ಇಡ್ಕಿದು ಸೇವಾ ಸಹಕಾರಿ ಸಂಘದ ಮಹಾಸಭೆ

0

  • ರೂ. 923.42 ಕೋಟಿ ವ್ಯವಹಾರ – ರೂ. 2.85ಕೋಟಿ ಲಾಭ – 12% ಡಿವಿಡೆಂಟ್

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ. 923.42 ಕೋಟಿ ವ್ಯವಹಾರ ಮಾಡಿ ರೂ. 2.85ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 12% ಡಿವಿಡೆಂಟ್ ನೀಡಲಾಗವುದು ಎಂದು ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು ತಿಳಿಸಿದರು.

ಉರಿಮಜಲಿನಲ್ಲಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ‘ಶತಾಮೃತ’ದ ಅವರಣದಲ್ಲಿ ಆ.೨೫ರಂದು ನಡೆದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವರ್ಷಾಂತ್ಯಕ್ಕೆ ಸಂಘದಲ್ಲಿ 4185 ‘ಎ’ ತರಗತಿ ಸದಸ್ಯರಿದ್ದು ರೂ.4,42,83,,731ಪಾಲು ಬಂಡವಾಳವಿದೆ. ರೂ.8,76,18,026.8 ವಿವಿಧ ನಿಧಿಗಳಿವೆ. ರೂ.120.68ಕೋಟಿ ಠೇವಣಿ ಇದೆ. ದುಡಿಯುವ ಬಂಡವಾಳ ರೂ.139.86ಕೋಟಿ ಹೊಂದಿದೆ. ಸದಸ್ಯರಿಗೆ ವಿತರಿಸಿದ ಸಾಲಗಳ ಪೈಕಿ ಶೇ.97 ವಸೂಲಾತಿಯಾಗಿದೆ. ಬ್ಯಾಂಕೇತರ ವ್ಯವಹಾರ ಹಾಗೂ ಸೇವಾ ಕಾರ್ಯಗಳಲ್ಲಿ ರೂ.8,52,74,579.88 ವ್ಯಾಪಾರ ಮಾಡಿ 52,82,770.77 ಲಾಭ ಗಳಿಸಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ.

ಡಾ.ಕೃಷ್ಣ ಭಟ್ ಕೊಂಕೋಡಿರವರು ಮಾತನಾಡಿ ಸಹಕಾರಿ ಸಂಘದ ವತಿಯಿಂದ ನಿರ್ಮಾಣವಾಗಿರುವ ‘ಸಹಕಾರಿ ಪಥ’ ಇದು ರಾಜ್ಯದಲ್ಲೇ ಪ್ರಥಮವಾಗಿದೆ. ಇಂತಹ ಸಮಾಜಮುಖಿ ಕೆಲಸಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಕೆಲಸವಾಗಬೇಕು ಎಂದರು.

ಈ ವೇಳೆ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲುರವರು ಮಾತನಾಡಿ ನಾವುಗಳು ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಅದನ್ನು ಗುರುತಿಸಬೇಕಾದವರು ಸದಸ್ಯರುಗಳೆ. ಈ ಸಂಸ್ಥೆ ಸದಸ್ಯರುಗಳ ಆಸ್ತಿ. ಇಂದು ನಾನು ಇದ್ದೇನೆ ನಾಳೆ ಇನ್ನೊಬ್ಬರು ಬರುತ್ತಾರೆ ಆದರೆ ಇದಷ್ಟು ದಿನ ಸಂಘದ ಬೆಳವಣಿಗೆಗಾಗಿ ಶ್ರಮಿಸುವ ಕೆಲಸ ಮಾಡಲಾಗುವುದು.

ಇಡ್ಕಿದು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿರವರು ಮಾತನಾಡಿ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸೂರ್ಯದಲ್ಲಿ ಸಹಕಾರಿ ಪಥ ನಿರ್ಮಾಣವಾಗಿದೆ. ಉಳಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಗ್ರಾಮದ ಜನರ ಏಳಿಗೆಗಾಗಿ ಮಾಡಲಾಗಿದೆ ಇವೆಲ್ಲವನ್ನು ಪ್ರಚಾರ ಮಾಡುವ ಕೆಲಸ ಸದಸ್ಯರುಗಳಿಂದಲೇ ಆಗಬೇಕಿದೆ ಎಂದರು.

ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭರವರು ಮಾತನಾಡಿ ನಮ್ಮ ಸಂಘವು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಸಂತಸ ತಂದಿದೆ. ಇದು ಆಡಳಿತ ಮಂಡಳಿಯ ಅಭಿನಂದನೀಯ ಕೆಲಸ. ಸಂಘವು ಸರಕಾರದ ಪ್ರತಿಯೊಂದೂ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಪ್ರಪುಲ್ಲ ಚಂದ್ರ ಕೋಲ್ಪೆರವರು ಮಾತನಾಡಿ ಈಗಾಗಲೇ ಸೂರ್ಯದಲ್ಲಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸಹಕಾರಿ ಪಥ ನಿರ್ಮಾಣದ ಅಡಿಯಲ್ಲಿ ರಸ್ತೆ ಕಾಂಕ್ರಿಟೀಕರಣ ಮಾಡಲಾಗಿದೆ. ಇದೇ ರೀತಿ ನಮ್ಮ ಗ್ರಾಮದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಲೆಗಳನ್ನು ದತ್ತು ಪಡೆದು ಆ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಈ ವೇಳೆ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲುರವರು ಮಾತನಾಡಿ ಈ ಯೋಚನೆ ನಮ್ಮಲ್ಲಿಯೂ ಇದೆ. ಕುಳ ಹಾಗೂ ಇಡ್ಕಿದು ಗ್ರಾಮಗಳು ನಮ್ಮ ಎರಡು ಕಣ್ಣುಗಳಿದ್ದಂತೆ. ಈಗಾಗಲೇ ಸೂರ್ಯದಲ್ಲಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸಹಕಾರಿ ಪಥ ನಿರ್ಮಾಣವಾಗಿದೆ‌. ಇದೀಗ ಕುಳ ಗ್ರಾಮದಲ್ಲಿ ಸಹಕಾರಿ ಪಥ ನಿರ್ಮಾಣಕ್ಕಾಗಿ ಹತ್ತು ಲಕ್ಷ ರೂಪಾಯಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಕಾಂಕ್ರಿಟೀಕರಣ ನಡೆಯಲಿದೆ. ಸದಸ್ಯರು ಹೇಳಿದಂತೆ ಗ್ರಾಮದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಇಡ್ಕಿದು ಗ್ರಾಮ ಪಂಚಾಯತ್ ಮಾಜಿ‌ ಸದಸ್ಯರಾದ ಚಿದಾನಂದ ಪೆಲತ್ತಿಂಜ ನುಡಿದಂತೆ ನಡೆದ ಆಡಳಿತ ಮಂಡಳಿ. ಕಳಿದ ಭಾರಿ‌ ನಾವು ಕುಳ ಗ್ರಾಮದ ರಸ್ತೆಯನ್ನು ಅಭಿವೃದ್ದಿ ಪಡಿಸುವಂತೆ ಕೇಳಿಕೊಂಡಿದ್ದೆವು. ಮುಂದಿನ ಭಾರಿ ನೀಡುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದರು. ಈ ಭಾರಿ ನಮ್ಮ ಕುಳ ಗ್ರಾಮದಲ್ಲಿ ಸಹಕಾರಿ‌ ಪಥ ನಿರ್ಮಾಣಕ್ಕೆ ೧೦ ಲಕ್ಷ ರೂಪಾಯಿಯನ್ನು ಇಟ್ಟಿರುವುದು ಸಂತಸ ತಂದಿದೆ ಎಂದರು.

