ಆರ್ಲಪದವು ಶ್ರೀಕೃಷ್ಣ ಜನ್ಮಾಷ್ಠಮಿಯ ವಿಂಶತಿ ಸಂಭ್ರಮೋತ್ಸವ

0

ಭಕ್ತಿ ಭಾವದಿಂದ ನಡೆದ ಶ್ರೀಕೃಷ್ಣನ ತೊಟ್ಟಿಲೋತ್ಸವದ ಸಂಭ್ರಮ

ಪುತ್ತೂರು;ಯಾದವ ಸಭಾ ಪ್ರಾದೇಶಿಕ ಸಮಿತಿ ಇದರ ವತಿಯಿಂದ ವಿವಿದ ಧಾರ್ಮಿಕ ಹಾಗೂ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ನಡೆದ 20ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣಜನ್ಮಾಷ್ಠಮಿ ಆಚರಣೆಯ ‘ವಿಂಶತಿ ಸಂಭ್ರಮೋತ್ಸವ’ದ ಎರಡನೇ ದಿನವಾದ ಸೆ.4ರಂದು ಸಂಜೆ ಭಕ್ತಿ ಭಾವದಿಂದ ವಿನೂತನವಾಗಿ ನಡೆದ ಶ್ರೀಕೃಷ್ಣನ ತೊಟ್ಟಿಲೋತ್ಸವವು ಎಲ್ಲರ ಗಮನ ಸೆಳೆಯಿತು.
ವಿಶೇಷ ಪುಷ್ಪಾಲಂಕಾರದಿಂದ ನಿರ್ಮಾಣಗೊಂಡ ಸುಂದರ ವೇದಿಕೆಯಲ್ಲಿ ವಿಭಿನ್ನ ಶೈಲಿಯ ಪುಷ್ಪಾಂಲಕಾರದಿಂದ ತೊಟ್ಟಿಲನ್ನು ಅಲಂಕರಿಸಲಾಗಿತ್ತು. ವೇ.ಮೂ ಜ್ಯೋತಿಷಿ ಗೋಪಾಲಕೃಷ್ಣ ಅಡಿಗ ಅವರು ವೈದಿಕತ್ವದಲ್ಲಿ ಸಂಕೀರ್ತನಾ ಸೇವೆ, ಅಷ್ಟಾವಧಾನ ಸೇವೆ, ಷೋಡಶೋಪಚಾರ ಪೂಜೆ, ಆರ್ಘ್ಯಪ್ರದಾನ ಸೇವೆಯೊಂದಿಗೆ ಶ್ರೀಕೃಷ್ಣ ದೇವರ ತೊಟ್ಟಿಲೋತ್ಸವವು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ವೇ.ಮೂ ಸುಬ್ರಹ್ಮಣ್ಯ ಕಾರಂತ ಮಂಗಳೂರು ಅವರಿಂದ ಸಂಕೀರ್ತನೆ ಹಾಗೂ ಅವಧಾನಿಯು ಇನ್ನಷ್ಟು ಮೆರುಗು ನೀಡಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಾವಿರಾರು ಮಂದಿ ಭಕ್ತಾದಿಗಳು ಶ್ರೀ ಕೃಷ್ಣನ ಭಜನೆಗಳನ್ನು ಹಾಡಿ, ಭಕ್ತಿಭಾವ ಮೆರೆದರು.


ವಿಂಶತಿ ಸಂಭ್ರಮೋತ್ಸವದಲ್ಲಿ ಬೆಳಿಗ್ಗೆ ಪುಣ್ಯಾಹ ಗಣಪತಿ ಹವನ, ಷಡಕ್ಷರ ಹವನ. ಶ್ರೀ ದೇವರ ಪ್ರತಿಷ್ಠೆ, ಹವಣ ಪೂರ್ಣಾಹುತಿ, ಉಪಾಹಾರ, ಆರ್ಲಪದವು ಕಾರ್ತಿಕೇಯ ಮಹಿಳಾ ಭಜನಾ ಸಂಘದವರಿಂದ ಭಜನೆ, ನಂತರ ಮಕ್ಕಳು, ಮಹಿಳೆಯರು, ಪುರುಷರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಕಲ್ಪೋಕ್ತಪೂಜೆ, ಮಧ್ಯಾಹ್ನ ಪ್ರಸನ್ನಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಅಪರಾಹ್ನ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಅಪರಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ಚರ ದೇವಸ್ಥಾನದ ಅನು

ವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮಾತನಾಡಿ, ಕಳೆದ ಹತ್ತೊಂಬತ್ತು ವರ್ಷಗಳ ಹಿಂದೆ ಶ್ರೀಕೃಷ್ಣ ಜನ್ಮಾಷ್ಟಮಿಯು ಇಂದು ಇಪ್ಪತ್ತನೆಯ ಸಂಭ್ರಮದಲ್ಲಿದೆ. ಅಂದು ಯಾದವ ಸಮುದಾಯದವರು ಹಾಕಿದ ಬೀಜ ಇಂದು ಹೆಮ್ಮರವಾಗಿ ಬೆಳೆಯುತ್ತಿದ್ದು ಎಲ್ಲಾ ಸಮಾಜದವರು ಪೋಷಣೆ ಮಾಡುತ್ತಿದ್ದಾರೆ ಎಂದರು.


ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ಸಮಾಜದ ಎಲ್ಲಾ ರೀತಿಯ ಎಡರು ತೊಡರುಗಳನ್ನು ತೊಲಗೊಸಿದವರು. ಸಮಾಜದ ವಕ್ರತೆಯನ್ನು ನಿವಾರಿಸಿ, ಎಲ್ಲರಿಗೂ ರಕ್ಷಣೆ ನೀಡಿದವರು. ಸಮಾಜದ ಅಂಧಕಾರವನ್ನು ತೊಲಗಿಸಿದವರು. ಇಂತಹ ದೈವಾಂಶ ಸಂಭೂತನಾಗಿರುವ ಶ್ರೀಕೃಷ್ಣನ ಆರಾಧನೆ ಯಾದವ ಸಭಾದವರಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ಸಮಾಜದವರು ಒಟ್ಟು ಸೇರಿಕೊಂಡು ಮಾಡಬೇಕಿದೆ. ಭಗವಂತನ ಆರಾಧನೆಯ ಜೊತೆಗೆ ಪ್ರಕೃತಿಯ ಆರಾಧನೆಯಾಗಬೇಕು. ಸ್ವಚ್ಚತೆಗೆ ಆದ್ಯತೆ ನೀಡಬೇಕು. ಬಡವರ ಸೇವೆ ಮಾಡುವ ಮೂಲಕ ಭಗವಂತನ ಆರಾಧನೆ ಮಾಡಬೇಕು ಎಂದು ಹೇಳಿದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ರೀಕೃಷ್ಣ ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ್ದರೂ ಕೃಷ್ಣನ ಬಾಲ್ಯಲೀಲೆಯಿಂದ ಹಿಡಿದು ಎಲ್ಲಾ ಆಚರಣೆಗಳು ಇಂದಿಗೂ ಶಾಶ್ವತವಾಗಿ ನಡೆಯುತ್ತಿದೆ. ಕೃಷ್ಣ ಜನ್ಮಾಷ್ಟಮಿಯನ್ನು ವೈವಿಧ್ಯ ಪೂರ್ಣ ಆಚರಣಗಳ ಮೂಲಕ ಜಗತ್ತಿಗೆ ಸಂದೇಶ ಸಾರಲಾಗುತ್ತಿದೆ. ಜಿಲ್ಲೆಯಲ್ಲಿ ಯಾದವ ಸಭಾದವರ ಆರಾದನೆಯ ಜೊತೆಗೆ ಎಲ್ಲಾ ಸಮಾಜದವರು ಸೇರಿಕೊಂಡು ಆಚರಿಸುವ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳ ಸಂದೇಶ ನೀಡುತ್ತಿದೆ ಎಂದು ಹೇಳಿದರು.


ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಯಾದವ ಸಮುದಾಯ ನಂಬಿಕೆ, ವಿಶ್ವಾಸಕ್ಕೆ ಅರ್ಹವಾದ ಸಮಾಜ. ಉತ್ತಮ ಮಾನವೀಯ ಗುಣಗಳು ಸಮುದಾಯದವರಲ್ಲಿದ್ದು ಸಮಾಜದ ಕಷ್ಟಗಳಿಗೆ ಸ್ಪಂಧಿಸುವ ಸಮಾಜವಾಗಿದೆ. ಕೃಷ್ಣ ಜನ್ಮಾಷ್ಟಮಿಗೆ ಸರಕಾರಿ ರಜೆ ಘೋಷಣೆ ಮಾಡಬೇಕು ಎಂದು ಬೇಡಿಕೆಯು ಆರ್ಲಪದವು ಪ್ರದೇಶದಿಂದ ಬಂದಿದೆ. ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಗ್ರಾಮದ ಅಭಿವೃದ್ಧಿಯಲ್ಲಿಯೂ ಯಾದವ ಸಭಾ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಕಳೆದ 19 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಯಾದವಾ ಸಭಾ ಕೃಷ್ಣಜನ್ಮಾಷ್ಟಮಿಯು ವರ್ಷದಿಂದ ವರ್ಷಕ್ಕೆ ವಿನೂತನ ರೀತಿಯಲ್ಲಿ ನಡೆಯುತ್ತಿದೆ. ಸಣ್ಣ ಸಮಾಜವಾದರೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಯ ಜೊತೆಗೆ ಊರಿನ ಅಭಿವೃದ್ಧಿಗೆ ಬುನಾದಿ ಹಾಕುತ್ತಿದೆ ಎಂದು ಹೇಳಿದರು.


