ಸಿರಿಕಡಮಜಲು ಕೃಷಿಕ್ಷೇತ್ರದಲ್ಲಿ ದೇಶಭಕ್ತ ಎನ್‌.ಎಸ್‌. ಕಿಲ್ಲೆ 125ನೇ ಜನ್ಮ ವರ್ಷ ಸಂಭ್ರಮ

0

ಸ್ವಾತಂತ್ರ್ಯ ದಿನಾಚರಣೆ – ಮಾಜಿ ಸೈನಿಕರಿಗೆ ಗೌರವ ಸನ್ಮಾನ, ರಂಗಕಲಾ ಸನ್ಮಾನ

ಕಿಲ್ಲೆಯವರ ಆದರ್ಶ ಪಾಲನೆಯಾದಾಗ ಅವರ ತ್ಯಾಗಕ್ಕೆ ಬೆಲೆ ಬರುತ್ತದೆ – ಡಾ.ಯು.ಪಿ. ಶಿವಾನಂದ
ಕಿಲ್ಲೆಯವರಂತಹ ಮನಸ್ಸು ನಮ್ಮಲ್ಲಿಯೂ ಹುಟ್ಟಲಿ – ಕುಂಬ್ರ ದುರ್ಗಾಪ್ರಸಾದ್‌ ರೈ
ಕಿಲ್ಲೆಯವರ ಆತ್ಮಕ್ಕೆ ಸಂತೋಷವಾಗಿರಬಹುದು – ಪ್ರಸನ್ನ ಕುಮಾರ್‌ ಮಾರ್ತ
ನನಗೆ ದೊರೆತಿರುವ ಯೋಗ ಭಾಗ್ಯ – ಕಡಮಜಲು ಸುಭಾಸ್‌ ರೈ

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎನ್‌.ಎಸ್‌. ಕಿಲ್ಲೆಯವರ 125ನೇ ಜನ್ಮ ವರ್ಷ ಸಂಭ್ರಮದ ಅಂಗವಾಗಿ ರಾಷ್ಟ್ರದ 80ನೇ ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ ದೇಶಭಕ್ತ ಎನ್‌.ಎಸ್‌. ಕಿಲ್ಲೆ ಪ್ರತಿಷ್ಟಾನದ ವತಿಯಿಂದ ʻಕಿಲ್ಲೆ ಸಂಸ್ಮರಣೆ, ಮಾಜಿ ಸೈನಿಕರಿಗೆ ಗೌರವ ಸನ್ಮಾನ, ರಂಗಕಲಾ ಸನ್ಮಾನʼ ಕಾರ್ಯಕ್ರಮವು ಆ. 15 ರಂದು ಸಿರಿಕಡಮಜಲು ಕೃಷಿಕ್ಷೇತ್ರ – ಕಿಲ್ಲೆ ನಿವಾಸದಲ್ಲಿ ಜರಗಿತು.

