






ಕಾವು: ಕಳೆದ 16ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿ ಭಾರತ ಸರ್ಕಾರದಿಂದ ಜಿಲ್ಲಾ ಪ್ರಶಸ್ತಿಗೆ ಭಾಜನವಾಗಿರುವ ಕಾವು ನನ್ಯ ತುಡರ್ ಯುವಕ ಮಂಡಲವು ಇದೀಗ ಮತ್ತೊಂದು ವಿಭಿನ್ನ ಕಾರ್ಯಕ್ರಮಕ್ಕೆ ಮುಂದಾಗಿ ಸೆ.5ರಂದು ಸಂಜೆ ನನ್ಯ ಜನಮಂಗಲ ಸಭಾಭವನದಲ್ಲಿ ಕಲಾತರಂಗ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.



ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಕಾರದೊಂದಿಗೆ ತುಡರ್ ಯುವಕ ಮಂಡಲದ ವತಿಯಿಂದ 2021ರಲ್ಲಿ ಆರಂಭಗೊಂಡಿದ್ದ ಭರತನಾಟ್ಯ ತರಬೇತಿಯಲ್ಲಿ ತರಬೇತಿ ಪಡೆದ ಮಕ್ಕಳಿಗೆ ವೇದಿಕೆ ನಿರ್ಮಿಸಿ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವುದೇ ಕಲಾತರಂಗ ಸರಣಿ ಕಾರ್ಯಕ್ರಮವಾಗಿದೆ.




ಕಲಾತರಂಗದ ಪ್ರಥಮ ಕಾರ್ಯಕ್ರಮ
ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಾವು ಶಾಖೆ ಅರ್ಪಿಸುವ ಕಲಾತರಂಗದ ಪ್ರಥಮ ಸರಣಿಯನ್ನು ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಕಲಾತರಂಗದ ಪ್ರಥಮ ಸರಣಿ ಯಲ್ಲಿ ಈಶ್ವರಮಂಗಲ ವಜ್ರಮೂಲೆಯ ಕಮಲಾಕ್ಷರವರ ಪುತ್ರಿ ಅನನ್ಯ, ಕಾವು ಹರೀಶ್ ಕುಂಜತ್ತಾಯರವರ ಪುತ್ರಿಯರಾದ ಅನಿಕಾ, ಆತ್ಮಿಕಾ, ಕುಂಟಿಕಾನ ಸತ್ಯಪ್ರಕಾಶ್ ರವರ ಪುತ್ರಿ ಪ್ರಣತಿರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಕಲಾತರಂಗದ ಪ್ರಥಮ ಸರಣಿಯಲ್ಲಿ ಹಿಮ್ಮೇಳದ ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಮೃದಂಗದಲ್ಲಿ ಶ್ಯಾಮ್ ಭಟ್ ಸುಳ್ಯ, ಪಿಟೀಲು ವಾದನದಲ್ಲಿ ತನ್ಮಯಿ ಉಪ್ಪಂಗಳರವರು ಸಹಕರಿಸಿದರು. ನಾಟ್ಯ ಶಿಕ್ಷಕಿಯರಾದ ಅಕ್ಷತಾ ಮತ್ತು ಅಪೂರ್ವರವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಗತಿಯ ಮಕ್ಕಳು ವಿವಿಧ ಜವಾಬ್ದಾರಿ ನಿರ್ವಹಿಸಿದರು. ತುಡರ್ ಯುವಕ ಮಂಡಲದ ಸದಸ್ಯರುಗಳು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.