ಸನ್ಮಾನ ಸ್ವೀಕರಿಸಿದ ಮಂಗಳೂರು ವರಾಹ ಫೌಂಡೇಶನ್‌ನ ಅಧ್ಯಕ್ಷ ಗಿರೀಶ ಆಳ್ವ ಮಾತನಾಡಿ, ಯಾದವರ ಸಮುದಾಯದರು ಸಂಖ್ಯೆಯಲ್ಲಿ ಕಡಿಮೆಯಿದ್ದರು ಧರ್ಮದ ಕೆಲಸ ಸಂಘಟಿತವಾಗಿ ನಡೆಯುತ್ತಿದ್ದು ಧರ್ಮದ ಕೆಲಸಗಳಿಗೆ ಖಂಡಿತ ಜಯ ದೊರೆಯಲಿದೆ. ಜೇನುನೊಣದ ಗೂಡಿನಂತೆ ಪಾಣಾಜೆಯಲ್ಲಿ ಯುವಕರು ಒಟ್ಟು ಸೇರಿಸಿಕೊಂಡು ಆಯೋಜಿಸಿರುವುದ ಶ್ಲಾಘನೀಯವಾಗಿದೆ ಎಂದು ಹೇಳಿದ ಅವರು ಯಾದವ ಸಭಾದಿಂದ ಮಾಡಿದ ಸನ್ಮಾನ ನನ್ನ ಸಾಧನೆಗೆ ಮೆಟ್ಟಿಲು ಎಂದು ಹೇಳಿದರು.


ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಧನಂಜಯ ಮಣಿಯಾಣಿ ಆರ್ಲಪದವು ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಪೂಜಾರ ಮುಲ್ಕಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ವಿಂಶತಿ ಸಂಭ್ರಮೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಲಿಂಗ ಮಣಿಯಾಣಿ ದೇವಸ್ಯ, ಅಧ್ಯಕ್ಷ ಗೋಪಾಲ ಮಣಿಯಾಣಿ ದೇವಸ್ಯ, ಪ್ರಧಾನ ಕಾರ್ಯದರ್ಶಿ ಸುಶಾಂತ್ ಮಣಿಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ
ಕಳೆದ 19 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ವೈದಿಕರಾಗಿ ಸೇವೆ ಸಲ್ಲಿಸುತ್ತಿರುವ ವೇ.ಮೂ ಗೋಪಾಲಕೃಷ್ಣ ಅಡಿಗ, ಮಂಗಳೂರು ವರಾಹ ಫೌಂಡೇಷನ್‌ನ ಅಧ್ಯಕ್ಷ ಗಿರೀಶ್ ಆಳ್ವ, ಎನ್‌ಎಂಎಂಎಸ್ ಸ್ಕಾಲರ್‌ಶಿಪ್ ಪುರಸ್ಕೃತ ಪ್ರದೀಶ್ ಯಾದವ್ ಹಾಗೂ ವಿಶಂತಿ ಸಂಭ್ರಮೋತ್ಸವದಲ್ಲಿ ರೂ.1ಲಕ್ಷ ವೆಚ್ಚದಲ್ಲಿ ಶ್ರೀಕೃಷ್ಣನ ಬೆಳ್ಳಿ ಛಾಯ ಬಿಂಬದ ಸೇವಾಕರ್ತರಾದ ಲಲಿತಾ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರು ವಿಂಶತಿ ಕಾರ್ಯಕ್ರಮದ ಸಂಘಟಕರಾದ ಶ್ರೀಹರಿ ಹಾಗೂ ಶ್ರೀಪ್ರಸಾದ್ ಅವರನ್ನು ಗೌರವಿಸಿದರು.


