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಅರಳಿಸಿ ಸಂತಸ ಪಡುವ ಹಬ್ಬವಾಗಬೇಕು.ಈ ದಿನದಂದು ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ಸೇರಿ ಸಂಭ್ರಮ ಪಡುವ ದಿನ. ಈ ಹಬ್ಬ ಬಹು ಸಂಸ್ಕೃತಿಯ ಮತ್ತು ಏಕತೆಯ ಪ್ರತೀಕವಾಗಿದೆ.ಯಾಕೆಂದರೆ ಭಾರತ ದೇಶ ಬಹು ಭಾಷೆಯನ್ನು ಹೊಂದಿದೆ,ವಿವಿಧ ಸಂಪ್ರದಾಯ,ಧರ್ಮಾಚರಣೆಗಳನ್ನು ಆಚರಿಸುತ್ತಿದೆ.ಬೇರೆ ಬೇರೆ ವಂಶಗಳ ಜನರು ನಮ್ಮಲ್ಲಿದ್ದಾರೆ.ಆದರೆ ಸ್ವಾತಂತ್ರ್ಯ ಹೋರಾಟ ಎಲ್ಲರಿಗೂ ಸಮಾನವಾದ ಸಮ ರೀತಿಯ ಹಕ್ಕುಗಳನ್ನು ಒದಗಿಸುವ ಮಹತ್ವವನ್ನು ಹುಟ್ಟು ಹಾಕಿದೆ.ಸ್ವಾತಂತ್ರ್ಯ ದಿನವೆoಬುದು ಪ್ರಜೆಗಳ ಶಕ್ತಿ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಮಹತ್ವದ ದಿನವಾಗಿದೆ.


ಸ್ವಾತಂತ್ರೋತ್ತರ ಭಾರತದ ಬೆಳವಣಿಗೆ ಮತ್ತು ಎದುರಿಸಿದ ಸವಾಲುಗಳು ಭಾರತವು ಸ್ವಾತಂತ್ರ್ಯ ಪಡೆದ ನಂತರದಲ್ಲಿ ಪ್ರಜೆಗಳೇ ಪ್ರಜೆಗಳಿಂದ ವ್ಯಕ್ತಿ ಯನ್ನು ಆರಿಸುವ ಸಾಂವಿಧಾನಿಕ ವ್ಯವಸ್ಥೆಯ ದಾರಿಯನ್ನು ರೂಪಿಸಿತು.ನಂತರದಲ್ಲಿ ಸಂವಿಧಾನ,ಸಾಮಾಜಿಕ ನ್ಯಾಯ,ಆರ್ಥಿಕ ಸ್ವಾವಲoಬನೆ ಹೀಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕೂಡ ಭಾರತ ಸಾಧನೆಗಳನ್ನು ಮಾಡಿದೆ.ಹೀಗಿದ್ದರೂ ಕೂಡ ನಂತರದ ದಿವಸಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು.ಅನ್ಯಾಯ,ಅನಾಚಾರ,ಅಕ್ರಮ ಸಾಮಾಜಿಕ ಬಿಕ್ಕಟ್ಟು ಧಾರ್ಮಿಕ ಭಾಷಾ ಸಂಘರ್ಷಗಳು ನಮ್ಮ ದೇಶದ ಅಭಿವೃದ್ಧಿಗೆ ಅಡೆತಡೆ ಗಳಾಗಿದ್ದವು.ಆದರೂ ಕೂಡ ಜನರು ಮತ್ತು ಸರಕಾರ,ರಾಷ್ಟ್ರದ ಎಲ್ಲಾ ಶಕ್ತಿಗಳು ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಂಡು ದೇಶವನ್ನು ಸದೃಢವಾಗುವಂತೆ ಮುನ್ನಡೆಸುತ್ತಿದ್ದಾರೆ.



ಸ್ವಾತಂತ್ರ್ಯ ದಿನಾಚರಣೆಯ ದಿನ ಸ್ವಾತಂತ್ರ್ಯ ಕ್ಕಾಗಿ ಝಾನ್ಸಿ ರಾಣಿ ಲಕ್ಷ್ಮಿಬಾಯಿ,ಕಿತ್ತೂರು ರಾಣಿ ಚೆನ್ನಮ್ಮ,ರಾಮಕೃಷ್ಣ ಪರಮಹoಸ,ಸ್ವಾಮಿ ವಿವೇಕಾನಂದ,ಮಹಾಯೋಗಿ ಅರವಿಂದ,ಲಾಲಾ ಲಜಪತ ರಾಯ್,ರವೀಂದ್ರ ನಾಥ್ ಠಾಗೂರ್,ಬಾಲ ಗಂಗಾಧರ್ ತಿಲಕ್, ಸರ್ದಾರ್ ಪಟೇಲ್,ವಿನೋಭಾ ಬಾವೆ,ಸರೋಜಿನಿ ನಾಯ್ಡು,ಮಂಗಲ್ ಪಾಂಡೆ,ರಾಜಗುರು ಸುಖದೇವ್, ಸುಭಾಶ್ಚಂದ್ರ ಬೋಸ್ ಮೊದಲಾದ ವೀರರು ಹೋರಾಟ ಮಾಡಿದ ಫಲವಾಗಿ ದೇಶ ಸ್ವಾತಂತ್ರ್ಯವನ್ನು ಪಡೆದಿದೆ.ಈ ವೀರ ಪುತ್ರರ ದೀರ್ಘ ನಿರಂತರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯದ ಕನಸು ನನಸಾಗಿರುವುದು ಸಂತಸದ ಸಂಗತಿಯಾಗಿದೆ.
