ಆ.26ರಿಂದ ಸೆ.6ರ ವರೆಗೆ ರಾಜ್ಯಾದ್ಯಂತ `ಸೀರತ್ ಅಭಿಯಾನ-2026′ : ಯಾಸೀನ್ ಬೇಗ್

0

ವಿಟ್ಲ: ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ವತಿಯಿಂದ ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಆ.26ರಿಂದ ಸೆ.6ರ ವರೆಗೆ `ಸೀರತ್ ಅಭಿಯಾನ-2026′ ನಡೆಯಲಿದ್ದು, ಈ ಬಾರಿಯ ಘೋಷವಾಕ್ಯ “ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)” ಎಂಬುದಾಗಿದೆ ಎಂದು ವಿಟ್ಲ ಸ್ಥಾನೀಯ ಅಧ್ಯಕ್ಷರಾದ ಯಾಸೀನ್ ಬೇಗ್ ರವರು ಹೇಳಿದರು. ಅವರು ವಿಟ್ಲದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರವಾದಿ ಮುಹಮ್ಮದ್(ಸ)ರವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ಮೇಲೆ ಸ್ಥಾಪಿತವಾಗಿತ್ತು. ಅವರು ಜನರ ಮನಸ್ಸನ್ನು ಸಂಸ್ಕರಿಸಿ, ಅವರ ನೈತಿಕತೆ ಮತ್ತು ಚಾರಿತ್ರ್ಯವನ್ನು ಶುದ್ಧೀಕರಿಸುವ ಮೂಲಕ ವ್ಯಕ್ತಿಗಳನ್ನು, ಸಮಾಜವನ್ನು ಪರಿವರ್ತಿಸಿದರು. ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು ಹಾಗೂ ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ, ಆಡಳಿತ ಹೀಗೆ ಎಲ್ಲಾ ಕ್ಷೇತ್ರಗಳನ್ನು ಬೆಳಗಿಸಿದ ಕ್ರಾಂತಿಯಾಗಿತ್ತು. ಸುಭಿಕ್ಷ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು.

ಪ್ರವಾದಿಯವರ ಈ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಎರಡು ಕೃತಿಗಳ ಬಿಡುಗಡೆ:
ಅಭಿಯಾನದ ಪ್ರಯುಕ್ತ ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಅವರು ಬರೆದ ‘ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್(ಸ)’ ಹಾಗೂ ವಾರ್ತಾ ಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ ಅವರು ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು.

ಅಭಿಯಾನದ ಕಾರ್ಯಕ್ರಮಗಳು:
ರಾಜ್ಯಾದ್ಯಂತ ವೈಯಕ್ತಿಕ ಭೇಟಿ, ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಎಕ್ಸಿಬಿಷನ್, ಸಮಾಜಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ರ‍್ಯಾಲಿಗಳು ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿರುವುದು.
ಪತ್ರಿಕಾಗೋಷ್ಠಿಯಲ್ಲಿ ಸ್ಥಾನೀಯ ಘಟಕದಲ್ಲಿ ಸಕ್ರಿಯರಾಗಿರುವ ಅಬ್ದುಲ್ಲ ಕುಂಞಿ, ಯಾಕುಬ್ ಇಸ್ಮಾಯಿಲ್, ಇಬ್ರಾಹೀಮ್ ಸಯೀದ್, ಅಬ್ದುಲ್ ಅಝೀಝ್, ಮುಹಮ್ಮದ್ ಇಸಾಖ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here