






ಸೆ.4 ಮೊಸರುಕುಡಿಕೆ, ವಿವಿಧ ಸ್ಪರ್ಧೆಗಳು, ಸೆ.5 ಶೋಭಾಯಾತ್ರೆ, ಧಾರ್ಮಿಕ ಸಭೆ


ಪುಣಚ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಆಚರಣೆ ಸಮಿತಿ ಆಶ್ರಯದಲ್ಲಿ ನಡೆಯಲಿರುವ 25ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಬೆಳ್ಳಿಹಬ್ಬ ಸಂಭ್ರಮವು ಶೋಭಾಯಾತ್ರೆ ಧಾರ್ಮಿಕ ಸಭೆಯೊಂದಿಗೆ ಸೆ.4 ಮತ್ತು 5ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಸಂಭ್ರಮದಿಂದ ನಡೆಯಲಿದೆ.



ಸೆ.4ರಂದು ಬೆಳಿಗ್ಗೆ ಶ್ರೀದೇವಿ ಸನ್ನಿಧಿಯಲ್ಲಿ ಪ್ರಾರ್ಥನೆ ಬಳಿಕ ಬೆಳಗ್ಗಿನಿಂದ ಸಾಯಂಕಾಲದವರೆಗೆ ಸಾರ್ವಜನಿಕ ಮೊಸರುಕುಡಿಕೆ ಹಾಗೂ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಸೆ.5ರಂದು ಅಪರಾಹ್ನ ಗಂಟೆ 3ರಿಂದ ಪುಣಚ ಪರಿಯಾಲ್ತಡ್ಕದಿಂದ ವಿವಿಧ ಭಜನಾ ತಂಡಗಳ ಕುಣಿತ ಭಜನೆ, ಗೊಂಬೆ ಕುಣಿತ ಹಾಗೂ ಸಿಂಗಾರಿ ಮೇಳದ ಚೆಂಡೆವಾದನದೊಂದಿಗೆ ಶ್ರೀಕೃಷ್ಣ ವೇಷದಾರಿಗಳ ಭವ್ಯ ಶೋಭಾಯಾತ್ರೆ ದೇವಸ್ಥಾನಕ್ಕೆ ಸಾಗಿ ಬರಲಿದೆ. ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬೆಳ್ಳಿಹಬ್ಬ ಆಚರಣೆ ಸಮಿತಿ ಗೌರವಾಧ್ಯಕ್ಷ ಎಸ್.ಆರ್ ರಂಗಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 7ರಿಂದ ಜಿಲ್ಲೆಯ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ‘ಯತೋ ಧರ್ಮಸ್ತತೋ ಜಯಃ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. 9.30ರಿಂದ ಅನ್ನಸಂತರ್ಪಣೆ ಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಎಂದು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಆಚರಣೆ ಸಮಿತಿಯ ಪ್ರಕಟಣೆ ತಿಳಿಸಿದೆ.