ಕಿಲ್ಲೆಯವರ ಆದರ್ಶ ಪಾಲನೆಯಾದಾಗ ಅವರ ತ್ಯಾಗಕ್ಕೆ ಬೆಲೆ ಬರುತ್ತದೆ – ಡಾ.ಯು.ಪಿ. ಶಿವಾನಂದ
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ರವರು ʻದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ನಮ್ಮನ್ನು ಗತಿಸಿದ ಹಿರಿಯರ ಸಂಸ್ಮರಣೆ ಜೊತೆಗೆ ಅವರ ಆದರ್ಶವನ್ನು, ತತ್ವ ಸಿದ್ದಾಂತವನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡಾಗ ನಿಜಾರ್ಥದಲ್ಲಿ ಅವರ ತ್ಯಾಗಕ್ಕೆ ಬೆಲೆ ಬರುತ್ತದೆ. ನಾವು ಇಂದು ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಬೇಕಾದರೆ ಅದಕ್ಕೆ ಕಾರಣಕರ್ತರು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರು. ಅವರ ತ್ಯಾಗದ ಜೀವನ ಮತ್ತು ಇಂದಿನ ಅಧಿಕಾರಶಾಹಿ ಸ್ವಾತಂತ್ರ್ಯದ ಮಧ್ಯೆ ಬಹಳ ವ್ಯತ್ಯಾಸ ಕಾಣುತ್ತಿದೆ. ಸುಲಿಗೆ ಮಾಡುವ, ದರೋಡೆ ಮಾಡುವ ಜನರಿಗೆ ಇಂದಿನ ಸಮಾಜದಲ್ಲಿ ಬೆಲೆ ಬರದಂತಾಗಬೇಕಾದರೆ ಕಿಲ್ಲೆಯವರಂತಹ ತ್ಯಾಗದ ಜೀವನವನ್ನು ಜನರ ಮುಂದೆ ತೆರೆದಿಡಬೇಕು. ಆಗ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ. ಹಣವೇ ಮುಖ್ಯವಲ್ಲ ಎಂಬುದನ್ನು ಸಮಾಜಕ್ಕೆ ಸಂದೇಶ ಕೊಡುವ ಕಾರ್ಯ ಇಂದಿನ ಕಾರ್ಯಕ್ರಮದಲ್ಲಾಗಿದೆ. ಈ ಆಶಯವನ್ನು ಈಡೇರಿಸುವಲ್ಲಿ ಕಡಮಜಲು ಸುಭಾಸ್‌ ರೈಯವರು ಇಂದು ತಮ್ಮ ಮನೆಯಲ್ಲಿ ಮಾಜಿ ಸೈನಿಕರಿಗೆ, ಕಲಾ ಪ್ರತಿಭೆಗೆ ಗುರುತಿಸಿ ಗೌರವಿಸಿರುವಂತೆ ಸಮಾಜದ ಎಲ್ಲರೂ ಮಾಡಿದಾಗ ಸಮಾಜ ತನ್ನಿಂದ ತಾನೇ ಬೆಳೆಯುತ್ತದೆʼ ಎಂದು ಹೇಳಿ ಸುದ್ದಿ ಪತ್ರಿಕೆಯಲ್ಲಿ ನೀವೆಲ್ಲರೂ ಇರುವ ಕಾರಣದಿಂದ ಇಂದು ಪತ್ರಿಕೆ ಬೆಳೆದಿದೆ. ಮರೆಯಾದ ಮರೆಯಲಾಗದ ಸಾಧಕರ ವಿಶೇಷ ಅಂಕಣದಲ್ಲಿ ಕಿಲ್ಲೆಯವರ ಬಗೆಗಿನ ಸಂದರ್ಶನ ಮತ್ತು ಲೇಖನವನ್ನು ಕೊಡಲಾಗುತ್ತದೆʼ ಎಂದರು.


ಮಾಜಿ ಸೈನಿಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಮೇಶ್‌ ರೈ ಬೋಳೋಡಿಯವರಿಗೆ ಸನ್ಮಾನ ನಡೆಯಿತು. ಸನ್ಮಾನಕ್ಕೆ ಉತ್ತರಿಸಿದ ರಮೇಶ್‌ ರೈಯವರು ʻಈ ಪರಿಸರ ನಮಗೆ ಅತ್ಯಂತ ಹತ್ತಿರದ ಒಡನಾಟದ ಪರಿಸರವಾಗಿದೆ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂದಾಗ ಇಲ್ಲಿನ ನನ್ನ ಒಡನಾಡಿಗಳ ಗೌರವ ದೊರೆತಿರುವುದು ಬಹಳ ಖುಷಿಯಾಗಿದೆ. ಕಿಲ್ಲೆಯವರ ಕುಟುಂಬಿಕರು, ಸಂಬಂಧಿಕರ ಜೊತೆ ಸೇರಲು ದೊರೆತಿರುವುದು ನನ್ನ ಭಾಗ್ಯ, ಈ ಸನ್ಮಾನ ನನಗೆ ತೃಪ್ತಿ ತಂದಿದೆ. ಎಂದು ಹೇಳಿ ತಮ್ಮ ಅನುಭವ ಹಂಚಿಕೊಂಡರು.


