






ಪುತ್ತೂರು: ಕರ್ನಾಟಕ ಎಸ್ಸಿ ಮತ್ತು ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರತಿಷ್ಠಿತ ರಾಜ್ಯ ಮಟ್ಟದ ವಾರ್ಷಿಕ ದತ್ತಿಪ್ರಶಸ್ತಿಗೆ ಬದ್ರುದ್ದೀನ್ ಮಾಣಿ ಆಯ್ಕೆಯಾಗಿದ್ದಾರೆ.


ಕರ್ನಾಟಕ ರಾಜ್ಯ ಎಸ್ಸಿ ಮತ್ತು ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿನ ದಲಿತರ ಮಾಲಿಕತ್ವ ಅಥವಾ ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಮತ್ತು ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣದಂತಹ ರಚನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.



ಇದರ ಭಾಗವಾಗಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ಹಿರಿಯ ಮತ್ತು ಉದಯೋನ್ಮುಖ ವೃತ್ತಿಪರ ಪತ್ರಕರ್ತರನ್ನು, ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬರಲಾಗುತ್ತಿದೆ.ಈ ಭಾಗವಾಗಿ ಸಂವಿಧಾನ ಶಿಲ್ಪಿ, ನಿಷ್ಪಕ್ಷಪಾತ ಪತ್ರಿಕೋದ್ಯಮದ ನೈತಿಕ ಮೌಲ್ಯವೇ ಆಗಿದ್ದ ಡಾ. ಬಾಬಾ ಸಾಹೇಬ್ಅಂಬೇಡ್ಕರ್ ದಲಿತ ಚಳವಳಿಯ ಕಟ್ಟಿದ ಪ್ರೊ.ಬಿ.ಕೃಷ್ಣಪ್ಪ, ದಲಿತರ ಸ್ವಾಭಿಮಾನ, ಹಕ್ಕುಗಳಿಗೆ ರಾಜಕೀಯ ಶಕ್ತಿ ಧಾರೆ ಎರೆದ ಮಾಜಿ ಸಚಿವರಾದ ಬಿ. ಬಸವಲಿಂಗಪ್ಪ, ಮಾಜಿ ಸಚಿವ ಬಿ.ರಾಚಯ್ಯ ಅವರುಗಳ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಬೆಂಗಳೂರು 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿಸಲಾಗಿದೆ. ಇದೇ ಸಂದರ್ಭದಲ್ಲಿ ಪತ್ರಿಕೆಗಳನ್ನು ನಡೆಸುತ್ತಿರುವ ಪರಿಶಿಷ್ಟ ಜಾತಿ/ವರ್ಗಗಳ ಸಾಧಕ ಸಂಪಾದಕರುಗಳನ್ನು ಗುರುತಿಸಿ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಸೆಪ್ಟಂಬರ್ 17ರಂದು ಸರ್ಕಾರಿ ನೌಕರರ ಸಂಘದ ಬೆಂಗಳೂರಿನ ಆಡಿಟೋರಿಯಂ ಕಬ್ಬನ್ ಪಾರ್ಕ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಜ್ಯ ಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳು-2025 ತಲಾ 10 ಸಾವಿರ ರೂ. ನಗದು, ಪ್ರಶಸ್ತಿಫಲಕಗಳನ್ನೊಳಗೊಂಡಿರುತ್ತದೆ. ಬಿ.ರಾಚಯ್ಯ ದತ್ತಿ ಪ್ರಶಸ್ತಿಗೆ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ಅವರನ್ನು ಆಯ್ಕೆ ಮಾಡಲಾಗಿದೆ.
ಬದ್ರುದ್ದೀನ್ ಮಾಣಿ ಪರಿಚಯ:
ಬದ್ರುದ್ದೀನ್ ಅವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡ ಮಾಡುವ ಕೆ.ವಿ. ಆರ್ ಹ್ಯಾಗೋರ್ ಸ್ಮರಣಾರ್ಥ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಟಿ. ತಿಮ್ಮೆಗೌಡ ಹಾಗೂ ಡಾ.ವೆಂಕಟೇಶ್ ತುಪ್ಪಿಲ್ ನೀಡುವ ದತ್ತಿನಿಧಿ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು.
ಬಂಟ್ವಾಳ ಮಾಣಿಯ ಕೊಡಾಣೆ ನಿವಾಸಿಯಾದ ಇವರು ಆರಂಭದಲ್ಲಿ ಮಂಡ್ಯದ ಸ್ಥಳೀಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ಮಾಧ್ಯಮಕ್ಕೆ ಕಾಲಿಟ್ಟರು. 1995ರಲ್ಲಿ ಕೇಬಲ್ ವಾಹಿನಿ ಮೂಲಕ ಎಂಟಿಎನ್ ವಾರ್ತೆ ಪ್ರಾರಂಭಿಸಿದರು. ಎಂಟಿಎನ್ ವಾರ್ತೆ ಮುಖ್ಯ ವರದಿಗಾರನಾಗಿ ಸೇವೆ ಸಲ್ಲಿಸಿ ಬಳಿಕ 2002ರಿಂದ ಉದಯ ಟಿವಿ ಮಂಡ್ಯ ಜಿಲ್ಲಾ ವರದಿಗಾರರಾಗಿಯೂ 2007ರಿಂದ ಬೆಂಗಳೂರಿನಲ್ಲಿ ಕಸ್ತೂರಿ ವಾಹಿನಿ ರಾಜಕೀಯ ವರದಿಗಾರರಾಗಿಯೂ 2014ರಿಂದ ಪಬ್ಲಿಕ್ ಟಿವಿ ರಾಜಕೀಯ ವಿಭಾಗದಲ್ಲಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದ್ದರು. ಮಾಧ್ಯಮದಲ್ಲಿ ಸರಿ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಹಲವು ವರ್ಷ ಕಾರ್ಯ ನಿರ್ವಹಿಸಿ ಮಂಡ್ಯ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲಾ ತೋಟಗಾರಿಕಾ ಸಂಘದಲ್ಲಿ ಪದಾಧಿಕಾರಿ, ಬೆಂಗಳೂರು ವರದಿಗಾರರ ಕೂಟದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಳೆದ 12 ವರ್ಷಗಳಿಂದ ಇದ್ದಾರೆ. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದಾರೆ. 4 ವರ್ಷದಿಂದ ರಾಜ್ಯ ಪತ್ರಕರ್ತರ ಮಾನ್ಯತಾ ಸಮಿತಿ ಸದಸ್ಯನಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ 3 ವರ್ಷ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. 2006ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, 2018 ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, 2020 ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಾಡಪ್ರಭು ಕಂಪೇಗೌಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪತ್ನಿ ಸಮೀಮ್ ಹಾಗೂ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ.