ಶ್ರೀಹರಿ ನಡುಕಟ್ಟ ಸ್ವಾಗತಿಸಿದರು. ವಿಂಶತಿ ಸಂಭ್ರಮೋತ್ಸವ ಸಮಿತಿ ಜತೆ ಕಾರ್ಯದರ್ಶಿ ದಿನೇಶ್ ಯಾದವ್ ಆರ್ಲಪದವು ವಂದಿಸಿದರು. ವೇದಿಕೆ ಸಮಿತಿ ಸಂಚಾಲಕ ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಮಣಿಯಾಣಿ, ನವೀನ್ ಮಣಿಯಾಣಿ ನಿಡ್ಪಳ್ಳಿ, ಪ್ರದೀಪ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.


ಬೆಳ್ಳಿಯ ಛಾಯಾ ಬಿಂಬ ಸಮರ್ಪಣೆ;
ವಿಂಶತಿ ಸಂಭ್ರಮೋತ್ಸವದ ಸವಿ ನೆನಪಿಗಾಗಿ ಪಾಣಾಜೆ ನಡುಕಟ್ಟ ದ.ಶಿವಾನಂದ ಮಣಿಯಾಣಿ ಅವರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳ ಸೇವೆಯಾಗಿ ಸುಮಾರು ರೂ.1ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶ್ರೀಕೃಷ್ಣ ದೇವರ ಬೆಳ್ಳಿಯ ಛಾಯಾ ಬಿಂಬವು ಕಾರ್ಯಕ್ರಮದಲ್ಲಿ ಸಮರ್ಪಣೆಗೊಂಡಿತು.


ಎರಡು ದಿನಗಳ ಕಾಲ ನಡೆದ ವಿಂಶತಿ ಸಂಭ್ರಮೋತ್ಸವದಲ್ಲಿ ವಿಶೇಷ ಖಾದ್ಯಗಳೊಂದಿಗೆ ಬೆಳಿಗ್ಗೆ ಹಾಗೂ ಸಂಜೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು ಎರಡು ದಿನದ ಕಾರ್ಯಕ್ರಮದಲ್ಲಿ ಸುಮಾರು 6೦೦೦ಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಸಂಸದ ಬ್ರಿಜೇಶ್ ಚೌಟ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ಉದ್ಯಮಿಗಳಾದ ಶಿವರಾಮ ಆಳ್ವ, ರೋಷನ್ ರೈ ಬನ್ನೂರು ಸಹಿತ ಸಾವಿರಾರು ಮಂದಿ ಭಾಗವಹಿಸಿ ವಿಂಶತಿ ಸಂಭ್ರಮೋತ್ಸವವನ್ನು ಕಣ್ತುಂಬಿಕೊಂಡರು.

ಮಹಾಲಿಂಗ ಮಣಿಯಾಣಿಯವರ ಕಲ್ಪಣೆಯಂತೆ ಪ್ರಾರಂಭಗೊಂಡಿರುವ ಶ್ರೀಕೃಷ್ಣ ಜನ್ಮಾಷ್ಟಮಿಯು ಇಂದು ವಿಂಶತಿ ಸಂಭ್ರಮೋತ್ಸವದಲ್ಲಿದೆ. ಈ ಯಶಸ್ವೀ ಕಾರ್ಯಕ್ರಮದಲ್ಲಿ ಯಾದವ ಸಭಾ ನಿಮಿತ್ತ ಮಾತ್ರ. ಪಾಣಾಜೆಯ ಜನತೆ ಜಾತಿ ಮತ ಧರ್ಮವರು ತಮ್ಮ ಮನೆಯ ಕಾರ್ಯಕ್ರಮದಂತೆ ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿಂಶತಿ ಕಾರ್ಯಕ್ರಮದ ನೆನಪು ಶಾಶ್ವತ ಉಳಿಸಲು ಶ್ರೀಕೃಷ್ಣ ಬೆಳ್ಳಿಯ ಛಾಯ ಬಿಂಬವನ್ನು ರಚಿಸಲಾಗಿದೆ. ವಿಶಂತಿ ಸಂಭ್ರಮೋತ್ಸವದಲ್ಲಿ ವಿಶೇಷವಾಗಿ ಶ್ರೀಕೃಷ್ಣನ ತೊಟ್ಟಿಲೋತ್ಸವವನ್ನು ಆಯೋಜಿಸಲಾಗಿದೆ. ಎಲ್ಲಾ ಸಮಾಜದ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಯಶಸ್ವಿಯಾಗಿ ನಡೆದಿದೆ. ಈ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಷತೆಗಳನ್ನು ಸಲ್ಲಿಸುತ್ತವೆ.
-ಶ್ರೀಹರಿ ನಡುಕಟ್ಟ

LEAVE A REPLY

Please enter your comment!
Please enter your name here