ರಮಾನಂದ ಶರ್ಮರವರು ಮಾತನಾಡಿ ಸಂಘದ ಸೂಪರ್ ಬಝಾರ್ ಗಳನ್ನು ಇನ್ನಷ್ಟು ಆಧುನೀಕರಣ ಗೊಳಿಸುವಂತೆ ಸಲಹೆ ನೀಡಿದರು. ಕೇಶವ ಗೌಡ ಮುಂಡ್ರಬೈಲುರವರು ಮಾತನಾಡಿ ಸೂರ್ಯ ಶಾಖೆಯನ್ನು ವಿಸ್ತೃತಗೊಳಿಸಿ ಅದರಲ್ಲಿ ರೇಶನ್ ವ್ಯವಸ್ಥೆಯನ್ನು ಮಾಡಬೇಕು. ಮಾತ್ರವಲ್ಲದೆ ಎಲ್ಲಾ ಕಡೆಗಳಲ್ಲಿಯೂ ಎಟಿಎಂ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಇಡ್ಕಿದು ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಶಿವಪ್ರಸಾದ್ ಕೂವೆತ್ತಿಲರವರು ಮಾತನಾಡಿ ವಿದ್ಯಾಮೃತ ಯೋಜನೆ ಅಡಿಯಲ್ಲಿ ಸಿಇಟಿ ಕೋಚಿಂಗ್ ಸಹಿತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಗಳನ್ನು ನೀಡುವ ಕೆಲಸ ನಮ್ಮ ಸಂಘದಿಂದ ಆಗಬೇಕಿದೆ. ಅದು ನಮ್ಮ ಗ್ರಾಮದ ಹಲವಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಹಾಗೂ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗುವುದು ಎಂದರು. ಜಗನ್ನಾಥ ಸೂರ್ಯರವರು ಮಾತನಾಡಿ ಈಗಾಗಲೇ ಓರ್ವ ಸದಸ್ಯನಿಗೆ ಇರುವ ಲೋನ್ ಮಿತಿಯನ್ನು ಅವರವರ ಅರ್ಹತೆಗೆ ತಕ್ಕಂತೆ ಹೆಚ್ಚು ಮಾಡಬೇಕೆಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ‌ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದರು.‌

ಹಿರಿಯ ಸದಸ್ಯರಿಗೆ ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ತಿರುಮಲೇಶ್ವರ ಭಟ್ ಕೆ.ಎಮ್. ಕೊಂಕೋಡಿ,, ಮೋನಪ್ಪ ಸೂರ್ಯ, ಮೋಂಟ ಗೌಡ ಬಂಗೇರಕೋಡಿ, ಶೇಕಬ್ಬ ಕೋಲ್ಪೆ, ಧರ್ಮಣ್ಣ ನಾಯ್ಕ್ ಕೆ. ಪುಂಡಿಕಾಯಿ, ಚಂದಪ್ಪ ಸಪಲ್ಯ ದೇವಸ್ಯ, ಸಚ್ಚಿದಾನಂದ‌ ಕೆ. ರವರನ್ನು ಸನ್ಮಾನಿಸಲಾಯಿತು.

ಸ್ವಚ್ಚತಾ ಸಿಬ್ಬಂದಿಗಳಿಗೆ ಸನ್ಮಾನ:
ಇಡ್ಕಿದು – ಕುಳ ಗ್ರಾಮದ ಸ್ವಚ್ಚತಾ ಸಿಬ್ಬಂದಿಗಳಾದ ಗಿರೀಶ್ ಮಂಜಗುತ್ತು, ಯಶೋಧ ಅಡ್ಯಾಲು, ರುಕ್ಮಿಣಿ ಅಡ್ಯಾಲು, ಹೊನ್ನಪ್ಪ ಗೌಡ ಪಾಂಡೇಲು, ಕೃಷ್ಣಪ್ಪ ಗೌಡ ವಡ್ಯರ್ಪೆ ರವರನ್ನು ಸನ್ಮಾನಿಸಲಾಯಿತು.

