






ಪ್ರಜಾಸೇವೆಯ ಮೂಲಕ ಸರಕಾರ ಜನರ ಬಳಿಗೆ: ಅಶೋಕ್ ಕುಮಾರ್ ರೈ


ಉಪ್ಪಿನಂಗಡಿ: ಸರಕಾರಿ ಸೇವೆಯು ಜನರ ಮನೆಬಾಗಿಲಿಗೆ ತಲುಪುವಂತಾಗಬೇಕು ಎಂಬ ಉದ್ದೇಶದಿಂದ ಸರಕಾರವನ್ನು ನಿಮ್ಮ ಬಳಿಗೆ ತರುವ ಕೆಲಸವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಂಗ್ರೆಸ್ ಸರಕಾರ ಮಾಡಿದೆ. ಅದಕ್ಕಾಗಿ ಅವರು ಪ್ರಜಾಸೇವೆ ಎಂಬ ಇಲಾಖೆಯನ್ನು ಹುಟ್ಟು ಹಾಕಿದ್ದಾರೆ. ಅದರಂತೆ ರಾಜ್ಯದ ಯಾವುದೇ ಇಲಾಖೆಗೆ ಸಲ್ಲಿಸಲ್ಪಟ್ಟ ಅರ್ಜಿಗಳು ಸಕಾಲದಲ್ಲಿ ಇತ್ಯರ್ಥವಾಗದೇ ಹೋದರೆ ರಾಜ್ಯದ ಜನತೆಗೆ ಪ್ರಜಾ ಸೇವೆಯಡಿ ನ್ಯಾಯ ದೊರಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಉಪ್ಪಿನಂಗಡಿಯ ಗ್ರಾ.ಪಂ. ಸಭಾಂಗಣದಲ್ಲಿ ಉಪ್ಪಿನಂಗಡಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನವನ್ನು ಸೆ.12ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಆಡಳಿತ ಯಂತ್ರವೇ ಜನರ ಬಳಿಗೆ ಬರುವಂತಹ ವಿನೂತನ ಸೇವೆಯನ್ನು ರಾಜ್ಯದ ಜನತೆಗಾಗಿ ಮುಖ್ಯಮಂತ್ರಿಗಳು ಒದಗಿಸಿದ್ದು, ಜನತೆ ಇದರ ಪ್ರಯೋಜನ ಪಡೆಯಬೇಕೆಂದರು. ಮುಖ್ಯ ಮಂತ್ರಿಗಳು ದ.ಕ ಜಿಲ್ಲೆಯ ಅಭಿವೃದ್ಧಿಗೆ ಪೂರ್ಣ ಬೆಂಬಲ ನೀಡುತ್ತಿದ್ದು, ಜಿಲ್ಲೆಯನ್ನು ಪ್ರವಾಸಿತಾಣವನ್ನಾಗಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಲಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಾನಿಗೊಳಗಾದ ಗಾಮಾಂತರ ಪ್ರದೇಶಗಳ ರಸ್ತೆಗಳನ್ನು ದುರಸ್ತಿಗೊಳೀಸಲು 150 ಕೋಟಿ ರೂ. ಅನುದಾನ ಲಭಿಸಲಿದೆ. ಇದರಲ್ಲಿ ಹಳೆ ರಸ್ತೆಗೆ ಡಾಮರು ಕಾಮಗಾರಿ ಹಾಗೂ ಹೊಸ ರಸ್ತೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಜನರ ರಸ್ತೆ ಬೇಡಿಕೆಗಳನ್ನು ಈಡೇರಿಸಲು 180 ಕೋ.ರೂ. ಬೇಕಾಗಿದೆ. ಅದನ್ನು ಸಲ್ಲಿಕೆಯಾದ ಎಲ್ಲಾ ಬೇಡಿಕೆಯನ್ನು ಈಡೇರಿಸಲಾಗುವುದು. ಮುಂದಿನ ವಿಧಾನ ಸಭಾ ಚುನಾವಣೆಯ ವೇಳೆಗೆ ತುಳುವನ್ನು ಹೆಚ್ಚುವರಿ ಭಾಷೆಯನ್ನಾಗಿ ಮಾಡುವ ಕೆಲಸ, ಸರಕಾರಿ ಭೂಮಿಯಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮಗೊಳಿಸುವ ಕೆಲಸ, ಕಂಬಳ, ತಡೆಗೋಡೆಗಳಿಗೆ ಅನುದಾನ ನೀಡುವ ಕೆಲಸ, ಮಠ, ಮಂದಿರ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಅನುದಾನ ನೀಡುವ ಕೆಲಸವನ್ನು ಸರಕಾರ ಮಾಡಲಿದ್ದು, ಈ ಮೂಲಕ ನುಡಿದಂತೆ ನಡೆದ ಸರಕಾರ ಎಂಬ ಹೆಗ್ಗಳಿಕೆಗೆ ಕಾಂಗ್ರೆಸ್ ಸರಕಾರ ಪಾತ್ರವಾಗಲಿದೆ. ಮುಖ್ಯಮಂತ್ರಿಯವರು ತನ್ನನ್ನು ಪ್ರಜಾಸೇವಕರು ಎಂದುಕೊಳ್ಳುತ್ತಿದ್ದು, ಅವರೊಂದಿಗೆ ನಾವೆಲ್ಲಾ ಪ್ರಜಾಸೇವಕರಾಗಿದ್ದುಕೊಂಡು ನಿಮ್ಮ ಕೆಲಸ ಮಾಡಿಕೊಡಲು ಬದ್ಧರಾಗಿದ್ದೇವೆ. ಈ ಕಾರ್ಯಕ್ರಮವನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕಿದ್ದು, ಇಲ್ಲಿ ರಸ್ತೆ, ನಿವೇಶನ ಮುಂತಾದ ಹೊಸ ಬೇಡಿಕೆಗಳನ್ನು ಸಲ್ಲಿಸಬೇಡಿ. 94 ಸಿ, 94ಸಿಸಿ, ಅಕ್ರಮ- ಸಕ್ರಮ, ಪ್ಲಾಟಿಂಗ್ ಇನ್ನಿತರ ಕೆಲಸಗಳಿಗೆ ಈ ಹಿಂದೆ ಅರ್ಜಿ ಸಲ್ಲಿಸಿ ಅದು ಇತ್ಯರ್ಥವಾಗದೇ ಉಳಿದಿದ್ದರೆ ಅದರ ದೂರು ಅರ್ಜಿಯನ್ನು ಇಲ್ಲಿ ನೀಡಿ. ನಿಮ್ಮ ಕೆಲಸವನ್ನು ಒಂದೋ ಇಲ್ಲೇ ಇಲ್ಲದಿದ್ದಲ್ಲಿ ಅರ್ಜಿ ಪಡೆದು ಮುಂದಿನ ದಿನಗಳಲ್ಲಿ ಮಾಡಿಕೊಡುತ್ತೇವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ತಹಶೀಲ್ದಾರ್ ಎಸ್.ಬಿ. ಕೂಡಲಗಿ, ಜನರ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡುವ ಉದ್ದೇಶದಿಂದ ಸರಕಾರ ಪ್ರಜಾಸೇವೆ ಎಂಬ ಇಲಾಖೆಯನ್ನು ಸರಕಾರ ಹುಟ್ಟು ಹಾಕಿದ್ದು, ಇಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ, ತ್ವರಿತಗತಿಯಲ್ಲಿ ಅದನ್ನು ಇತ್ಯರ್ಥ ಪಡಿಸಲಾಗುವುದು ಎಂದರು.




ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆಯಾಗುತ್ತಿರುವ ಶೂಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಹಲವು ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕಗಳು ಬಾರದಿರುವುದರಿಂದ ಸಮಸ್ಯೆಯಾಗಿದ್ದು, ಪಠ್ಯ ಪುಸ್ತಕವನ್ನು ಶೀಘ್ರವಾಗಿ ವಿತರಿಸಬೇಕು ಎಂದು 34 ಕಲಂದರ್ ಶಾಫಿ ದೂರು ನೀಡಿದರು. ಅಲ್ಲದೇ, ಪಿಂಚಣಿ ಸಮಸ್ಯೆ, ಪಹಣಿ ಸಮಸ್ಯೆ ಸೇರಿದಂತೆ ಹಲವು ಇತ್ಯರ್ಥವಾಗದ ಅರ್ಜಿಗಳ ಬಗ್ಗೆ ಸಾರ್ವಜನಿಕರು ಈ ಸಂದರ್ಭ ಅಹವಾಲು ನೀಡಿದರು.