ರಂಗಕಲಾ ಪ್ರವೀಣೆಗೆ ಸನ್ಮಾನ
ಕಿಲ್ಲೆಯವರ ಮೊಮ್ಮಗ ಎಲ್‌ಐಸಿ ಅಭಿವೃದ್ದಿ ಅಧಿಕಾರಿ ರಾಜೇಶ್‌ ಹೆಗ್ಡೆಯವರ ಪುತ್ರಿ, ಭರತನಾಟ್ಯ ರಂಗಕಲಾ ಪ್ರವೀಣೆ ಕು. ರಾಶಿ ಆರ್.‌ ಹೆಗ್ಡೆಯವರಿಗೆ ರಂಗಕಲಾ ಸನ್ಮಾನ ನಡೆಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು ರಾಶಿ ಹೆಗ್ಡೆಯವರು ʻಭರತನಾಟ್ಯ ಒಂದು ಭಾವ ರಾಗದ ಸಂಗಮ. ಆಧುನಿಕ ಜಗತ್ತಿನಲ್ಲಿ ಎಷ್ಟು ಮುಂದುವರಿದರೂ ಸಂಸ್ಕೃತಿ ಪರಂಪರೆಯನ್ನು ಮರೆಯಲು ಸಾಧ್ಯವಿಲ್ಲ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆʼ ಎಂದರು.
ಭಾರತೀಯ ಭೂಸೇನೆಯ ಮಾಜಿ ಸೈನಿಕ ಇರಾ ಸಂಪಿಲ ರಾಮಯ್ಯ ಶೆಟ್ಟಿಯವರನ್ನು ಗೌರವಿಸಲಾಯಿತು.


ಕಿಲ್ಲೆಯವರಂತಹ ಮನಸ್ಸು ನಮ್ಮಲ್ಲಿಯೂ ಹುಟ್ಟಲಿ – ಕುಂಬ್ರ ದುರ್ಗಾಪ್ರಸಾದ್‌ ರೈ
ಕಿಲ್ಲೆ ಸಂಸ್ಮರಣೆ ಮಾಡಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್‌ ರೈಯವರು ʻಕಿಲ್ಲೆಯವರದ್ದು ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಮಾತ್ರವಲ್ಲ. ಒಂದು ಭಾವಪೂರ್ಣ ಮತ್ತು ಅರ್ಥಪೂರ್ಣ ಬದುಕು ಅವರದ್ದಾಗಿತ್ತು. ʻಪತ್ರಿಕೆ, ಪುಸ್ತಕ ಮುದ್ರಣದ ಕಡು ಕಾಠಿಣ್ಯದ ಸಮಯದಲ್ಲಿ ಅಂದರೆ ಸ್ವಾತಂತ್ರ್ಯಪೂರ್ವದಲ್ಲಿಯೇ ಸರ್ವೋದಯ ಪತ್ರಿಕೆ ನಡೆಸಿದ್ದ ಕಿಲ್ಲೆಯವರ ಸ್ವಾತಂತ್ರ್ಯದ ಕಂಪನ್ನು ನಾವು ನೋಡಬಹುದಾಗಿದೆ. ಗಾಂಧೀಜಿಯವರ ಭಾಷಣದಿಂದ ಪ್ರೇರೇಪಿತರಾಗಿ ಅವರು ಸ್ವಾತಂತ್ರ್ಯದ ಒಲವು ಹೆಚ್ಚಿಸಿಕೊಂಡು ತನ್ನೊಡಲನ್ನು ಅದಕ್ಕೆ ನೀಡಿದವರು. ನೆಹರೂರವರ ಹಿಂದಿ ಇಂಗ್ಲೀಷ್‌ ಭಾಷಣವನ್ನು ನಿರರ್ಗಳವಾಗಿ ಕನ್ನಡದಲ್ಲಿ ಅನುವಾದ ಮಾಡಬೇಕಾದರೆ ಕಿಲ್ಲೆಯವರ ಬಹುಭಾಷಾ ಪಾರಮ್ಯತೆಯನ್ನು ಕಾಣಬಹುದು. ಆ ತೆರನಾದ ವ್ಯಕ್ತಿತ್ವ ಆ ಕಾಲದಲ್ಲಿ ಅಷ್ಟು ಬೆಳೆದು ಗುರುತಿಸಲ್ಪಡಬೇಕಾದರೆ ಅವರ ತ್ಯಾಗ ಪರಿಶ್ರಮವನ್ನು ನಾವು ಸ್ಮರಿಸಲೇಬೇಕು. ಈ ಕಾರ್ಯಕ್ರಮವನ್ನು ನೋಡಲು ಅವರು ಇಲ್ಲಿಗೆ ಇಂದು ಬಂದೇ ಬಂದಿರುತ್ತಾರೆʼ ಎಂದು ಹೇಳಿದರು. ʻಅತ್ಯಲ್ಪ ಜೀವಿತಾವಧಿಯಲ್ಲಿ ಅವರು ಸಮಗ್ರ ಕ್ಷೇತ್ರದಲ್ಲಿ ಗುರುತಿಸಿ ಆದರ್ಶರಾಗಿ ಮೆರೆದವರು. ಅವರ ಭಾವೈಕ್ಯತೆಯ ಬದುಕು ಮತ್ತು ಮನಸ್ಸು ನಮ್ಮೆಲ್ಲರಲ್ಲಿ ಹುಟ್ಟಲಿʼ ಎಂದು ಕುಂಬ್ರ ಆಶಿಸಿದರು.


