







ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಔಚಿತ್ಯಪೂರ್ಣವಾಗಿ ಆಚರಿಸಲಾಯಿತು.


ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ರವೀಂದ್ರ ಪಟಾರ್ತಿಯವರು ನೆರವೇರಿಸಿದರು. ಮುಖ್ಯ ಅತಿಥಿಗಳ ನೆಲೆಯಲ್ಲಿ ಡಾ. ರಾಜಾರಾಮ್ ಕೆ.ಬಿ. ದಂತ ವೈದ್ಯರು ಉಪ್ಪಿನಂಗಡಿ ಇವರು ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಮಾದಕ ವಸ್ತುಗಳಿಂದ ದೂರ ಉಳಿದು ಉತ್ತಮ ಶಿಕ್ಷಣವನ್ನು ಪಡೆದು ಭಾರತದ ಸತ್ಪ್ರಜೆಗಳಾಗಬೇಕೆಂದು ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಗಣಪತಿ ಭಟ್ ರವರು ಆಗಮಿಸಿರುವ ಎಲ್ಲರನ್ನು ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ಚಕ್ರಪಾಣಿ ಎ.ವಿ. ರವರು ಸರ್ವರನ್ನು ವಂದಿಸಿದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಮ್ಮಬ್ಬ ಶೌಕತ್ ಅಲಿ, ಶ್ರೀಧರ ಮಠಂದೂರು, ಷಣ್ಮುಖ ದೇವಸ್ಥಾನ ಉಳತೋಡಿಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಪಡ್ಯೋಟ್ಟು, ಮಂಜುಶ್ರೀ ಭಜನಾ ಮಂದಿರದ ಅಧ್ಯಕ್ಷರಾದ ಚಂದ್ರಶೇಖರ, ಬಾಲಚಂದ್ರ ಗುಂಡ್ಯ, ನಿತಿನ್ ತಾರಿತ್ತಡಿ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ದಾನಿಗಳಾದ ಲೋಕೇಶ್ ಫೆಲತ್ತೋಡಿ ಹಾಗೂ ಶ್ರೀಮತಿ ರಮ್ಯಜ್ಯೋತಿ ಅವರ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.



ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಗಣಪತಿ ಭಟ್ ರವರು ವಹಿಸಿದ್ದರು. ನಾಡಗೀತೆಯೊಂದಿಗೆ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ವಿದ್ಯಾರ್ಥಿಗಳಿಂದ ಭಾಷಣ ನಡೆಯಿತು. ಇತಿಹಾಸ ಸಂಘದಿಂದ ವಿದ್ಯಾರ್ಥಿಗಳು ರಚಿಸಿದ ವಿವಿಧ ಬಿತ್ತಿ ಪತ್ರಿಕೆಗಳ ಅನಾವರಣ ಅತಿಥಿಗಳಿಂದ ನೆರವೇರಿಸಲಾಯಿತು. ಸಮಾಜವಿಜ್ಞಾನ ಶಿಕ್ಷಕಿ ಶ್ರೀಮತಿ ಲಲಿತಾ ಕೆ. ರವರು ಸ್ವಾತಂತ್ರ್ಯೋತ್ಸವದ ದಿಕ್ಸೂಚಿ ಭಾಷಣ ಗೈದು ಸ್ವಾತಂತ್ರ ಹೋರಾಟದ ವೀರಗಾಥೆಯನ್ನು ವಿದ್ಯಾರ್ಥಿಗಳಿಗೆ ಮನನ ಮಾಡಿಸಿದರು. ಆಧುನಿಕ ಭಾರತದ ಸಾಧನೆ ಹಾಗೂ ಯುವ ಪೀಳಿಗೆಯು ದೇಶಕ್ಕೆ ಸಲ್ಲಿಸಬಹುದಾದ ಕರ್ತವ್ಯದ ಬಗ್ಗೆ ಪ್ರೇರಣೆಯ ನುಡಿಗಳನ್ನಾಡಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಸ್ಥಾಪಕ ಅಧ್ಯಕ್ಷರೂ, ಮಾಜಿ ಶಾಸಕರೂ ಆದಂತಹ ಸಂಜೀವ ಮಠಂದೂರು ರವರು ವಿದ್ಯಾರ್ಥಿಗಳು ಭಾರತದ ಉತ್ತಮ ಭಾವಿ ಪ್ರಜೆಗಳಾಗಿ ರೂಪಗೊಂಡು ಉತ್ತಮ ನಾಯಕರಾಗಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು, ಸಾಧನೆಗೈದು, ಊರಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ರವೀಂದ್ರ ಪಟಾರ್ತಿಯವರು ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀಮತಿ ಗೀತಾ ದಾಸರ ಮೂಲೆ, ಹಮ್ಮಬ್ಬ ಶೌಕತ್ ಅಲಿ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಮತಿ ಶುಭ, ಭಾಸ್ಕರ, ಸೀತಾರಾಮ, ಕೃಷ್ಣಪ್ಪ, ಗಿರಿಜಾ, ಶ್ರೀಮತಿ ಸ್ಮಿತಾ ,ಭವಾನಿ ಉಪಸ್ಥಿತರಿದ್ದರು. ಗಣಿತ ಶಿಕ್ಷಕಿ ಉಷಾಕಿರಣ ರೈ. ಡಿ. ಸ್ವಾಗತಿಸಿ, ವಿಜ್ಞಾನ ಶಿಕ್ಷಕರಾದ ಮನೋಹರ ಎಂ ವಂದಿಸಿದರು. ಹಿಂದಿ ಶಿಕ್ಷಕಿ ಕುಮಾರಿ ಆರತಿ ವೈ.ಡಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ವಸಂತ ಕುಮಾರ್ ಪಿ. ಶ್ರೀಮತಿ ಮಲ್ಲಿಕಾ ಐ. ಹಾಗೂ ಶ್ರೀಮತಿ ಸುಧಾ ಸಹಕರಿಸಿದರು.










