ನೆಲ್ಯಾಡಿ ಜಯಾನಂದ ಬಂಟ್ರಿಯಾಲ್‌ರ ಶ್ರದ್ಧಾಂಜಲಿ ಸಭೆ

0

ಜೀವಿತಾವಧಿಯನ್ನು ಸಮಾಜಕ್ಕೆ ಅರ್ಪಿಸಿದ ಮಾದರಿ ವ್ಯಕ್ತಿ -ಬಾಲಕೃಷ್ಣ ಆಳ್ವ

ನೆಲ್ಯಾಡಿ: ಆ.15ರಂದು ನಿಧನರಾದ ನೆಲ್ಯಾಡಿ ಗ್ರಾಮದ ಕೆಳಗಿನಪರಾರಿ ಗುತ್ತು ನಿವಾಸಿ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮುಂದಾಳು ಜಯಾನಂದ ಪಿ.ಬಂಟ್ರಿಯಾಲ್ ಅವರ ಉತ್ತರಕ್ರಿಯಾದಿ ಕಾರ್ಯ ಹಾಗೂ ಶ್ರದ್ಧಾಂಜಲಿ ಸಭೆ ಆ.27ರಂದು ಮಧ್ಯಾಹ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.

ನುಡಿನಮನ ಸಲ್ಲಿಸಿದ ಮಾಣಿ ಗ್ರಾ.ಪಂ.ಮಾಜಿ ಅಧ್ಯಕ್ಷ ಕೊಡಾಜೆ ಬಾಲಕೃಷ್ಣ ಆಳ್ವ ಅವರು, 55 ವರ್ಷದಲ್ಲೇ ಇಹಲೋಕ ತ್ಯಜಿಸಿದ ಜಯಾನಂದ ಬಂಟ್ರಿಯಾಲ್ ಅವರು ತನ್ನ ಜೀವಿತದ ಅಧಿಕ ಅವಧಿಯನ್ನು ಸಮಾಜ ಸೇವೆಗೆ ಅರ್ಪಣೆ ಮಾಡಿದ್ದಾರೆ. ವಿಧಿ, ಪ್ರಕೃತಿಯ ನಿಯಮವನ್ನು ಮೀರುವ ಶಕ್ತಿ ಮನುಷ್ಯರಿಗೆ ಇಲ್ಲ. ಜನನ ಮತ್ತು ಮರಣ ಭೂಮಿಯ ಮೇಲೆ ನಡೆಯುತ್ತಿರುವ ನಿರಂತರ ಪ್ರಕ್ರಿಯೆ. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ನಾವು ಎಷ್ಟು ವರ್ಷ ಬದುಕಿದ್ದೇವೆ ಎಂಬುವುದಕ್ಕಿಂತ ಜೀವಿತದ ಅವಧಿಯಲ್ಲಿ ಕುಟುಂಬ, ಸಮಾಜದ ಜೊತೆ ಯಾವ ರೀತಿ ಬೆರೆತ್ತಿದ್ದೇವೆ ಎಂಬುದು ಬಹುಮುಖ್ಯವಾಗಿದೆ.

