ಕಾಮಧೇನು ಮಹಿಳಾ ಸಹಕಾರಿ ಸಂಘದ ಮಹಾಸಭೆ, ವಿಕಲಚೇತನರಿಗೆ ಸವಲತ್ತು ವಿತರಣೆ, ಕ್ರೀಡಾ ಸಾಧಕರಿಗೆ ಸನ್ಮಾನ, ಕೈಪಿಡಿ ಬಿಡುಗಡೆ

0

ನೆಲ್ಯಾಡಿ: ನಾಲ್ಕು ವರ್ಷದ ಹಿಂದೆ ನೆಲ್ಯಾಡಿಯಲ್ಲಿ ಆರಂಭಗೊಂಡಿರುವ ಕಾಮಧೇನು ಮಹಿಳಾ ಸಹಕಾರ ಸಂಘದ 2025-26ನೇ ಸಾಲಿನ ಮಹಾಸಭೆ ಹಾಗೂ ವಿಕಲಚೇತನರಿಗೆ ವಿಶೇಷ ಸವಲತ್ತು ವಿತರಣೆ, ಕ್ರೀಡಾ ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ‘ಕಾಮಧೇನು ಸಹಕಾರ ಕಿರಣ’ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಆ.12ರಂದು ಬೆಳಗ್ಗೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.

ಮಾಸಾಶನ ಹೆಚ್ಚಳದ ಬಗ್ಗೆ ಸಿಎಂಗೆ ಮನವಿ-ಮೋಹನ್ ಪಿ.ವಿ.
ಸಂಘದ ಮಹಾಸಭೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ‘ವಿಕಲಚೇತನರಿಗೆ ಆಸರೆ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಪಿ.ವಿ.ಮೋಹನ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಿದೆ. ಇತಿಹಾಸವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಯರಿಗೆ ಇದೆ. ಮಹಿಳೆಯರಿಂದಲೇ ಆರಂಭಗೊಂಡಿರುವ ಕಾಮಧೇನು ಮಹಿಳಾ ಸಹಕಾರ ಸಂಘ ಸಮಾಜದ ಬಡವರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಅಂಗವಿಕಲರಿಗೆ ನೀಡುವ ಮಾಸಾಶನ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಅತ್ಯುತ್ತಮ ಸಹಕಾರಿ ಸಂಘ-ಶಶಿಕುಮಾರ್ ರೈ:
ಸಂಘದ ಯಶಸ್ವಿ ಪಯಣವನ್ನು ಪ್ರತಿ ಬಿಂಬಿಸುವ ಕಾಮಧೇನು ಸಹಕಾರ ಕಿರಣ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, ಉಭಯ ಜಿಲ್ಲೆಗಳಲ್ಲಿ ಅತ್ಯುತ್ತಮ ಸಹಕಾರಿ ಸಂಘ ಎಂದು ಗುರುತಿಸಿಕೊಂಡಿರುವ ಕಾಮಧೇನು ಮಹಿಳಾ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್‌ನ ಮಹಾಸಭೆಯಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮುಂದೆ ಈ ಸಂಘ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದು ಸಹಕಾರ ಕ್ಷೇತ್ರಕ್ಕೆ ಮೆರುಗು ತರಲಿ. ನೆಲ್ಯಾಡಿ ಭಾಗದ ಮಹಿಳೆಯರನ್ನು ಸೇರಿಸಿಕೊಂಡು ಉಷಾ ಅಂಚನ್ ಅವರು ಕಾಮಧೇನು ಮಹಿಳಾ ಸಹಕಾರ ಸಂಘ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಕೇವಲ ವ್ಯವಹಾರಕ್ಕೆ ಸೀಮಿತವಾಗಿಲ್ಲ-ರಕ್ಷಿತ್ ಶಿವರಾಂ
ಅತಿಥಿಯಾಗಿದ್ದ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರೂ, ಬೆಸ್ಟ್ ಫೌಂಡೇಶನ್‌ನ ಸ್ಥಾಪಕರೂ ಆದ ರಕ್ಷಿತ್ ಶಿವರಾಂ ಮಾತನಾಡಿ, ಕಾಮಧೇನು ಮಹಿಳಾ ಸಹಕಾರ ಸಂಘವು ಕೇವಲ ವ್ಯವಹಾರಕ್ಕೆ ಸೀಮಿತವಾಗದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸೋವಿಗೂ ಸ್ಪಂದಿಸುತ್ತಿವೆ. ಈ ರೀತಿಯಾಗಿ ಸಮಾಜದಲ್ಲಿನ ಅಶಕ್ತರ ನೋವಿಗೆ ಸಂಘ ಸಂಸ್ಥೆಗಳು, ಬ್ಯಾಂಕ್‌ಗಳು ಸ್ಪಂದಿಸಿದಲ್ಲಿ ನವ ಸಮಾಜ ನಿರ್ಮಾಣವಾಗಲಿದೆ. ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರಕಾರವೂ ಒತ್ತು ನೀಡುತ್ತಿದೆ. ಜಿಲ್ಲೆಗೆ ದ್ವೇಷದ ರಾಜಕಾರಣ ಬೇಡ, ಅಭಿವೃದ್ಧಿ ರಾಜಕಾರಣ ಬೇಕು ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ-ಅಶೋಕ್ ರೈ
ಇನ್ನೋರ್ವ ಅತಿಥಿ ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಮಾತನಾಡಿ, ಮಹಿಳೆ ಮನೆಯ ಜವಾಬ್ದಾರಿ ನಿರ್ವಹಿಸುವವಳು. ಇಂತಹ ಮಹಿಳೆಯರ ಕೈ ಬಲಗೊಳಿಸುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಮಹಿಳೆಯರ ಖಾತೆಗೆ ನೇರ ಹಣ ಜಮೆ ಮಾಡುತ್ತಿದೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು. ಸರಕಾರದ ಕಲ್ಪನೆಯೂ ಇದೆ ಆಗಿದೆ. ಈ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 19 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿದೆ ಎಂದು ಹೇಳಿದ ಅವರು ಕಾಮಧೇನು ಮಹಿಳಾ ಸಹಕಾರ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿ ಬಡವರ ಕಣ್ಣೀರೊರೆಸುವ ಕೆಲಸಕ್ಕೆ ದೇವರ ಅನುಗ್ರಹವಿದೆ ಎಂದರು.

