







ಪುತ್ತೂರು: ನೀರಾವರಿ ಇಲಾಖೆಯ ಜಲಮಾಪಕ, ಉಪ್ಪಿನಂಗಡಿ ಗ್ರಾಮದ ಆರ್ತಿಲ ನಿವಾಸಿ ಬಾಬು ಗೌಡ(62ವ.)ಅವರು ಆ.19ರಂದು ರಾತ್ರಿ ಅನಾರೋಗ್ಯದಿಂದ ನಿಧನರಾದರು.


ಕಡಬ ತಾಲೂಕಿನ ಪೆರಾಬೆ ಗ್ರಾಮದ ಅಗತ್ತಾಡಿ ದಿ| ಸೋಮಪ್ಪ ಗೌಡ ಹಾಗೂ ದಿ| ಲಕ್ಷ್ಮಿ ದಂಪತಿ ಪುತ್ರರಾದ ಬಾಬು ಗೌಡ ಅವರು ಆರಂಭದಲ್ಲಿ ಪೊಳಲಿಯಲ್ಲಿ ನೀರಾವರಿ ಇಲಾಖೆಯಲ್ಲಿ ಜಲಮಾಪಕರಾಗಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಅವರು ಅಲ್ಲಿ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷರಾಗಿ ಹಾಗೂ ಇನ್ನಿತರ ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಬಿ.ಸಿ.ರೋಡ್, ಪೊಳಲಿಯಲ್ಲಿ ಛಾಯಾಗ್ರಾಹಕರಾಗಿಯೂ ಸೇವೆ ಮಾಡುತ್ತಿದ್ದ ಬಾಬು ಗೌಡ ಅವರು ಪೊಳಲಿ ಬಾಬಣ್ಣ ಎಂದೇ ಚಿರಪರಿಚಿತರಾಗಿದ್ದರು. ವಿವಾಹದ ಬಳಿಕ ಉಪ್ಪಿನಂಗಡಿ ಆರ್ತಿಲದಲ್ಲಿ ವಾಸ್ತವ್ಯವಿದ್ದ ಅವರು ಉಪ್ಪಿನಂಗಡಿಯಲ್ಲಿ ಜಲಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿದಿನ ಉಪ್ಪಿನಂಗಡಿಯಲ್ಲಿ ಹರಿಯುವ ನೇತ್ರಾವತಿ ಹಾಗೂ ಕುಮಾರಧಾರ ನದಿಯ ನೀರಿನ ಮಟ್ಟ ತಪಾಸಣೆ ನಡೆಸಿ ನೀರಾವರಿ ಇಲಾಖೆಗೆ ವರದಿ ಸಲ್ಲಿಸುತ್ತಿದ್ದರು. ನಾಲ್ಕು ವರ್ಷದ ಹಿಂದೆ ನಿವೃತ್ತಿಯಾಗಿದ್ದರೂ ಇಲಾಖೆಯಲ್ಲಿ ಜಲಮಾಪಕರ ಕೊರತೆ ಹಿನ್ನೆಲೆಯಲ್ಲಿ ಬಾಬು ಗೌಡ ಅವರೇ ದಿನಕೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ಆ.19ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಅವರಿಗೆ ರಾತ್ರಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಮನೆಯವರು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆತಂದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುತ್ತಿದ್ದಂತೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.



ಆರ್ತಿಲದಲ್ಲಿ ಆರಂಭದಲ್ಲಿ ನೀರಾವರಿ ಇಲಾಖೆಯ ವಸತಿ ಗೃಹದಲ್ಲಿ ವಾಸ್ತವ್ಯವಿದ್ದ ಬಾಬು ಗೌಡ ಅವರು ಆ ಬಳಿಕ ಸ್ವಂತ ಮನೆ ಮಾಡಿದ್ದರು. ಆರ್ತಿಲದಲ್ಲಿ ಭಜನಾ ಮಂದಿರ, ದೇವಸ್ಥಾನಗಳದ ಚಟುವಟಿಕೆಯಲ್ಲೂ ಸಕ್ರೀಯವಾಗಿ ತೊಡಗಿಕೊಂಡಿದ್ದರು. ಮೃತರು ಪತ್ನಿ ಹೇಮಲತಾ, ಪುತ್ರಿಯರಾದ ಪ್ರೇಕ್ಷಿತಾ, ಹರ್ಷಿತಾ, ತುಶ್ವಿತಾ, ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.










