ಬೀಜ ನೆಟ್ಟು ಮೊಳಕೆಯೊಡೆಸಿ ಸಸಿಯನ್ನು ಮಾಡುವುದೊಂದು ಮಹಾ ಪುಣ್ಯ ಕಾರ್ಯ. ಇದು ನಾಡಿನ ಪ್ರತಿಯೊಬ್ಬ ರೈತನೂ ಸಂಭ್ರಮಪಟ್ಟು ಮಾಡುವ ನಿತ್ಯ ಕಾಯಕ. ನಾನೂ ಒಬ್ಬ ರೈತನಾಗಿ, ಓರ್ವ ಕೃಷಿಕನಾಗಿ ಭೂಮಾತೆಯ ಮಡಿಲಲ್ಲಿ ಮೊಳಕೆಯೊಡೆದು ಸೂರ್ಯನ ಬೆಳಕಿಗೆ ಮೈಯ್ಯೊಡ್ಡಿ ಬೆಳೆಯುವ ಎಳೆಯ ಸಸಿಯ ನವೋಜಾತ ಸಂಭ್ರಮವನ್ನು ಹೃದಯಾಂತರಾಳದಿಂದ ಅನುಭವಿಸುವ ಮನಸುಳ್ಳವ. ಪುತ್ತೂರು ಅಂದರೆ ಅದು ಮಹಾಲಿಂಗೇಶ್ವರ ವೈಭವದ ಜಾತ್ರೆಗೆ ಹೆಸರುವಾಸಿ. ಇಂಥ ಪುಣ್ಯದ ಮಣ್ಣಿನಲ್ಲಿ ಮತ್ತೊಂದು ವಿಶಿಷ್ಟವಾದ ಜಾತ್ರೆ ನಡೆಯಿತು. ಪುತ್ತೂರಿನ ಹೃದಯ ಭಾಗದಲ್ಲಿರುವ ಕಿಲ್ಲೆ ಮೈದಾನದಲ್ಲಿ ಈ ವಿಶಿಷ್ಟ ಸಸ್ಯ ಜಾತ್ರೆಯ ಆಯೋಜನೆಯಾಗಿತ್ತು. ಪುತ್ತೂರಿನ ಪ್ರತಿಷ್ಠಿತ ಪತ್ರಿಕಾ ಸಂಸ್ಥೆ ಸುದ್ದಿಬಿಡುಗಡೆಯ ಡಾ. ಯು.ಪಿ.ಶಿವಾನಂದರ ಕನಸಿನ ಕೂಸು ಇದು. ಅತ್ಯಂತ ವ್ಯವಸ್ಥಿತವಾಗಿ, ತುಂಬಾ ಶಿಸ್ತುಬದ್ಧವಾಗಿ ಎರಡು ದಿನಗಳ ಕಾಲ ಆಯೋಜಿಸಲ್ಪಟ್ಟ ಈ ವೈವಿಧ್ಯಮಯ ಸಸ್ಯ ಪ್ರಬೇಧಗಳ ಹಬ್ಬ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ಯಶಸ್ವಿಯಾಯಿತು. ಈ ಜಾತ್ರೆಗೆ ಸೇರಿದ್ದ ಜನಜಂಗುಳಿಯನ್ನು ನೋಡಿ ಮನಸ್ಸು ಪ್ರಫುಲ್ಲಿತವಾಯಿತು.
