






ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ತಾಲೂಕು ಘಟಕದ ವತಿಯಿಂದ ವಾತ್ಸಲ್ಯ ಫಲಾನುಭವಿಗಳ ಮಕ್ಕಳ ವಿದ್ಯಾರ್ಜನೆಗಾಗಿ ’ವಿದ್ಯಾನಿಧಿ ಕಿಟ್’ ವಿತರಣೆ ಹಾಗೂ ’ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ’ ವಿತರಣಾ ಕಾರ್ಯಕ್ರಮವು ತಾಲೂಕು ಯೋಜನಾ ಕಚೇರಿಯ ಸಭಾಂಗಣದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ 2 ಜಿಲ್ಲೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್, ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ’ಜ್ಞಾನವಿಕಾಸ’ ಕಾರ್ಯಕ್ರಮದಡಿಯಲ್ಲಿ ಸಮಾಜದ ನಿರ್ಗತಿಕರನ್ನು ಗುರುತಿಸಿ, ಅವರ ಜೀವನ ನಿರ್ವಹಣೆಗೆ ಮೂಲಭೂತ ಸೌಕರ್ಯಗಳ ಜೊತೆಗೆ ಮಾಸಿಕ ಮಾಸಾಶನ ನೀಡಲಾಗುತ್ತಿದೆ. ಇದರೊಂದಿಗೆ ವಾತ್ಸಲ್ಯ ಯೋಜನೆ ಮೂಲದ ವಿದ್ಯಾನಿಧಿ ಕಿಟ್ ನೀಡುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗುತ್ತಿದ್ದು, ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂಬುದು ಯೋಜನೆಯ ಮುಖ್ಯ ಆಶಯವಾಗಿದೆ ಎಂದರು.



ಖಾವಂದರು ಹಾಗೂ ಮಾತೃಶ್ರೀ ಅಮ್ಮನವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ಒದಗಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತಿದ್ದಾರೆ. ಇಂತಹ ಯೋಜನೆಯ ಪ್ರಯೋಜನ ಪಡೆದ ಪ್ರತಿಯೊಬ್ಬರೂ ಕ್ಷೇತ್ರಕ್ಕೆ ಎಂದೆಂದೂ ಚಿರಋಣಿಯಾಗಿರಬೇಕು ಎಂದು ಅವರು ಶುಭಹಾರೈಸಿದರು.

ಜನಜಾಗೃತಿ ವೇದಿಕೆಯ ತಾಲೂಕು ಮಾಜಿ ಅಧ್ಯಕ್ಷ ಮಹಾಬಲ ರೈ ಒಳತಡ್ಕ ಮಾತನಾಡಿ, ಯೋಜನೆಯ ಮೂಲಕ ಗ್ರಾಮಗಳಲ್ಲಿ ನಡೆಯುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನೂರಾರು ಕುಟುಂಬಗಳ ಜೀವನ ಮಟ್ಟವನ್ನು ಬದಲಾಯಿಸಿವೆ. ಮುಂದೆಯೂ ಇಂತಹ ಉದಾತ್ತ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಪುತ್ತೂರು ಸಹಾಯಕ ಉಪನಿರೀಕ್ಷಕ ನಾರಾಯಣ ಕೆ ಮಾತನಾಡಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಜ್ಞಾನದೀಪ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು. ಮಕ್ಕಳು ಚೆನ್ನಾಗಿ ಓದಿ ಪೋಷಕರಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ವಾತ್ಸಲ್ಯ ವಿದ್ಯಾನಿಧಿ ಕಿಟ್, ಜ್ಞಾನದೀಪ ಮಂಜೂರಾತಿ ಪತ್ರ ವಿತರಣೆ
ತಾಲೂಕಿನ 23 ಅರ್ಹ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಬುಕ್, ಪೆನ್, ಪೆನ್ಸಿಲ್, ಜ್ಯಾಮಿಟ್ರಿ ಬಾಕ್ಸ್, ಛತ್ರಿ, ವಾಟರ್ ಬಾಟಲ್ ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳಿದ್ದ ’ವಾತ್ಸಲ್ಯ ವಿದ್ಯಾನಿಧಿ ಕಿಟ್’ ವಿತರಿಸಲಾಯಿತು. ಜ್ಞಾನದೀಪ ಶಿಕ್ಷಕರ ಮಂಜೂರಾತಿ: ತಾಲೂಕಿನ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನಿಯೋಜನೆಗೊಂಡ 13 ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸತೀಶ್ ನಾಯ್ಕ್, ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಕಚೇರಿ ಸಿಬ್ಬಂದಿ, ಜ್ಞಾನದೀಪ ಶಿಕ್ಷಕರು, ವಾತ್ಸಲ್ಯ ಯೋಜನೆ ಫಲಾನುಭವಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.










