- ಸಮ್ಮೇಳನಾಧ್ಯಕ್ಷ ಡಾ.ಶ್ರೀಧರ ಎಚ್.ಜಿ ಅವರಿಗೆ ವಿವೇಕಾನಂದ ಕಾಲೇಜಿನಿಂದ ಅಭಿನಂದನಾ ಸಮಾರಂಭ
ಪುತ್ತೂರು:ಸೆ.26 ಸಾಹಿತ್ಯ ಎನ್ನುವುದು ಒಂದು ಸಂಶೋಧನೆ ಇದ್ದಂತೆ.ಸಾಹಿತಿಯಾಗಬೇಕಾದರೆ ಆತ ನಿರಂತರವಾಗಿ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗುತ್ತದೆ.
ಸಾಹಿತಿಗೆ ಇರುವಷ್ಟು ಜ್ಞಾನ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಅಲ್ಲದೇ ಸಮಾಜದಲ್ಲಿ ಇರುವ ತೊಡಕುಗಳನ್ನು ಎತ್ತಿ ತೋರಿಸಬಹುದಾದ ಒಂದು ಗಟ್ಟಿತನ ಇರುವುದೂ ಕೂಡ ಸಾಹಿತಿಗಳಿಗೆ ಎಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಹೇಳಿದರು.
ಇವರು ಪುತ್ತೂರಿನಲ್ಲಿ ಸೆ.29 ಹಾಗೂ 30 ರಂದು ನಡೆಯಲಿರುವ 21 ನೇಯ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಅವರಿಗೆ ಕಾಲೇಜಿನಲ್ಲಿ ಏರ್ಪಡಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನಗಳಲ್ಲಿ ಸರ್ವಾಧ್ಯಕ್ಷತೆಯ ಜವಾಬ್ದಾರಿ ದೊರಕುವುದು ಅತ್ಯಂತ ಗೌರವದ ಸಂಗತಿ.ಇಂದು ಆ ಗೌರವ ನಮ್ಮ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಶ್ರೀಧರ ಎಚ್.ಜಿ ಅವರಿಗೆ ಸಲ್ಲಿರುವುದು ಬಹಳ ಹೆಮ್ಮೆಯ ವಿಚಾರ. ಅವರ ಪ್ರತಿಯೊಂದು ಬರವಣಿಗೆಯಲ್ಲಿ ಹೊಸತನವಿದೆ.ಸಮಾಜಕ್ಕೆ ಇವರ ಸಾಹಿತ್ಯದ ಕೊಡುಗೆ ಅಪಾರವಾದುದು.ಇವರ ಕೈಯಿಂದ ಸಾಹಿತ್ಯಗಳು ಇನ್ನಷ್ಟು ಮೂಡಿಬರಲಿ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಡಾ.ಎಚ್.ಜಿ ಶ್ರೀಧರ ಮಾತನಾಡಿ,ನಮ್ಮಲ್ಲಿ ಮುಖ್ಯವಾಗಿ ಸಂಶೋಧನ ಮನೋಭಾವವಿರಬೇಕು.ಈ ಹುಡುಕಾಟದ ಮನೋಭಾವವಿರುವುದರಿಂದ ನಾವು ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ.ಹೊಸದುದನ್ನು ಹುಡುಕುತ್ತಾ ಹೋದಂತೆ ಅನೇಕ ಸೂಕ್ಷ್ಮವಾದ ವಿಚಾರಗಳು ನಮ್ಮ ಗಮನಕ್ಕೆ ಬರುತ್ತದೆ.ಈ ಎಲ್ಲಾ ವಿಚಾರಗಳು ಸಾಹಿತ್ಯದಲ್ಲಿ ನಮ್ಮನ್ನು ಆಳವಾಗಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೋ.ವಿಷ್ಣು ಗಣಪತಿ ಭಟ್ ಮಾತನಾಡಿ, ಎಚ್.ಜಿ ಶ್ರೀಧರ ಅವರ ಸಾಹಿತ್ಯದ ಕೊಡುಗೆ ಅಪಾರವಾದುದು.ಈ ಬಾರಿಯ ಪುತ್ತೂರು ತಾಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮ ಕಾಲೇಜಿನ ಹೆಮ್ಮೆಗೆ ಇನ್ನೊಂದು ಗರಿ ಸೇರಿದಂತಾಗಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಉಪನ್ಯಾಸಕ ಡಾ.ಮನಮೋಹನ ಎಂ ಅಭಿನಂದನಾ ನುಡಿಗಳನ್ನಾಡಿದರು.ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ,ಉಪನ್ಯಾಸಕೇತರ ವೃಂದ ಹಾಗೂ ಪತ್ರಿಕೋದ್ಯಮ ವಿಭಾಗದಿಂದ ಸಮ್ಮೇಳನಾಧ್ಯಕ್ಷ ಡಾ.ಶ್ರೀಧರ ಎಚ್.ಜಿ ಅವರನ್ನು ಸನ್ಮಾನಿಸಲಾಯಿತು.
ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್ ಸ್ವಾಗತಿಸಿದರು.ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾ ಕುಮಾರಿ .ಟಿ ವಂದಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.