ಇವತ್ತಿನ ಈ ಯಾಂತ್ರಿಕ ಬದುಕಿನಲ್ಲಿ ನಾವು ತಿನ್ನುವ ಅನ್ನ ಮಾಡಲು ಅಕ್ಕಿ ಹೇಗೆ ತಯಾರಾಗುತ್ತದೆ, ಭತ್ತವನ್ನು ಬಿತ್ತಿ ಹೇಗೆ ಬೆಳೆಯುತ್ತೇವೆ ಎಂಬ ಅರಿವೇ ಇರದಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆಯೋ… ನಮ್ಮ ಊಟದ ತಟ್ಟೆಯಿಂದ ಬಾಯಿಗೆ ಸೇರುವ ಒಂದೊಂದೂ ಅನ್ನದ ಅಗುಳಿನ ಹಿಂದೆ ರೈತನ ಶ್ರಮವೆಷ್ಟಿದೆ ಎಂಬುದನ್ನೇ ಅರಿಯದ ಜನರ ನಡುವೆ ಬದುಕುತ್ತಿದ್ದೇವೆಯೋ ಎಂಬ ಭಾವನೆ ಸದಾ ನನ್ನಂಥ ರೈತರನ್ನು ಕಾಡುತ್ತದೆ. ಆದರೆ ಪುತ್ತೂರಿನ ಸುದ್ದಿ ಬಿಡುಗಡೆಯವರ ಈ ಸಸ್ಯ ಜಾತ್ರೆಯಲ್ಲಿ ಸೇರಿದ್ದ ಜನಜಂಗುಳಿಯನ್ನು ನೋಡಿದ ಮೇಲೆ, ಅದರಲ್ಲೂ ಅಲ್ಲಿ ಸೇರಿದ್ದ ಪುಟಾಣಿ ಮಕ್ಕಳು ಮತ್ತು ಯುವಜನತೆಯನ್ನು ನೋಡಿ ಮನಸ್ಸಿಗೇನೋ ಆನಂದ… ನಮ್ಮನ್ನು ಬದುಕುವಂತೆ ಮಾಡುವ, ನಮ್ಮ ಬದುಕನ್ನು ಸುಂದರಗೊಳಿಸುವ ಈ ಭೂಮಿಯ ಮೇಲಿನ ಅಸಂಖ್ಯಾತ ಸಸ್ಯ ಪ್ರಬೇಧಗಳ ಬಗ್ಗೆ ನಮ್ಮ ಜನರಿಗೆ ಅದೆಷ್ಟೊಂದು ಕುತೂಹಲವಿದೆ, ಆಸ್ಥೆಯಿದೆ, ಪ್ರೀತಿಯಿದೆ ಅಂತನ್ನೋದು ಈ ಜಾತ್ರೆಯಿಂದ ಒಂದು ರೀತಿಯಲ್ಲಿ ನಿಚ್ಚಳವಾಯಿತು… ಜನರ ಸಸ್ಯಪ್ರೇಮ ಕಂಡು ಮನದುಂಬಿ ಬಂತು. ಅಂದಹಾಗೆ ಈ ಸಸ್ಯ ಜಾತ್ರೆಯೊಳಗೆ ನಾನೂ ಕೂಡಾ ಮತ್ತೆ ಮಗುವಾದೆ….. ನಿಸರ್ಗದ ನಡುವಿನೊಳಗೊಬ್ಬ ಶಿಶುವಾದೆ ಎಂಬ ಕೃತಾರ್ಥ ಭಾವ… ಇಂಥದ್ದೊಂದು ವಿಶಿಷ್ಟ ಸಸ್ಯ ಜಾತ್ರೆಯನ್ನು ಆಯೋಜಿಸಿದ ಸುದ್ದಿ ಬಿಡುಗಡೆಯ ಡಾ. ಯು.ಪಿ. ಶಿವಾನಂದ ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಬಳಗದವರ ದೂರದೃಷ್ಟಿಗೆ ಮತ್ತು ಅವರ ಸಂಘಟನಾ ಶಕ್ತಿಗೆ ಹೃದಯಾಂತರಾಳದ ಅಭಿನಂದನೆಗಳು. ಇನ್ನು ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಪ್ರತೀ ವರ್ಷವೂ ಈ ಸಸ್ಯ ಜಾತ್ರೆ ಆಯೋಜನೆಗೊಳ್ಳಲಿ ಎಂಬ ಸದಾಶಯದೊಂದಿಗೆ