ನವೋದಯ ಗುಂಪುಗಳಿಗೆ ಸನ್ಮಾನ:
2025-36ನೇ ಸಾಲಿನಲ್ಲಿ ಉತ್ತಮ ರೀತಿಯಲ್ಲಿ ಉಳಿತಾಯ ಮತ್ತು ಸಾಲದ ವ್ಯವಹಾರವನ್ನು ನಡೆಸಿದ ನವೋದಯ ಗುಂಪುಗಳಾದ ಶಾಂತಿ ನವೋದಯ ಸ್ವಸಹಾಯ ಸಂಘ ಅಳಕೆಮಜಲು, ಅಲ್ ಬದ್ರಿಯಾ ನವೋದಯ ಸ್ವಸಹಾಯ ಸಂಘ ವಡ್ಯರ್ಪೆ, ಅನ್ನಪೂರ್ಣೇಶ್ವರಿ ನವೋದಯ ಸ್ವಸಹಾಯ ಸಂಘ ಕಲ್ಲಾಜೆ, ಕಾವೇರಿ ನವೋದಯ ಸ್ವಸಹಾಯ ಸಂಘ ಕೂವೆತ್ತಿಲ, ಅರುಣೋದಯ ನವೋದಯ ಸ್ವಸಹಾಯ ಸಂಘ ನೇರ್ಲಾಜೆ, ಕೀರ್ತಿ ನವೋದಯ ಸ್ವಸಹಾಯ ಸಂಘ ಸೂರ್ಯ, ಅಯೋಧ್ಯೆ ನವೋದಯ ಸ್ವಸಹಾಯ ಸಂಘ ಅಮೈ, ಯಶಸ್ವಿ ನವೋದಯ ಸ್ವಸಹಾಯ ಸಂಘ ಪಿಲಿಪ್ಪೆ, ಚಂದನ ನವೋದಯ ಸ್ವಸಹಾಯ ಸಂಘ ವಿದ್ಯಾಪುರ, ನವೋದಯ ಸ್ವಸಹಾಯ ಸಂಘ ಕೊಡಿಪ್ಪಾಡಿ ಇದರ ಸದಸ್ಯರನ್ನು ಗೌರವಿಸಲಾಯಿತು.

ಗೌರವಾರ್ಪಣೆ / ನಗದುಪುರಸ್ಕಾರ:
2025-26ನೇ ಸಾಲಿನಲ್ಲಿ ಇಡ್ಕಿದು – ಕುಳ ವ್ಯಾಪ್ತಿಯ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಮಕ್ಕಳ ಗುಂಪಿಗೆ ವಿಶೇಷ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. 2025-26 ನೇ ಸಾಲಿನಲ್ಲಿ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಸಿದವರಿಗೆ ನಗದು ಪುರಸ್ಕಾರ ನೀಡಲಾಯಿತು. 2025-26ನೇ ಸಾಲಿನಲ್ಲಿ ಸಂಘದ ಕ್ಯಾಪ್ಕೋ ವಿಭಾಗದಲ್ಲಿ ಹೆಚ್ಚು ವಹಿವಾಟು ನಡೆಸಿದವರಿಗೆ ನಗದು ಪುರಸ್ಕಾರ ನೀಡಲಾಯಿತು.

ನಿರ್ದೇಶಕರಾದ ಚಂದ್ರಹಾಸ ಕಂರ್ದೆಲು, ಜಯಂತ ಕಂಪ, ನವೀನ – ಕೆ.ಪಿ. ಪಾಂಡೇಲು, ಉಮೇಶ್ ವಡ್ಯರ್ಪೆ, ಲೋಹಿತಾಶ್ವ ಎಂ. ಮುಂಡ್ರಬೈಲು, ಸತೀಶ ಕೆ. ಅಳಕೆಮಜಲು, ಆನಂದ ಕೆ. ಅಡ್ಯಾಲು, ಹೃಷಿಕೇಶ ಕೆ.ಎಸ್. ಮುಕ್ಕುಡ, ಪದ್ಮಾವತಿ ಕೂವೆತ್ತಿಲ, ವಿದ್ಯಾ ವಿ. ಮುದಳೆಗುಂಡಿ, ನಾಮನಿರ್ದೆಶಕರಾದ ಯೋಗೀಶ್ ಹೆಚ್. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ವಾರ್ಷಿಕ ವರದಿ ವಾಚಿಸಿದರು. ಸಿಬ್ಬಂದಿ ಹರ್ಷಿತಾ ಕೆ. ಪ್ರಾರ್ಥಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕ‌ರ್ ಶೆಟ್ಟಿ ಬೀಡಿನಮಜಲು ಸ್ವಾಗತಿಸಿದರು. ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ ವಂದಿಸಿದರು. ಸಿಬ್ಬಂದಿಗಳಾದ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕಾರ್ಯಾಡಿ ಸಹಕರಿಸಿದರು.