ಕಿಲ್ಲೆಯವರ ಆತ್ಮಕ್ಕೆ ಸಂತೋಷವಾಗಿರಬಹುದು – ಪ್ರಸನ್ನ ಕುಮಾರ್‌ ಮಾರ್ತ
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಕೃಷಿಕ ಪ್ರಸನ್ನ ಕುಮಾರ್‌ ಮಾರ್ತರವರು ʻಸ್ವಾತಂತ್ರ್ಯ ಉಳಿಯಬೇಕಾದರೆ ನಮ್ಮ ದೇಶದ ಗಡಿ ಭದ್ರವಾಗಿರಬೇಕಾದರೆ ಸೈನಿಕರು ಮುಖ್ಯ. ಅಂತಹ ಸೈನಿಕರನ್ನು ಗೌರವಿಸುವ ಕಾರ್ಯವನ್ನು ಕಡಮಜಲು ಸುಭಾಸ್‌ ರೈಯವರು ನಡೆಸಿ, ಕಲೆ ಸಂಸ್ಕೃತಿಗೆ ಕೊಡುಗೆ ನೀಡಿದ ಪ್ರತಿಭೆಗೆ ಗೌರವಿಸಿರುವುದು ಕಿಲ್ಲೆಯವರ ಆತ್ಮಕ್ಕೆ ಭಾರೀ ಸಂತೋಷವಾಗಿರಬಹುದು. ಸ್ವಾತಂತ್ರ್ಯದ ಜೊತೆಗೆ ಸ್ವರಾಜ್ಯಕ್ಕಾಗಿ ಶ್ರಮಿಸುತ್ತಿರುವವರು ಡಾ.ಯು.ಪಿ. ಶಿವಾನಂದರು. ಸ್ವರಾಜ್ಯ ಇರುತ್ತಿದ್ದರೆ ಲಂಚ ಭ್ರಷ್ಟಾಚಾರದ ವಿರುದ್ದ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಬೇಕಾದ ಅನಿವಾರ್ಯತೆ ಒದಗುತ್ತಿರಲಿಲ್ಲ. ಸ್ವರಾಜ್ಯದಲ್ಲಿ ಜನರೇ ಜನರನ್ನು ಆಡಳಿತ ನಡೆಸುತ್ತಿದ್ದರು. ಅಧಿಕಾರಿಗಳ ಆಡಳಿತ ಇರುತ್ತಿರಲಿಲ್ಲ. ಇಂದು ಯಾವುದೇ ಕೆಲಸಕ್ಕೆ ಸರಕಾರಿ ಕಚೇರಿಗಳಲ್ಲಿ ಸಾವಿರ ಕಾನೂನಿನ ಅಡ್ಡಿಯಾಗಿರುವುದೇ ಲಂಚ ಭ್ರಷ್ಟಾಚಾರ ಬೆಳೆಯಲು ಕಾರಣವಾಗಿದೆ. ಕಾನೂನಿನ ಸರಳೀಕರಣವಾದರೆ ಲಂಚ ಭ್ರಷ್ಟಾಚಾರ ನಿರ್ಮೂಲನೆಗೊಳಿಸಬಹುದುʼ ಎಂದರು. ಯು.ಪಿ. ಶಿವಾನಂದರ ಈ ಹೋರಾಟದಲ್ಲಿ ಜನರು ವಿಶೇಷವಾಗಿ ಯುವಜನರು ನಿಮ್ಮ ಜೊತೆ ಇರುತ್ತಾರೆʼ ಎಂದು ಭರವಸೆ ವ್ಯಕ್ತಪಡಿಸಿದರು.