ವೇದಿಕೆಯಲ್ಲಿ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್, ವಲಯ ಅರಣ್ಯಾಧಿಕಾರಿ ಕಿರಣ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಹೋಬಳಿ, ಗ್ರಾಮ ಮಟ್ಟದ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ವಿಕ್ರಂ ಶೆಟ್ಟಿ ಅಂತರ, ಜಯಪ್ರಕಾಶ್ ಕೋಡಿಂಬಾಡಿ, ಶಬೀರ್ ಕೆಂಪಿ, ನಝೀರ್ ಮಠ, ಅಬ್ದರ್ರಶೀದ್ ಮಠ, ಆದಂ ಕೊಪ್ಪಳ, ಇಬ್ರಾಹೀಂ ಆಚಿ, ಝಕಾರಿಯಾ ಕೊಡಿಪ್ಪಾಡಿ, ಫಾರೂಕ್ ಜಿಂದಗಿ ಮತ್ತಿತರರು ಉಪಸ್ಥಿತರಿದ್ದರು.

ಪಿಡಿಒ ವಿರುದ್ಧ ದೂರು ನೀಡಲು ಬಂದು ನಿರಾಶೆಗೊಳಗಾದರು!
ಶನಿವಾರದಂದು ಉಪ್ಪಿನಂಗಡಿಯಲ್ಲಿ ಶಾಸಕರ ನೇತೃತ್ವದಲ್ಲಿ ಪ್ರಜಾ ಸೇವೆ ಆಂದೋಲನ ಸಭೆ ನಡೆಯಲಿಕ್ಕಿದೆ ಎಂಬ ಮಾಹಿತಿ ಹರಡುತ್ತಿದ್ದಂತೆಯೇ ಪಂಚಾಯತ್ ಪಿಡಿಒ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ವಿರುದ್ದ ದೂರು ಸಲ್ಲಿಸಲು ಬಹಳಷ್ಟು ಮಂದಿ ಒಂದು ದಿನ ಹಿಂದೆಯೇ ದೂರುಗಳನ್ನು ಸಿದ್ಧಪಡಿಸಿ ಶನಿವಾರದಂದು ಸಭೆಗೆ ಆಗಮಿಸಿದರು. ಆದರೆ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಯಾವುದೇ ಸಾರ್ವಜನಿಕ ಬೇಡಿಕೆಗಳನ್ನು ಯಾ ಹೊಸ ಬೇಡಿಕೆಗಳನ್ನು ಈ ಸಭೆಯಲ್ಲಿ ಸಲ್ಲಿಸುವಂತಿಲ್ಲ. ಈ ಹಿಂದೆ ಅರ್ಜಿ ಸಲ್ಲಿಸಿ ಅದು ಇತ್ಯರ್ಥವಾಗದೇ ಇದ್ದವರು ಮಾತ್ರ ಹಿಂದಿನ ಅರ್ಜಿಯೊಂದಿಗೆ ಇಲ್ಲಿ ಸಮಸ್ಯೆಯನ್ನು ಪ್ರಸ್ತಾಪಿಸಬಹುದು ಎಂದು ಸ್ಪಷ್ಠಪಡಿಸಿದ ಬಳಿಕ ದೂರು ನೀಡಲು ಅತ್ಯುತ್ಸಾಹದಿಂದ ಬಂದಿದ್ದ ಮಂದಿ ನಿರಾಸೆಯಿಂದ ಹಿಂದಿರುಗಬೇಕಾಯಿತು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಕೆ.ಟಿ. ಗೋಪಾಲ್ ವಂದಿಸಿದರು. ಗ್ರಾಮಕರಣಿಕ ನರಿಯಪ್ಪ ಕಾರ್ಯಕ್ರಮ ನಿರೂಪಿಸಿದರು.