ಇದು ಸದಸ್ಯರ ವಿಶ್ವಾಸದ ಮನೆ ಅವರ ವಿಶ್ವಾಸವೇ ನಮ್ಮ ಬೆಳವಣಿಗೆಯ ಶಕ್ತಿ

ಸುಧಾಕರ್ ಶೆಟ್ಟಿ ಬೀಡಿನಮಜಲು ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ

ಇದು ಸದಸ್ಯರ ವಿಶ್ವಾಸದ ಮನೆ. ಅವರ ವಿಶ್ವಾಸವೇ ನಮ್ಮ ಬೆಳವಣಿಗೆಯ ಶಕ್ತಿ. ಎಲ್ಲರ ಒಗ್ಗಟ್ಟಿನ ಫಲವಾಗಿ ಸಂಸ್ಥೆ ಬೆಳೆದಿದೆ. ಸಂಸ್ಥೆ ಬಲವಾದರೆ ಸದಸ್ಯರ ಬೆಳವಣಿಗೆ ಸಾಧ್ಯ. ಈಗಾಗಲೇ ನಮ್ಮ ಗ್ರಾಮದ ಸರಕಾರಿ ಶಾಲೆಗಳ ಏಳಿಗೆಗಾಗಿ ಪ್ರಯತ್ನಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರವನ್ನು ನೀಡುವ ಯೋಜ‌ನೆ ಇದೆ. ಇದು ಕೇವಲ ಲಾಭ ಗಳಿಸುವ ಸಂಸ್ಥೆಯಾಗಿರದೆ, ಸದಸ್ಯರ ಬದುಕಿನೊಂದಿಗೆ ಬೆಸೆದುಕೊಂಡಿರುವ ಜನಪರ ಸಂಸ್ಥೆಯಾಗಬೇಕು ಎಂಬುದು ನಮ್ಮ ಆಶಯ. ಆರೋಗ್ಯಕ್ಕೆ ಆರೋಗ್ಯಾಮೃತ, ಮಕ್ಕಳ ಭವಿಷ್ಯಕ್ಕೆ ವಿದ್ಯಾಮೃತ, ನೀರಿನ ಸಂರಕ್ಷಣೆಗೆ ಜಲಜಾಗೃತಿ ಹಾಗೂ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಉದ್ಯೋಗಾಮೃತದಂತಹ ಯೋಜನೆಗಳನ್ನು ಮುಂದುವರಿಸುವ ಮೂಲಕ ಆರ್ಥಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸುತ್ತೇವೆ. ಸದಸ್ಯರ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಿ, ಸಂಘವನ್ನು ಸುರಕ್ಷಿತ, ಸುಸ್ಥಿರ ಹಾಗೂ ಮಾದರಿ ಸಹಕಾರಿ ಸಂಸ್ಥೆಯನ್ನಾಗಿ ಬೆಳೆಸುವುದು ನಮ್ಮ ಮುಂದಿನ ಗುರಿಯಾಗಿದೆ.
ಸುಧಾಕರ್ ಶೆಟ್ಟಿ ಬೀಡಿನಮಜಲು ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ

ಸನ್ಮಾನ……

ಚಿತ್ರ: ಗುಹಾ ಕಬಕ

ಕೃಷಿ ಕ್ಷೇತ್ರದ ಸಾಧನೆಗಾಗಿ ಅಳಕೆಮಜಲು ನಿನ್ನಿಕಲ್ ನರ್ಸರಿ ಮಾಲಕ ಜಾಕ್ ಅನಿಲ್ ರವರನ್ನು ಸನ್ಮಾನಿಸಲಾಯಿತು.

ಸದಸ್ಯರಿಂದ ಆಡಳಿತ ಮಂಡಳಿಯ ಕಾರ್ಯ ವೈಖರಿಗೆ ಮೆಚ್ಚುಗೆ
ಮಹಾಸಭೆಗೆ ಕಳೆದ ಬಾರಿಯಂತೆ ಈ ಬಾರಿಯೂ ಮೂರುಸಾವಿರಕ್ಕೂ ಅಧಿಕ ಮಂದಿ ಸದಸ್ಯರು ಭಾಗಿಯಾಗಿ ದಾಖಲೆ ಬರೆದಿದ್ದಾರೆ. ಹಲವಾರು ಸವಾಲುಗಳ ಮಧ್ಯೆಯೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಉತ್ತಮ ಲಾಭಾಂಶ ಗಳಿಸುವಲ್ಲಿ ಪ್ರಯತ್ನಿಸಿದ ಸಂಘದ ಅಧ್ಯಕ್ಷರು, ನಿರ್ದೇಶಕ ಮಂಡಳಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸದಸ್ಯರುಗಳು ಅಭಿನಂದನೆ ಸಲ್ಲಿಸಿದರು. ಮಾತ್ರವಲ್ಲದೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here