ನನಗೆ ದೊರೆತಿರುವ ಯೋಗ ಭಾಗ್ಯ – ಕಡಮಜಲು ಸುಭಾಸ್‌ ರೈ
ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಕಿಲ್ಲೆ ಪ್ರತಿಷ್ಟಾನದ ಅಧ್ಯಕ್ಷ, ಕಿಲ್ಲೆ ಸೋದರಳಿಯ ತುಳುನಾಡ ಸಿರಿ ಕಡಮಜಲು ಸುಭಾಸ್‌ ರೈಯವರು ʻಕಿಲ್ಲೆಯವರ ಚಾಕರಿ ಮಾಡುವವನು ನಾನು. ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಣೆ ಮಾಡುವುದರ ಮೂಲಕ ಅವರ ಆತ್ಮಕ್ಕೆ ಸದ್ಗತಿ ದೊರಕಿಸಿಕೊಡುವುದು ನನ್ನ ಕರ್ತವ್ಯವಾದರೂ ಅದರ ಜೊತೆಗೆ ಅವರ ಆದರ್ಶ ಮುಂದಿನ ಸಮಾಜಕ್ಕೂ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಅವರ ಜನ್ಮ ವರ್ಷಾಚರಣೆ ಕಾರ್ಯಕ್ರಮಗಳನ್ನು ಬೇರೆ ಬೇರೆ ವರ್ಷಗಳಲ್ಲಿ ವೈವಿಧ್ಯಯಮವಾಗಿ ನಡೆಸಲಾಗಿದೆ. ಕಿಲ್ಲೆಯವರು ಸ್ವಾತಂತ್ರ್ಯಪೂರ್ವದಲ್ಲಿ ನಡೆಸುತ್ತಿದ್ದ ಸರ್ವೋದಯ ಪತ್ರಿಕೆಯನ್ನು ಅವರು ಕೊನೆಯವರಿಗೂ ನಡೆಸಿದ್ದರು. ಸರ್ವೋದಯ ಪತ್ರಿಕೆಯನ್ನು ಸುದ್ದಿಯಲ್ಲಿ ಡಾ. ಶಿವಾನಂದರು ಮರುಮುದ್ರಣ ಮಾಡಿ ಕಿಲ್ಲೆಯವರ ತತ್ವ ಸಿದ್ದಾಂತವನ್ನು ಸಮಾಜದ ಮುಂದೆ ತೆರೆದಿಟ್ಟಿದ್ದಾರೆ. ಇಂದು ಮಾಜಿ ಸೈನಿಕರನ್ನು ಕರೆಸಿ ಈ ಮಣ್ಣಿನಲ್ಲಿ ಗೌರವಿಸುತ್ತಿರುವುದು ಕಿಲ್ಲೆಯವರ ಆತ್ಮಕ್ಕೆ ಸಂತಸ ಉಂಟುಮಾಡುವುದರ ಜೊತೆಗೆ ವಿಶೇಷವಾಗಿ ನನಗೆ ದೊರೆತಿರುವ ಯೋಗ ಭಾಗ್ಯ ಎಂದು ನಂಬಿದ್ದೇನೆ’ ಎಂದರು.


