







ಬೆಳಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ವತಿಯಿಂದ ತುಳುನಾಡಿನ ಸಂಸ್ಕೃತಿ, ಆಚಾರ–ವಿಚಾರ ಹಾಗೂ ಆಟಿ ತಿಂಗಳ ವೈಶಿಷ್ಟ್ಯವನ್ನು ಪರಿಚಯಿಸುವ ‘ಆಟಿ ಕೂಟ’ ಕಾರ್ಯಕ್ರಮವು ಆ.18 ರಂದು ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸರಕಾರಿ ಪದವಿ ಪೂರ್ವ ಕಾಲೇಜು, ಕಾಣಿಯೂರಿನ ಕನ್ನಡ ಉಪನ್ಯಾಸಕರಾದ ಜಗದೀಶ್ ಬಾರಿಕೆ ಭಾಗವಹಿಸಿ, ಆಟಿ ತಿಂಗಳ ಮಹತ್ವ, ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳು, ಆಹಾರ ಪದ್ಧತಿ ಹಾಗೂ ಜನಜೀವನದ ವಿವಿಧ ಆಯಾಮಗಳನ್ನು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ವಿವರಿಸಿದರು. ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಘವ ಎನ್. ವಹಿಸಿದ್ದರು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಕಳುವಾಜೆ, ಸಿಡಿಸಿ ಸದಸ್ಯರಾದ ವೆಂಕಟೇಶ್ ಭಟ್, ಸೀತಾರಾಮ ಗೌಡ ಮುಂಡಾಳ,ಕಾಲೇಜಿನ ವಿದ್ಯಾಭಿಮಾನ ಸಂಘದ ಉಪಾಧ್ಯಕ್ಷ ಅಚ್ಚುತ ಗೌಡ ಕಂಪ ಕಳುವಾಜೆ ಹಾಗೂ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಮಹೇಶ್ ಬಿ.ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಮಧ್ಯಾಹ್ನದ ಉಪಹಾರದ ಸಮಯದಲ್ಲಿ ಸವಿಯುವ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ತುಳುನಾಡಿನ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮಕ್ಕೆ ಕುಮಾರಿ ಲಾವಣ್ಯ ಸ್ವಾಗತಿಸಿದರು ಹಾಗೂ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಹರ್ಷಿತಾ ನಿರ್ವಹಿಸಿದರು.ಆಟಿ ತಿಂಗಳ ಸಂಪ್ರದಾಯ, ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಕಲಾ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ನಡೆದ ಈ ಆಟಿ ಕೂಟ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.