ಸರಕಾರ ಅಂಗವಿಕಲರ ಮಾಸಾಶನ ಹೆಚ್ಚಿಸಲಿ-ತನುಜಾ
ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ತನುಜಾ ಅವರು ಮಾತನಾಡಿ, ಅಂಗವಿಕಲರಿಗೆ ನೀಡುವ ಮಾಸಾಶನ ಹೆಚ್ಚಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತರಬೇಕು. ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಅಂಗವಿಕಲರಿಗಾಗಿ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ನೀಡುವ ಎಂದರು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಆರೋಗ್ಯ ಇಲಾಖೆಯ ಸೆಲಿನಾ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಮೆಸ್ಕಾಂ ಅಧ್ಯಕ್ಷ ಹರೀಶ್‌ಕುಮಾರ್, ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಪ್ರಾಂಶುಪಾಲ ರೆ.ಫಾ.ಡಾ| ವರ್ಗೀಸ್ ಕೈಪನಡ್ಕ, ಎಸ್‌ಎಲ್‌ವಿ ಬುಕ್‌ನ ದಿವಾಕರ ದಾಸ್ ಅವರ ಸಹೋದರ ಸುರೇಶ್, ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ವಿಜಯಕುಮಾರ್ ಸೊರಕೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷೆ ಉಷಾ ಅಂಚನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕಿ ವಿನೀತಾ ಎಂ.ಬಿ., ವಂದಿಸಿದರು. ಸುಧೀರ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ಮೇಘನ ಶೈನ್, ನಿರ್ದೇಶಕರಾದ ಶ್ರೀಲತಾ ಸಿ.ಹೆಚ್., ರವಿ ಡಿ., ವಾರಿಜಾಕ್ಷಿ, ಮೈತ್ರಿ, ಪ್ರವೀಣಿ ಸುಧಾಕರ ಶೆಟ್ಟಿ, ಶಾಲಿನಿ, ಸಂಪಾವತಿ, ಜಯಂತಿ ಬಿ.ನಾಯಕ್, ಡೈಸಿ ವರ್ಗೀಸ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತನ್ಯ, ಎಕೌಂಟೆಂಟ್ ರಶ್ಮಿತಾ ಬಿ.ಆರ್., ಗುಮಾಸ್ತರಾದ ಶ್ವೇತಾಕುಮಾರಿ, ಆದರ್ಶ, ಸೇವಾಪ್ರತಿನಿಧಿಗಳಾದ ದಿವ್ಯ ಪಿ., ಕುಸುಮಾವತಿ, ಪಿಗ್ಮಿ ಸಂಗ್ರಾಹಕರಾದ ಸವಿತಾ, ಹೇಮಚಂದ್ರ, ಗಣೇಶ, ಪ್ರಹ್ಲಾದ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಹಲವು ಗಣ್ಯರು ಉಪಸ್ಥಿತರಿದ್ದರು.


