







ಸವಣೂರು : ಕಡಬ ತಾಲೂಕಿನ ಸವಣೂರು, ಬೆಳಂದೂರು, ಕಾಣಿಯೂರು, ಆಲಂಕಾರು ಸೇರಿದಂತೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸರ್ವರ್ ಸಮಸ್ಯೆಯಿಂದ ಬೆಳಗ್ಗೆಯಿಂದ ಜನರು ಸಾಲುಗಟ್ಟಿ ನಿಂತರೂ ಪಡಿತರ ಸಿಗದೆ ಬರಿಗೈಯಲ್ಲಿ ಮನೆಗೆ ಮರಳುವಂತಾಗಿದೆ.


ಬಹುತೇಕ ಜನರು ಕೂಲಿ ಕಾರ್ಮಿಕರು, ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ದಾರರು. ಕೆಲಸಕ್ಕೆ ಹೋಗುವ ಮೊದಲು ಬೆಳಗ್ಗೆ ನ್ಯಾಯಬೆಲೆ ಅಂಗಡಿ ಮುಂದೆ ಬಂದು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ 11 ಗಂಟೆಯಾದರೂ ಸರ್ವರ್ ಬರುತ್ತಿಲ್ಲ.



ಕಾರ್ಮಿಕರ ಪರದಾಟ ಈ ಭಾಗದಲ್ಲಿ ಕಾರ್ಮಿಕರು ಹೆಚ್ಚು. ಇವರು ಬೆಳಗ್ಗೆ ನೇರವಾಗಿ ಅಂಗಡಿಗೆ ಬರುತ್ತಾರೆ. ಆದರೆ ಸರ್ವರ್ ಇಲ್ಲದ ಕಾರಣ ಮತ್ತೆ ಮಧ್ಯಾಹ್ನ ಬರಬೇಕಾಗಿದೆ. ಇದರಿಂದ ಒಂದು ದಿನದ ಕೂಲಿ ನಷ್ಟವಾಗುತ್ತಿದೆ.

ಏಕೆ ಈ ಸಮಸ್ಯೆ? ಆಹಾರ ಇಲಾಖೆಯ ಇ-ಪಾಸ್ ಯಂತ್ರಗಳು 2G ನೆಟ್ವರ್ಕ್ ಆಧಾರಿತವಾಗಿವೆ. ಕಡಬ ತಾಲೂಕಿನ ಒಳಭಾಗದ ಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗುವುದಿಲ್ಲ. ಅದರ ಜೊತೆಗೆ ರಾಜ್ಯ ಸರ್ವರ್ ನಿಧಾನಗತಿಯಾಗಿದೆ.ಇದರಿಂದ ಎರಡು ಸಮಸ್ಯೆ ಒಟ್ಟಿಗೆ ಬಂದಂತಾಗಿದೆ. ಎಲ್ಲೆಡೆ ಇದೇ ಪರಿಸ್ಥಿತಿ ಇದೆ. ತಿಂಗಳ ಕೊನೆಯ ವಾರವಾದ್ದರಿಂದ ಪಡಿತರ ಪಡೆಯಲು ಜನದಟ್ಟಣೆ ಹೆಚ್ಚಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಈ ಬಗ್ಗೆ ಜನರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. “ಸರ್ವರ್ ಸಮಸ್ಯೆ ಬೆಂಗಳೂರಿನಲ್ಲಿ ಇದೆ, ನಾವು ಏನು ಮಾಡಲು ಆಗುವುದಿಲ್ಲ,” ಎಂಬ ಉತ್ತರ ಮಾತ್ರ ಸಿಗುತ್ತಿದೆ. ಆಫ್ಲೈನ್ನಲ್ಲಿ ವಿತರಣೆ ಮಾಡಲು ಅವಕಾಶ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.










