






ರೂ.131 ಕೋಟಿ ವ್ಯವಹಾರ, ರೂ.18.47ಲಕ್ಷ ಲಾಭ-ಸತೀಶ್ ಗೌಡ


ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ರೂ.131 ಕೋಟಿ ವ್ಯವಹಾರ ನಡೆಸಿ ರೂ.18.47 ಲಕ್ಷ ನಿವ್ವಳ ಲಾಭಗಳಿಸಿದೆ. ಶೇ.99.87 ಸಾಲ ವಸೂಲಾತಿಯಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ಸತತ 15 ವರ್ಷಗಳಿಂದ ಎ ಶ್ರೇಣಿ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ ಅವರು ಸಂಘದ ಮಹಾಸಭೆಯಲ್ಲಿ ಹೇಳಿದರು.



ಸಭೆಯು ಬೆಳಿಯೂರುಕಟ್ಟೆಯಲ್ಲಿರುವ ಸಂಘದ ಕೇಂದ್ರ ಕಚೇರಿ ಕಟ್ಟಡದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷರು, ಸಂಘವು ವರ್ಷಾಂತ್ಯದಲ್ಲಿ ಒಟ್ಟು 2,111 ಸದಸ್ಯರಿಂದ ರೂ. 2,39,76,637 ಪಾಲು ಬಂಡವಾಳ ಹೊಂದಿದೆ. ರೂ.10,40,61,230.59 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ಡಿಸಿಸಿ ಬ್ಯಾಂಕ್ನಿಂದ 19,75,06,279 ಸಾಲ ಪಡೆದುಕೊಂಡಿದೆ. ವರದಿ ವರ್ಷದಲ್ಲಿ ಸಂಘವು ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.20,33,03,477 ಸಾಲ ವಿತರಿಸಿದ್ದು ರೂ.3,48,297 ಸಾಲ ಸುಸ್ತಿಯಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.87 ಸಾಧನೆ ಮಾಡಿದೆ. ವರದಿ ಸಾಲಿನಲ್ಲಿ ಸಂಘವು ರೂ.18,47,290.37 ನಿವ್ವಳ ಲಾಭ ಪಡೆದುಕೊಂಡಿದೆ. ಸದಸ್ಯರಿಗೆ ಶೇ.3 ಡಿವಿಎಂಡ್ ವಿತರಿಸಲಾಗುವುದು. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘವು ಗಳಿಸಿದ ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ಡಿವಿಡೆಂಡ್ ಏರಿಕೆ ಮಾಡಬೇಕು;
ಸಂಘದ ಸದಸ್ಯ ರಾಧಾಕೃಷ್ಣ ರೈಯವರು ಮಾತನಾಡಿ, ಇತರ ಸಹಕಾರಿ ಸಂಘಗಳಲ್ಲಿ ಡಿವಿಡೆಂಡ್ ಕನಿಷ್ಠ ಶೇ.10 ನೀಡುತ್ತಿದ್ದು ನಮ್ಮ ಸಂಘದಲ್ಲಿ ಕನಿಷ್ಠ ಶೇ.10 ಡಿವಿಡೆಂಡ್ ನೀಡುವಂತೆ ಒತ್ತಾಯಿಸಿದರು. ಸಂಘದ ಕೇಂದ್ರ ಕಚೇರಿಗೆ ಎರಡು ವರ್ಷಗಳ ಹಿಂದೆಯಷ್ಟೇ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಲಾಭಾಂಶದಲ್ಲಿ ಕಟ್ಟಡದ ಸಾಲದ ಮೊತ್ತ ಪಾವತಿಸಲಾಗುತ್ತಿದ್ದು ಡಿವಿಡೆಂಡ್ನ ಪ್ರಮಾಣ ಕಡಿಮೆಯಾಗಿದೆ. ಕಳೆದ ಸಾಲಿಗಿಂತ ಈ ಭಾರಿ ಲಾಭಾಂಶದಲ್ಲಿ ಏರಿಕೆಯಾಗಿದೆ. ಮುಂದೆ ವ್ಯವಹಾರಗಳು ವೃದ್ಧಿಯಾಗಿ ಹೆಚ್ಚು ಲಾಭ ಪಡೆದಂತೆ ಹೆಚ್ಚು ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಸತೀಶ್ ಗೌಡ ಹಾಗೂ ನಿರ್ದೇಶಕ ಪ್ರವೀಣ್ಚಂದ್ರ ಆಳ್ವ ತಿಳಿಸಿದರು.
ಸದಸ್ಯರಿಗೆ ಸಂಘದ ಮುಖಾಂತರ ವಿಮೆ ಮಾಡಿ:
ಯಶಸ್ವಿನಿ ಆರೋಗ್ಯ ವಿಮೆಯಿಂದ ಜನರಿಗೆ ದೊಡ್ಡ ಮಟ್ಟದ ಪ್ರಯೋಜನವಿಲ್ಲ. ಆ ಯೋಜನೆಯು ಪುತ್ತೂರಿನ ಎಲ್ಲಾ ಆಸ್ಪತ್ರೆಗಳಿಗೆ ಅನ್ವಯವಾಗುವುದಿಲ್ಲ. ಜನರಗೆ ಪ್ರಯೋಜನಕ್ಕೆ ಬಾರದೇ ಇದ್ದರೆ ಅಂತ ವಿಮೆಯ ಅವಶ್ಯಕತೆ ಇದೆಯಾ. ತುರ್ತು ಸಂದರ್ಭದಲ್ಲಿ ಜನರಿಗೆ ಯಾವ ಆಸ್ಪತ್ರೆಗೆ ಹೋಗಬೇಕು ಎಂಬ ಯೋಚನೆ ಬರುವುದಿಲ್ಲ. ಇದಕ್ಕಾಗಿ ಆರ್ಯಾಪು ಸಹಕಾರಿ ಸಂಘ ಜಾರಿ ಮಾಡುತ್ತಿರುವ ವಿಮಾ ಸೌಲಭ್ಯದ ಮಾದರಿಯಲ್ಲೇ ಬಲ್ನಾಡು ಸಂಘದಲ್ಲಿಯೂ ವಿಮೆ ಜಾರಿ ಮಾಡುವಂತೆ ಮುರಳಿಕೃಷ್ಣ ಹಸಂತಡ್ಕ ಮನವಿ ಮಾಡಿದರು. ಅಧ್ಯಕ್ಷ ಸತೀಶ್ ಗೌಡ ಮಾತನಾಡಿ, ಇದರ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಿರ್ದೇಶಕ ಎ.ಎಂ ಪ್ರಕಾಶ್ಚಂದ್ರ ಆಳ್ವ ಮಾತನಾಡಿ, ನಮ್ಮ ಸಂಘದಲ್ಲಿ ಪಿಗ್ಮಿ ಸೌಲಭ್ಯ ಪ್ರಾರಂಭಿಸಲಾಗಿದೆ. ಲಾಕರ್, ಸಭಾ ಭವನಗಳ ಸೌಲಭ್ಯಗಳಿವೆ. ಸದಸ್ಯರು ಠೇವಣಿ, ಸಾಲ ಸೌಲಭ್ಯ ಸಹಿತ ಎಲ್ಲಾ ವ್ಯವಹಾರಗಳನ್ನು ಸಂಘದ ಮುಖಾಂತರವೇ ಮಾಡಿದಾಗ ಸಂಘ ಅತ್ಯಧಿಕ ಲಾಭಗಳಿಸಲಿದೆ. ಆಗ ಸದಸ್ಯರಿಗೆ ನೀಡುವ ಡಿವಿಡೆಂಡ್ನ ಮೊತ್ತವನ್ನು ಏರಿಕೆ ಮಾಡಲಾಗುವುದು. ಹೀಗಾಗಿ ಸದಸ್ಯರು ಸಂಘದಲ್ಲಿಯೇ ವ್ಯವಹಾರ ಮಾಡಿ ಸಹಕರಿಸಬೇಕು ಎಂದು ನಿರ್ದೇಶಕ ಪ್ರಕಾಶ್ಚಂದ್ರ ಆಳ್ವ ತಿಳಿಸಿದರು.
ನಿರ್ದೇಶಕ ಎ.ಎಂ ಪ್ರವೀಣಚಂದ್ರ ಆಳ್ವ ಮಾತನಾಡಿ, ಕಳೆದ ಸಾಲಿನಲ್ಲಿ ಬಲ್ನಾಡು ಗ್ರಾಮಕ್ಕೆ ಬೆಳೆ ವಿಮಾ ಸೌಲಭ್ಯದ ಮೊತ್ತ ಪಾವತಿಯಾಗುವಾಗ ವಿಳಂಬವಾಗಿರುವುದರ ಜೊತೆಗೆ ಅತೀ ಕಡಿಮೆ ಮೊತ್ತ ರೈತರಿಗೆ ಪಾವತಿಯಾಗಿದೆ. ಇದರ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಅವರು ಸರಕಾರಕ್ಕೆ ಒತ್ತಡ ಹಾಕಿ ಮೊತ್ತ ಪಾವತಿಯಾಗುವಂತೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಸಂಘದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಸಾಲ ನೀಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಿಗೂ ಅಭಿನಂದನೆ ಸಲ್ಲಿಸಿದರು.
ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ, ಸದಸ್ಯರಾದ ಮಾಧವ ಗೌಡ ಕಾಂತಿಲ, ಜಯರಾಮ ಶೆಟ್ಟಿ, ವಿಶ್ವೇಶ್ವರ ಭಟ್ ಮೊದಲಾದವರು ವಿವಿಧ ಸಲಹೆ ಸೂಚನೆ, ಅಭಿಪ್ರಾಯಗಳನ್ನು ತಿಳಿಸಿದರು.
ಸಹಕಾರಿ ಸಂಘ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಬ್ಯಾಗ್ಗಳನ್ನು ವಿತರಿಸಲಾಗುತ್ತಿದ್ದು ಇದನ್ನು ಮಹಾಸಭೆಯಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ನಿರ್ದೇಶಕರಾದ ಮಹಮ್ಮದ್ ಶರೀಫ್, ನವೀನ್ ಕರ್ಕೇರ, ಸುರೇಶ್ ಎನ್., ನಾರಾಯಣ ಬಿ., ದಿನೇಶ, ಸುಜಾತ ರಂಜನ್ ರೈ, ಪ್ರಮೀಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸತೀಶ್ ಗೌಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ್ ಶೆಟ್ಟಿ ಡಿ. ವಾರ್ಷಿಕ ವರದಿ, ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ಅಂಬ್ರೋಸ್ ಡಿ’ ಸೋಜ ವಂದಿಸಿದರು. ಸದಸ್ಯ ನಾಗೇಶ್ ನಾಯ್ಕ ಪ್ರಾರ್ಥಿಸಿದರು. ಸಿಬ್ಬಂದಿಗಳಾದ ಪುಷ್ಪಾ ಎಂ., ಬಿಂದಿಯಾ ಹಾಗೂ ವಿನೋದ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನಡೆಯಿತು.