ಸ್ವಾತಂತ್ರ್ಯ ಅನ್ನುವುದು ನಮ್ಮ ದೇಶದ ಯೋಧರ ವೀರರ ಬಲಿದಾನದ ಸ್ಮರಣೆ ಮತ್ತು ವೀರ ಯೋಧರನ್ನು ಗೌರವಿಸುವ ದ್ಯೋತಕ.ಇದು ನಮ್ಮೆಲ್ಲರಿಗೂ ಜವಾಬ್ದಾರಿಗಳನ್ನು ನೆನಪಿಸುತ್ತದೆ.ಭಾರತದ ಪ್ರಜೆಗಳಾದ ನಾವು ದೇಶದ ಪ್ರಗತಿಗೆ ಕಾಯ,ವಾಚ ಮತ್ತು ಮನ:ಪೂರ್ವಕವಾಗಿ ದೇಶದ ಏಕತೆ ಮತ್ತು ಶಾಂತಿಯ ಪ್ರತಿಷ್ಟಾಪಕರಾಗಿ ಮುಂದೆ ಬರಬೇಕಾಗಿದೆ.ಇಂದಿನ ಯುವ ಜನಾಂಗ ಸ್ವಾತಂತ್ರ್ಯದ ಮೌಲ್ಯಗಳನ್ನು ಅರಿಯಬೇಕು,ಜಾಗೃತ ನಾಗರಿಕನಾಗಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಸಮರ್ಥ ಶಕ್ತಿ ಶಾಲಿಯಾದ ಸದೃಢ ರಾಷ್ಟ್ರವನ್ನಾಗಿ ಹೊರಹೊಮ್ಮವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು.ಶಿಕ್ಷಣ ಕ್ಷೇತ್ರ,ತಂತ್ರಜ್ಞಾನ,ಪರಿಸರ ಸಂರಕ್ಷಣೆ,ಮತ್ತು ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶದ ಬೆಳವಣಿಗೆಗೆ ತಮ್ಮ ಸೇವೆಯನ್ನು ನೀಡಬೇಕಾಗಿದೆ.
ಸ್ವಾತಂತ್ರ ದಿನಾಚರಣೆ ಅನ್ನುವುದು ನಮ್ಮ ದೇಶದ ಇತಿಹಾಸವನ್ನು ನೆನಪಿಸುವ ದಿನ ಮಾತ್ರವಲ್ಲ,ಅದು ದೇಶದ ಭವಿಷ್ಯ ನಿರ್ಮಾಣದ ಪ್ರೇರಣಾ ದಿನವೂ ಆಗಿದೆ.ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ನಮನ ಸಲ್ಲಿಸುವ ಮೂಲಕ,ಅವರ ಬಲಿದಾನ ಅನುದಿನವೂ ಸ್ಮರಿಸಬೇಕು,ಭಾರತವನ್ನು ಜಗತ್ತಿನ ಅತ್ಯುತ್ತಮ ರಾಷ್ಟ್ರವನ್ನಾಗಿ ಬದಲಾಯಿಸುವ,ಪರಿವರ್ತಿಸುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿರಬೇಕು.ಒಟ್ಟಿನಲ್ಲಿ ನಮ್ಮ ರಾಷ್ಟ್ರ ನಿರ್ಮಾಪಕರ ಕನಸುಗಳನ್ನು ನನಸು ಮಾಡಲು ಸಹೋದರತ್ವ ಹಾಗು ಸಾಮರಸ್ಯ ಭಾವದಿಂದ ಮುನ್ನಡೆದು,ರಾಷ್ಟ್ರವನ್ನು ನಿರ್ಮಿಸುವ,ರಾಷ್ಟ್ರವನ್ನು ರಕ್ಷಿಸುವ ಪ್ರತಿಜ್ಞೆಯನ್ನು ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತೆಗೆದುಕೊಂಡಾಗ ಮಾತ್ರ ನಾವು ನಮ್ಮ ವೀರರಿಗೆ ಸಲ್ಲಿಸಿದ ಗೌರವಕ್ಕೆ ಅರ್ಥ ಬರುತ್ತದೆ.”ಜೈ ಭಾರತ್ ಮಾತಾ “
ಬರಹ : ಸತೀಶ್ ಇರ್ದೆ ಉಪನ್ಯಾಸಕರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಪುತ್ತೂರು











