






ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಪ್ರಭಾರ ಪ್ರಾಚಾರ್ಯರೂ ಆಗಿರುವ ಇಬ್ರಾಹಿಂ ಎಂ. ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕೊಡಮಾಡುವ ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕ ಹಾಗೂ ಆಡಳಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಸುಮಾರು 20 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇಬ್ರಾಹಿಂ ಅವರು ತಮ್ಮ ಸರಳತೆ, ಬದ್ಧತೆ, ವಿದ್ಯಾರ್ಥಿ ಸ್ನೇಹಿ ಮನೋಭಾವ ಹಾಗೂ ಪರಿಣಾಮಕಾರಿ ಬೋಧನಾ ಶೈಲಿಯಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುವಾಗಿ ಗುರುತಿಸಿಕೊಂಡಿದ್ದಾರೆ. ಪ್ರಭಾರ ಪ್ರಾಚಾರ್ಯರಾಗಿಯೂ ಕೆಲಸ ಮಾಡುತ್ತಿರುವ ಇವರು ಆಡಳಿತಾತ್ಮಕ ದಕ್ಷತೆ ಹಾಗೂ ಸಮರ್ಥ ನಿರ್ವಹಣೆಯೊಂದಿಗೆ ಗಮನಾರ್ಹ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಆದ್ಯತೆ ನೀಡುತ್ತಿರುವ ಇವರು ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೂ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಕ್ಷೇತ್ರಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವಲ್ಲಿ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ದೊರಕುವಂತೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವಲ್ಲಿಯೂ ಇವರು ವಿಶೇಷ ಪ್ರಯತ್ನ ನಡೆಸಿದ್ದಾರೆ. ವಿಶೇಷವಾಗಿ ತಂದೆ, ತಾಯಿ ಇಲ್ಲದ ಅನಾಥ ಮಕ್ಕಳಿಗೆ ಆಸರೆ ಯೋಜನೆಯನ್ನು ರೂಪಿಸಿಕೊಂಡು ಆ ಮೂಲಕ ಅವರಿಗೆ ಸಮವಸ, ಪುಸ್ತಕ ಸೇರಿದಂತೆ ಸಂಪೂರ್ಣ ಉಚಿತ ಶಿಕ್ಷಣ ದೊರಕುವಂತೆ ಮಾಡುವ ಮೂಲಕ ಶಿಕ್ಷಣದಿಂದ ಯಾವುದೇ ಮಗು ವಂಚಿತರಾಗಬಾರದು ಎಂಬ ಮಾನವೀಯ ಕಾಳಜಿಯನ್ನು ಮರೆದಿದ್ದಾರೆ.



ಇಬ್ರಾಹಿಂ ಅವರ ನೇತೃತ್ವದಲ್ಲಿ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡುತ್ತಿದ್ದು, ಕಾಲೇಜಿನ ಮೂಲ ಸೌಕರ್ಯ ಅಭಿವೃದ್ಧಿಗಾಗಿ ದಾನಿಗಳ ಸಹಕಾರ ಮತ್ತು ಶಾಸಕರ ಮೂಲಕವೂ ಅಗತ್ಯ ಅನುದಾನವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಆಡಳಿತಾವಽಯಲ್ಲಿ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿಟಿವಿ. ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ.
ಸರಕಾರಿ ಕಾಲೇಜುಗಳ ಪೈಕಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನದಲ್ಲಿದ್ದು, ಇಬ್ರಾಹಿಂ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗೌರವ ದೊರೆತಿರುವುದು ಕಾಲೇಜಿನ ಕೀರ್ತಿಗೆ ಮತ್ತೊಂದು ಗರಿ ಮೂಡಿಸಿದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್ ಪ್ರತಿಕ್ರಿಯಿಸಿದ್ದಾರೆ.
ಇಬ್ರಾಹಿಂ ಸರ್ ಅವರು ನನ್ನ ಗುರುಗಳಾಗಿದ್ದವರು. ಅವರಿಗೆ ಪ್ರಶಸ್ತಿ ದೊರೆತಿರುವುದು ಕೇಳಿ ಅತೀವ ಸಂತೋಷವಾಯಿತು. ನಾನೊಬ್ಬ ಎಂಡೋಪೀಡಿತ. ಇನ್ನೊಬ್ಬರ ಸಹಾಯವಿಲ್ಲದೆ ನಾಲ್ಕು ಹೆಜ್ಜೆ ನಡೆದಾಡಲು ನನ್ನಿಂದ ಸಾಧ್ಯವಿಲ್ಲ. ಇಂತಹ ಅಂಗವೈಕಲ್ಯ ಇರುವ ನನಗೆ ಇವರ ಮಾರ್ಗದರ್ಶನದಿಂದ ಕಲಿತು. ಕಂದಾಯ ಇಲಾಖೆಯಲ್ಲಿ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತು. ನನ್ನ ಶೈಕ್ಷಣಿಕ ಅವಽಯಲ್ಲಿ ಅವರು ಹೇಗೆ ನನಗೆ ಮಾರ್ಗದರ್ಶನ ಮಾಡುತ್ತಿದ್ದರೋ ಅದೇ ರೀತಿ ಇಂದಿಗೂ ನನ್ನ ಬದುಕಿನಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರು ನನ್ನನ್ನು ಸೇರಿದಂತೆ ಅದೆಷ್ಟೋ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ್ದಾರೆ. ಉಪ್ಪಿನಂಗಡಿಯ ಸರಕಾರಿ ಕಾಲೇಜನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅವರು ಈ ಕಾಲೇಜಿನ ಪ್ರಾಂಶುಪಾಲರಾಗಿದ್ದುಕೊಂಡು ಕಾಲೇಜಿನಲ್ಲಿ ಶಿಸ್ತನ್ನು ತಂದಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಿದ್ದಾರೆ. ಇವರು ಪ್ರಾಂಶುಪಾಲರಾಗಿರುವುದು ಹೆಮ್ಮೆಯ ವಿಷಯ.
ಪ್ರದೀಪ ಬಿ.ಜೆ. ಗ್ರಾಮ ಆಡಳಿತಾಧಿಕಾರಿ (ಉಪ್ಪಿನಂಗಡಿ ಸರಕಾರಿ ಪಿ.ಯು. ಕಾಲೇಜಿನ ಹಳೆ ವಿದ್ಯಾರ್ಥಿ)