ಜಯಾನಂದ ಬಂಟ್ರಿಯಾಲ್ ಅವರು ಸಮಾಜ ಹಾಗೂ ಕುಟುಂಬದ ಜೊತೆ ಬದುಕು ಸಾಗಿಸಿದ್ದಾರೆ ಎಂದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷರಾಗಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷರಾಗಿ, ನೆಲ್ಯಾಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾಗಿ, ನೆಲ್ಯಾಡಿ ಜೆಸಿಐ ಅಧ್ಯಕ್ಷರಾಗಿ, ನೆಲ್ಯಾಡಿ ಗೆಳೆಯರ ಬಳಗದ ಅಧ್ಯಕ್ಷರಾಗಿ, ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ, ನೆಲ್ಯಾಡಿ ವಲಯ ಬಂಟರ ಸಂಘದ ಸಹ ಸಂಚಾಲಕರಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಅವರು ಮಾಡಿರುವ ಸೇವೆ ಅನುಕರಣೀಯವಾಗಿದೆ. ಕೆದಿಕಂಡೆಗುತ್ತು ಕುಟುಂಬದ ದೈವ, ದೇವರ ಆರಾಧನೆಯ ಸಂದರ್ಭದಲ್ಲಿ ಮುಂದೆ ನಿಂತು ಸೇವೆ ಮಾಡುತ್ತಿದ್ದರು. ಅವರು ಕೆದಿಕಂಡೆಗುತ್ತು ಕುಟುಂಬಕ್ಕೆ ಆಧಾರವಾಗಿದ್ದರು. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂಬ ಮಾತಿಗೆ ಜಯಾನಂದ ಬಂಟ್ರಿಯಾಲ್ ನಿದರ್ಶನರಾಗಿದ್ದಾರೆ. ಸರಳ, ಸಜ್ಜನಿಕೆ ವ್ಯಕ್ತಿತ್ವದ ಅವರು ಸಮಾಜಕ್ಕೆ ಮಾದರಿಯಾಗಿದ್ದರು. ದಯಾಮಯಿ, ಕರುಣಾಮಯಿ, ತ್ಯಾಗಮಯಿ, ಪ್ರೀತಿ, ವಾತ್ಸಲ್ಯದ ಸಾಕಾರಮೂರ್ತಿಯಾಗಿದ್ದರು ಎಂದು ಬಾಲಕೃಷ್ಣ ಆಳ್ವ ಗುಣಗಾನ ಮಾಡಿದರು.


ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೂತನ ನಿರ್ದೇಶಕ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಕೃಷ್ಣ ಶೆಟ್ಟ ಕಡಬ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಂಚಾಲಕ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ದಯಾಕರ ರೈ, ನೆಲ್ಯಾಡಿ ರಬ್ಬರ್ ಬೆಳೆಗಾರರ ಮತ್ತು ಮಾರಾಟಗಾರರ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ ನೆಲ್ಯಾಡಿ, ಹರೀಶ್ ಕಂಜಿಪಿಲಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ನಿರ್ದೇಶಕ ಗಣೇಶ್ ಆಚಾರ್ಯ, ಪುತ್ತೂರು ತಾಲೂಕು ಮಾಜಿ ಅಧ್ಯಕ್ಷರಾದ ಮಹಾಬಲ ರೈ ವಳತ್ತಡ್ಕ, ಕಡಬ ತಾಲೂಕು ಸ್ಥಾಪಕಾಧ್ಯಕ್ಷ ಮಹೇಶ್ ಕೆ.ಸವಣೂರು, ಕಡಬ ತಾಲೂಕು ಅಧ್ಯಕ್ಷ ಇಂದುಶೇಖರ ಶೆಟ್ಟಿ, ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್‌ಕುಮಾರ್, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ರಾಕೇಶ್ ರೈ ಕೆಡೆಂಜಿಗುತ್ತು, ಪ್ರದೀಪ್ ರೈ ಮನವಳಿಕೆ, ಗಂಗಾಧರ ಶೆಟ್ಟಿ ಹೊಸಮನೆ, ರವಿಪ್ರಸಾದ್ ಶೆಟ್ಟಿ ರಾಮನಗರ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಮೃತರ ಪತ್ನಿ ಸುಚಿತ್ರಾ ಬಂಟ್ರಿಯಾಲ್, ಪುತ್ರ ವಿನ್ಯಾಸ್ ಬಂಟ್ರಿಯಾಲ್, ಪುತ್ರಿ ವೈಷ್ಣವಿ ಬಂಟ್ರಿಯಾಲ್, ಸಹೋದರರಾದ ಮೋಹನದಾಸ್ ಬಂಟ್ರಿಯಾಲ್, ರತ್ನಾಕರ ಬಂಟ್ರಿಯಾಲ್, ಸಹೋದರಿಯರಾದ ಶೀಲಾವತಿಜಯರಾಮ್ ರೈ, ಕಲಾವತಿಶೇಖರ ಶೆಟ್ಟಿ, ಸಂಪದವಿಶ್ವನಾಥ ರೈ, ಶಶಿಕಲಾಸುರೇಶ್ ಶೆಟ್ಟಿ ಹಾಗೂ ಕೆದಿಕಂಡೆಗುತ್ತು ಕುಟುಂಬಸ್ಥರು, ಹಿತೈಷಿಗಳು, ಬಂಧುಗಳು ಉಪಸ್ಥಿತರಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

LEAVE A REPLY

Please enter your comment!
Please enter your name here