“ಅಭೇದ್ಯಂ”ಪೋಸ್ಟರ್ ಅನಾವರಣ – ದೈವಿಕ ರಹಸ್ಯದ ಜೊತೆಗೆ ಬೆಳ್ಳಿಪರದೆಗೆ ಬರಲು ಸಜ್ಜಾದ ‘ಚಿನ್ನಾರಿ ಮುತ್ತ’

0

ಪುತ್ತೂರು : ಸ್ಯಾಂಡಲ್‌ವುಡ್‌ನಲ್ಲಿ ವಿಶಿಷ್ಟ ಕಥಾಹಂದರಗಳ ಮೂಲಕವೇ ಪ್ರೇಕ್ಷಕರ ಮನಗೆದ್ದಿರುವ ‘ಚಿನ್ನಾರಿ ಮುತ್ತ’ ವಿಜಯ ರಾಘವೇಂದ್ರ ಅಭಿನಯದ, ಅತಿ ಹೆಚ್ಚಿನ ಕುತೂಹಲ ಮೂಡಿಸಿರುವ ‘ಅಭೇದ್ಯಂ’ ಚಲನಚಿತ್ರದ ಅಧಿಕೃತ ಪೋಸ್ಟರ್ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಜರುಗಿದ ‘ಎಸ್‌.ಡಿ.ಎಂ ಆರೋಹಂ – 2026’ ಸಂಭ್ರಮದ ವೇದಿಕೆಯಲ್ಲಿ ಅತ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿತು.


ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರು ಪೋಸ್ಟರ್‌ ಅನಾವರಣಗೊಳಿಸಿ, ನೂತನ ಚಿತ್ರತಂಡದ ಈ ಸಾಹಸಕ್ಕೆ ಶುಭಹಾರೈಸಿದರು. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಕಾಲ್ಗೆಜ್ಜೆ ಧರಿಸಿದ ರಕ್ತಸಿಕ್ತ ಕಾಲುಗಳು ಹಾಗೂ ನಡುಕ ಹುಟ್ಟಿಸುವ ಭಯಾನಕ ವಾತಾವರಣವು ಒಂದೆಡೆಯಾದರೆ, ಗೂಢವಾದ ದೈವಿಕ ರಹಸ್ಯದ ಸುಳಿವು ನೀಡುವುದು ಇನ್ನೊಂದೆಡೆ. ಈ ಭೀಕರ ಹಾಗೂ ರೋಚಕ ದೃಶ್ಯ ವೈಭವವು ಚಿತ್ರಪ್ರೇಮಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.ಎಆರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರಭಾವಿ ನಿರ್ಮಾಪಕ ಅರುಣ್ ರೈ ತೋಡಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂದೀಪ್ ಬಾರಾಡಿ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಸಿನಿಮಾ ರೂಪುಗೊಳ್ಳುತ್ತಿದೆ. ರಾಜೇಶ್ ಕುಡ್ಲ ಅವರ ಕಾರ್ಯಕಾರಿ ನಿರ್ಮಾಣದ ಜವಾಬ್ದಾರಿ ಚಿತ್ರಕ್ಕಿದೆ.ಈ ರೋಚಕ ಕಥಾಹಂದರದಲ್ಲಿ ವಿಜಯ ರಾಘವೇಂದ್ರ ಅವರೊಂದಿಗೆ ಸಿಂಚನ ಪಿ. ರಾವ್, ಸುಂದರ್ ವೀಣಾ, ರೋಶನ್ ವೇಗಸ್, ಪ್ರವೀಣ್ ಜೈನ್, ಯುವ ಶೆಟ್ಟಿ, ಮೋಹನ್ ಶೇಣಿ, ರಾಜೇಶ್ ಧನಶಾಲೆ, ಪ್ರಕಾಶ್ ತುಮಿನಾಡು ಹಾಗೂ ದೀಪಕ್ ರೈ ಪಾಣಾಜೆ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಜೊತೆಗೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ, ಸೂರಜ್, ಸೂರ್ಯ ಹಾಗೂ ರಾಧೇಶ್ ತಮ್ಮ ನಗೆಯ ಹೊಳೆಯಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.


ತಾಂತ್ರಿಕ ವಿಭಾಗದಲ್ಲೂ ಬಲವಾದ ತಂಡವೇ ಜೊತೆಯಾಗಿದೆ. ಮಯೂರ್ ಆರ್. ಶೆಟ್ಟಿ ಅವರ ಛಾಯಾಗ್ರಹಣ, ವರುಣ್ ಉಣ್ಣಿ ಮತ್ತು ಕಿಶೋರ್ ಕುಮಾರ್ ಶೆಟ್ಟಿ ಅವರ ಸಂಗೀತ ಸಂಯೋಜನೆ, ವರುಣ್ ಉಣ್ಣಿ ಅವರ ಹಿನ್ನೆಲೆ ಸಂಗೀತ ಹಾಗೂ ವಾಸುಕಿ ವೈಭವ್ ಅವರ ಗಾಯನ ಚಿತ್ರಕ್ಕಿದೆ. ಗಣೇಶ್ ನೀರ್ಚಾಲ್ ಸಂಕಲನ, ಯುವ ಶೆಟ್ಟಿ ಅವರ ಕಾಸ್ಟಿಂಗ್ ನಿರ್ದೇಶನ ಹಾಗೂ ಸಂಭಾಷಣೆ, ಡಿ.ಬಿ.ಸಿ. ಶೇಖರ್ ಮತ್ತು ಗೌತಮ್ ಅವರ ಸಾಹಿತ್ಯ, ಮಾಸ್ ಮಾದ ಅವರ ಭರ್ಜರಿ ಸಾಹಸ ನಿರ್ದೇಶನ, ಮಹೇಶ್ ಏನ್ಮೂರು ಅವರ ಕಲಾ ನಿರ್ದೇಶನ, ಸೂರಜ್ ಹಾಗೂ ತರುಣ್ ರಾಜ್ ಅವರ ನೃತ್ಯ ನಿರ್ದೇಶನ ಮತ್ತು ಸುಶ್ರುತ್ ಭಟ್ ಅವರ ವಿಎಫ್‌ಎಕ್ಸ್ ಈ ಚಿತ್ರದ ಅತಿದೊಡ್ಡ ಆಕರ್ಷಣೆಯಾಗಿದೆ.ದೈವಿಕ ಸಸ್ಪೆನ್ಸ್ , ಥ್ರಿಲ್ಲರ್ ಅನುಭವ ನೀಡಲು ಸಜ್ಜಾಗಿರುವ ‘ಅಭೇದ್ಯಂ’ ಸಿನಿಮಾ 2026ರ ನವೆಂಬರ್‌ನಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

LEAVE A REPLY

Please enter your comment!
Please enter your name here