ಕಿಲ್ಲೆಯವರ ಸ್ಮರಣೆಗೆ ಎರಡು ಯೋಜನೆಗಳು
ಎನ್‌.ಎಸ್‌. ಕಿಲ್ಲೆಯವರ ಸ್ಮರಣೆಗಾಗಿ ಮುಂದಿನ ಎರಡು ಯೋಜನೆಗಳನ್ನು ಕಡಮಜಲು ಸುಭಾಸ್‌ ರೈ ಘೋಷಿಸಿದರು. ʻಕಿಲ್ಲೆರ್‌ ಉಲ್ಲೆರ್‌ʼ ಎಂಬ ಪುಸ್ತಕ ರಚನೆ ಹಾಗೂ ಸುದ್ದಿ ಚಾನೆಲ್‌ನಲ್ಲಿ ʻಮರೆಯಾದ (ಮರೆಯಲಾಗದ) ಸಾಧಕರ ಪರಿಚಯʼ ವಿಭಾಗದಲ್ಲಿ ವಿಡಿಯೋ ಸಂದರ್ಶನ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವಿಶೇಷ ಲೇಖನ ಪ್ರಕಟವಾಗಲಿದೆʼ ಎಂದು ಸುಭಾಸ್‌ ರೈ ಘೋಷಿಸಿದರು.


ಗೌರವ ಉಪಸ್ಥಿತರಿದ್ದ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ. ಜಯರಾಮ ರೈಯವರು ಮಾತನಾಡಿ ʻಕಡಮಜಲು ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದೂ ಕಾರ್ಯಕ್ರಮಕ್ಕೂ ಒಂದು ವಿಶೇಷ ಅರ್ಥವಿರುತ್ತದೆ. ಕಿಲ್ಲೆಯವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನಮ್ಮ ಭಾಗ್ಯʼ ಎಂದು ಭಾವಿಸಿದ್ದೇನೆʼ ಎಂದರು.


ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಹಾಗೂ ಕಿಲ್ಲೆ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಪ್ರಶಾಂತ್‌ ರೈ ಮುಂಡಾಳಗುತ್ತು ಸನ್ಮಾನಿತರ ಬಗ್ಗೆ ಪರಿಚಯ ಮಾಡಿ, ಸನ್ಮಾನ ಪತ್ರ ವಾಚಿಸಿದರು.  ವೀಣಾ ಎಸ್‌. ಶೆಟ್ಟಿ ಪ್ರಾರ್ಥಿಸಿದರು. ಅರುಣಾ ಶಶಿಕುಮಾರ್‌ ಶೆಟ್ಟಿ ಮಂಗಳೂರು ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು. ಪ್ರೀತಿ ಎಸ್‌. ರೈ ಕಡಮಜಲು ಸತ್ಕರಿಸಿದರು.


ವೇದಿಕೆಯಲ್ಲಿ ಕಿಲ್ಲೆ ಪ್ರತಿಷ್ಟಾನದ ಉಪಾಧ್ಯಕ್ಷ ಬೆದ್ರುಮಾರ್‌ ಜೈಶಂಕರ್‌ ರೈ, ಕೋಶಾಧಿಕಾರಿ ಕೆದಂಬಾಡಿ ಬೀಡು ಚಂದ್ರಹಾಸ ಬಲ್ಲಾಳ್‌ ಉಪಸ್ಥಿತರಿದ್ದರು.  
ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬೋಳೋಡಿ, ಕಿಲ್ಲೆ ಕುಟುಂಬಿಕರು, ಬಂಧುಗಳು, ಅಭಿಮಾನಿಗಳು, ಕಿಲ್ಲೆ ಪ್ರತಿಷ್ಟಾನದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೆಳಿಗ್ಗೆ ʻಪ್ರತಿ ಮನೆ ಮನೆ ತ್ರಿವರ್ಣʼ ಪರಿಕಲ್ಪನೆಯಲ್ಲಿ ರಾಷ್ಟ್ರಧ್ವಜ ವಂದನೆ, ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಧ್ಯಾಹ್ನ ಸಹಭೋಜನ ನಡೆಯಿತು.