ಅಂಗವಿಕಲರಿಗೆ ಸನ್ಮಾನ
ಅಂಗವೈಕಲ್ಯತೆ ಮೆಟ್ಟಿನಿಂತು ಬದುಕು ಸಾಗುತ್ತಿರುವ ಮೂವರು ಅಂಗವಿಕಲರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಿಸಿಸಿ ಬ್ಯಾಂಕ್ ಕೊಕ್ಕಡ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕ ಇಸ್ಮಾಯಿಲ್ ಕೆ., ಬಾಬು ಗೌಡ, ಅರುಣಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಮಾರು 50 ಮಂದಿ ವಿಕಲಚೇತನರಿಗೆ ಈ ಸಂದರ್ಭದಲ್ಲಿ ಕಿಟ್ ವಿತರಣೆ ಮಾಡಲಾಯಿತು. ವಿಕಲಚೇತನರಿಗಾಗಿ ಜಾರಿಗೆ ತಂದಿದ್ದ 'ಬದುಕಿಗೊಂದು ಸೂರು' ಕಡಿಮೆ ಬಡ್ಡಿಯ ಸಾಲ ಯೋಜನೆಯಲ್ಲಿ 3 ಲಕ್ಷ ರೂ.ಸಾಲ ಪಡೆದು ಶಿರಾಡಿಯಲ್ಲಿ ಉದ್ದಿಮೆ ಆರಂಭಿಸಿರುವ ವಿನಿತಾ ಎಂ.ಬಿ.ಅವರ ಇಬ್ಬರು ಮಕ್ಕಳ ಯಶೋಗಾಥೆಯ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.
ಶೈಕ್ಷಣಿಕ/ಕ್ರೀಡಾ ಸಾಧಕರಿಗೆ ಸನ್ಮಾನ
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯದಿಕ ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾಕ್ಷೇತ್ರದ ಸಾಧಕರಾದ ಕರಾಟೆಯಲ್ಲಿ ಸಾಧನೆ ಮಾಡಿರುವ ಮಹಮ್ಮದ್ ಇಶಾನ್, ಕಬಡ್ಡಿಯಲ್ಲಿ ಸಾಧನೆ ಮಾಡಿರುವ ಕಾರ್ತಿಕ್, 'ಗಿಚ್ಚಿ ಗಿಲಿ ಗಿಲಿ' ರಿಯಾಲಿಟಿ ಶೋದಲ್ಲಿ ಮಿಂಚಿದ ಬಾಲಪ್ರತಿಭೆ ಅದ್ವಿಕಾ ಬಾಕಿಲ, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೆಲಿನಾ, ಎಸ್‌ಎಲ್‌ವಿ ಬುಕ್ ದಿವಾಕರ ದಾಸ್ ಪರವಾಗಿ ಅವರ ಸಹೋದರ ಸುರೇಶ್, ವಿಧಾನಪರಿಷತ್ ಸದಸ್ಯ ಮೋಹನ್ ಪಿ.ವಿ., ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತಿತರರನ್ನು ಸನ್ಮಾನಿಸಲಾಯಿತು. ಉತ್ತಮ ಗ್ರಾಹಕರು, ಉತ್ತಮ ಸಿಬ್ಬಂದಿ, ಉತ್ತಮ ನಿರ್ದೇಶಕಿ, ಉತ್ತಮ ಸೇವಾಪ್ರತಿನಿಧಿಗಳಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.

ದೇವಸ್ಥಾನಕ್ಕೆ 25 ಸಾವಿರ ರೂ.ದೇಣಿಗೆ:
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಇಲ್ಲಿ ನಿರ್ಮಾಣವಾಗಲಿರುವ ಬಯಲು ರಂಗಮಂಟಕ್ಕೆ ಕಾಮಧೇನು ಮಹಿಳಾ ಸಹಕಾರ ಸಂಘದ ವತಿಯಿಂದ 25 ಸಾವಿರ ರೂ.ದೇಣಿಗೆ ನೀಡಲಾಯಿತು. ಸಂಘದ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ರವೀಂದ್ರ ಇಚ್ಲಂಪಾಡಿ, ಭವಾನಿ ನಾಯ್ಕ್ ಆಲಂತಾಯ ಇವರ ಕುಟುಂಬಕ್ಕೆ ಮರಣ ನಿಧಿ ನೀಡಲಾಯಿತು.


LEAVE A REPLY

Please enter your comment!
Please enter your name here