






ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದ ಎ ವಿ ಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಜಂಟಿಯಾಗಿ ಆಚರಿಸಲಾಯಿತು.


ಬೆಳಗ್ಗಿನಿಂದಲೇ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಣ್ಣ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ನಡೆಸಲಾಯಿತು. ಅಪರಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರ ಮೇಲಿನ ಚಿಂತನೆಯನ್ನು ತಿಳಿಸಿದರು. ಲೋಕಗುರು ಶ್ರೀಕೃಷ್ಣನ ಜನ್ಮ ದಿನವನ್ನು ಆಚರಿಸುತ್ತಿರುವುದು ಪ್ರೇರಣೆ ನೀಡುತ್ತದೆ ಎಂದು ಹೇಳಿ ಶುಭಾಶಯ ಕೋರಿದರು.



ಮುಖ್ಯ ಅತಿಥಿಯಾಗಿದ್ದ ಪಾಪೆಮಜಲು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ ಅವರು ಮಾತನಾಡಿ ಪುರಾಣ ಪುರುಷ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ನಮಗೆಲ್ಲಾ ಬದುಕಿನ ದಾರಿಯನ್ನು ಹೇಳಿಕೊಟ್ಟಿದ್ದಾನೆ. ಅದೇ ರೀತಿ ಕಲಿ ಯುಗದಲ್ಲಿ ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಶ್ರೇಷ್ಠ ಶಿಕ್ಷಕ ರಾಧಾಕೃಷ್ಣನ್ ಅವರ ಧ್ಯೇಯ, ಉದ್ದೇಶ ನಮಗೆಲ್ಲ ಆದರ್ಶವಾಗಿದೆ. ಈ ಇಬ್ಬರು ಸಹ ಗುರು ಸಮಾನರು ಅವರ ಆದರ್ಶಗಳನ್ನು ನಾವೆಲ್ಲ ಪಾಲಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹರಿಣಾಕ್ಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ ಅವರು ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕಿ ವನಿತಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶೀನಪ್ಪ ಕುಲಾಲ್, ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಲಮೇಳು, ಮುಖ್ಯಗುರು ಅಮರನಾಥ, ವಿದ್ಯಾರ್ಥಿ ನಾಯಕ ತನ್ವಿತ್ ಉಪಸ್ಥಿತರಿದ್ದರು. ಇದೇ ಸಂದರ್ಭ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಅನಿಕಾ ಶ್ರೀವಿಕಾ, ಜ್ಞಾನ ಇವರು ಪ್ರಾರ್ಥಿಸಿದರು. ವಿದ್ಯಾರ್ಥಿ ವಿಖ್ಯಾತ್ ಅವರು ಸಂವಿಧಾನ ಪೂರ್ವ ಪೀಠಿಕೆ ವಾಚಿಸಿದರು. ಶಿಕ್ಷಕಿಯರಾದ ರೀಮಾ ಲೋಬೊ ಅವರು ಸ್ವಾಗತಿಸಿದರು. ಮುಖ್ಯಗುರು ಅಮರ್ನಾಥ್ ಇವರು ಪ್ರಾಸ್ತಾನಿಕವಾಗಿ ಮಾತನಾಡಿದರು. ಸುಚಿತಾ ಮತ್ತು ಕು.ಗಾಯತ್ರಿ ಅತಿಥಿಗಳನ್ನು ಪರಿಚಯಿಸಿದರು. ಶ್ವೇತಾ ವಂದಿಸಿದರು ರಾಧಾ ಕಾರ್ಯಕ್ರಮ ನಿರೂಪಿಸಿದರು.