ʻಸುದ್ದಿʼಯಲ್ಲಿ ಕಿಲ್ಲೆಯವರ ಸರ್ವೋದಯ ಪತ್ರಿಕೆ ಮರುಮುದ್ರಣ – ಕಡಮಜಲು ಸುಭಾಸ್‌ ರೈ
ಎನ್‌.ಎಸ್‌. ಕಿಲ್ಲೆಯವರು ಸರ್ವೋದಯ ಪತ್ರಿಕೆ ಮೂಲಕ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನಮಾನಸದಲ್ಲಿ ಸ್ವಾತಂತ್ರ್ಯದ ಕಿಡಿ ಹಚ್ಚಿದ್ದರು. ಆ ಪತ್ರಿಕೆಯನ್ನು ʻಸುದ್ದಿ ಬಿಡುಗಡೆʼ ಪತ್ರಿಕೆಯಲ್ಲಿ ಮರುಮುದ್ರಣ ಮಾಡುವುದರ ಮೂಲಕ ಸ್ವಾತಂತ್ರ್ಯಾ ಕಾಲದ ಪತ್ರಿಕೆಯನ್ನು ಮತ್ತೊಮ್ಮೆ ಜನರ ಮುಂದಿಡುವ ಕಾರ್ಯವನ್ನು ಡಾ. ಶಿವಾನಂದರು ಮಾಡಿದ್ದರು. ಹಾಗಾಗಿ ಅವರ ಸಂಸ್ಮರಣೆ ಕಾರ್ಯಕ್ರಮದ ದೀಪ ಪ್ರಜ್ವಲಿಸುವ ಯೋಗಭಾಗ್ಯ ಅವರಿಗೆ ದೊರೆತಿದೆʼ ಎಂದರು.

ಲಂಚ, ಭ್ರಷ್ಟಾಚಾರದ ವಿರುದ್ದ ಪ್ರತಿಜ್ಞಾ ವಿಧಿ
ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆಯ ʻಲಂಚ ಭ್ರಷ್ಟಾಚಾರದ ವಿರುದ್ದದ ಆಂದೋಲನದ ಫಲಕವನ್ನು ಕಡಮಜಲು ಸುಭಾಸ್‌ ರೈಯವರಿಗೆ ಹಸ್ತಾಂತರಿಸಲಾಯಿತು. ಕುಂಬ್ರ ದುರ್ಗಾಪ್ರಸಾದ್‌ ರೈ ಫಲಕ ಪ್ರದರ್ಶಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಭೆಯಲ್ಲಿದ್ದವರು ಎದ್ದು ನಿಂತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ʻಸುದ್ದಿʼ ಯಲ್ಲಿ ಬಂದದ್ದೇ ಸತ್ಯ – ಪ್ರಸನ್ನ ಕುಮಾರ್‌ ಮಾರ್ತ
ತನ್ನ ಭಾಷಣದ ವೇಳೆ ಪ್ರಸನ್ನ ಕುಮಾರ್‌ ಮಾರ್ತರವರು ಸುದ್ದಿ ಬಿಡುಗಡೆ ಪತ್ರಿಕೆಯನ್ನು ವಿಶೇಷವಾಗಿ ಉಲ್ಲೇಖಿಸಿ ʻಬೆಳಿಗ್ಗೆ ಚಾ ಕಾಫಿ ಕುಡಿಯದಿದ್ದರೂ, ನಮಗೆ ಸುದ್ದಿ ಪತ್ರಿಕೆ ಬೇಕು. ಅಂದರೆ ಸುದ್ದಿಯಲ್ಲಿ ಬಂದದ್ದೇ ಸತ್ಯʼ ಎಂಬ ವಿಶ್ವಾಸ ನಮ್ಮಲ್ಲಿದೆ. ಸ್ವರಾಜ್ಯಕ್ಕೆ ಬೇಕಾಗಿ ಕೆಲಸ ಮಾಡುತ್ತಿರುವ ಡಾ. ಶಿವಾನಂದರ ಕೆಲಸಕ್ಕೆ ಪುತ್ತೂರು ಮಾತ್ರವಲ್ಲದೇ ಹೊರ ಊರುಗಳಲ್ಲಿರುವವರೂ ಸಹಕಾರ ಕೊಡುತ್ತಿದ್ದಾರೆʼ ಎಂದರು. ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸಗಳಿಗೆ ಸಾವಿರ ಕಾನೂನಿನಗಳಿಂದ ಲಂಚ ಭ್ರಷ್ಟಾಚಾರ ಬೆಳೆದಿದೆ. ಕಾನೂನಿನ ಸರಳೀಕರಣವಾದರೆ ಇದು ನಿರ್ಮೂಲನೆಯಾಗಲಿದೆʼ ಎಂದು ಮಾರ್ತರವರು ಆಶಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here