ಚೋಮ ಬೆಟ್ಟಂಪಾಡಿಯವರು ಜಾನಪದ ಕ್ಷೇತ್ರದ ಧ್ರುವತಾರೆ : ಕುಂಬ್ರ ದುರ್ಗಾಪ್ರಸಾದ್ ರೈ
ಪುತ್ತೂರು: ಆಧುನಿಕ ಕಾಲದಲ್ಲಿ ನಮ್ಮ ಜಾನಪದ ಕಲೆಗಳು ಮಾಯವಾಗಿ ಹೋಗುತ್ತಿರುವ ಸಂದರ್ಭದಲ್ಲಿ ತನ್ನದೇ ಶೈಲಿಯ ಗಾಯನ, ಭೂತ ನರ್ತನ, ಲಾವಣಿ ಹಾಡುಗಳು ಮುಂತಾದುವುಗಳ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಜಾನಪದ ಕ್ಷೇತ್ರದ ಧ್ರುವ ತಾರೆಯಾಗಿ ಚೋಮ ಬೆಟ್ಟಂಪಾಡಿ ಅವರು ಇದ್ದಾರೆ. ಜಾನಪದ ಕಲೆ ಸಂಸ್ಕೃತಿ, ನಾಡು ನುಡಿಗೆ ಅವರ ಕೊಡುಗೆ ಅಪಾರ ಎಂದು ಪುತ್ತೂರು ತುಳು ಕೂಟದ ಮಾಜಿ ಅಧ್ಯಕ್ಷ, ವಕೀಲರಾದ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಹೇಳಿದರು.
ಅವರು ಫೆ. 19 ರಂದು ಪುತ್ತೂರು ನಗರದ ಸುದಾನ ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ನಡೆದ ಜಾನಪದ ಕಲಾವಿದ ಚೋಮ ಬೆಟ್ಟಂಪಾಡಿ ಇವರ 75 ರ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೋಟರಿ ವಕೀಲರಾದ ಫಝಲ್ ರಹೀಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚೋಮ ಬೆಟ್ಟಂಪಾಡಿ ಅವರನ್ನು ಸನ್ಮಾನಿಸಿ ಮಾತನಾಡಿದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು, ಚೋಮ ಬೆಟ್ಟಂಪಾಡಿ ಅವರ ಕಲಾ ಸೇವೆಯನ್ನು ಎಲ್ಲರೂ ಗೌರವಿಸಬೇಕು ಈ ರೀತಿಯ ಹಿರಿಯ ಕಲಾವಿದರಿಂದಾಗಿ ಇಂದು ನಮ್ಮ ಜನಪದ ಕಲೆ ಸಂಸ್ಕೃತಿ ಉಳಿದಿದೆ ಇಂದಿನ ವಿದ್ಯಾರ್ಥಿಗಳು ಕೂಡ ಕಲೆ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ವೇದಿಕೆಯಲ್ಲಿ ಸುದ್ಧಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು ಪಿ ಶಿವಾನಂದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ದಲಿತ ಸೇವಾ ಸಮಿತಿ ಇದರ ಜಿಲ್ಲಾ ಅಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ನಾಟಿ ವೈದ್ಯ ಚಿದಾನಂದ ಆಲಂಕಾರು, ಸಂಗೀತ ಕಲಾವಿದ ಬಾಬಣ್ಣ ಪುತ್ತೂರು, ಹಿರಿಯ ಯಕ್ಷಗಾನ ಕಲಾವಿದ ಕೆ ಹೆಚ್ ದಾಸಪ್ಪ ರೈ, ಅಣ್ಣಪ್ಪ ಕೆರೆಕ್ಕಾಡು, ಮೊದಲಾದವರು ಉಪಸ್ಥಿತರಿದ್ದರು.
ಕೆ ವಿ ಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಗಾಯಕ ಕೃಷ್ಣ ರಾಜ್ ಅವರು ಶುಭಾಶಯ ಗೀತೆ ಹಾಡಿದರು. ಕುಶಿತ ಮತ್ತು ಸೋನಿಕ ಜನಾರ್ದನ್ ಪ್ರಾರ್ಥನೆ ಹಾಡಿದರು.ಸಾಜ ಅಂಗನವಾಡಿ ಕಾರ್ಯಕರ್ತೆ ಲಲಿತಾ ಹರೀಶ್ ಸನ್ಮಾನ ಪತ್ರವನ್ನು ವಾಚಿಸಿದರು. ರಾಷ್ಟೀಯ ಮಟ್ಟದ ವಾಲಿಬಾಲ್ ಆಟಗಾರ್ತಿ ಚಿತ್ರ ಕಾಸರಗೋಡು ವಂದಿಸಿದರು. ಮಂಗಳೂರಿನ ಆರನೇ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚೋಮ ಬೆಟ್ಟಂಪಾಡಿ ಮತ್ತು ಬಳಗದವರಿಂದ ಜಾನಪದ ಹಾಡು ಹಾಗೂ ಲಾವಣಿ ಹಾಡುಗಳ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂ ವಾದಕರಾಗಿ ಶುಭಕರ ಪುತ್ತೂರು ಹಾಗೂ ತಬಲಾ ವಾದನದಲ್ಲಿ ಜಗದೀಶ್ ಮಂಗಲ್ಪಾಡಿ ಸಹಕರಿಸಿದರು. ಸುದಾನ ಸಂಸ್ಥೆಯ ಸಂಚಾಲಕ ರೇ ವಿಜಯ ಹಾರ್ವಿನ್ ಅವರ ನೇತೃತ್ವದಲ್ಲಿ ಕೇಕ್ ತುಂಡರಿಸಿ ವಿದ್ಯಾರ್ಥಿಗಳಿಗೆ ಮತ್ತು ಸೇರಿದವರಿಗೆ ಸಿಹಿ ತಿಂಡಿ ಹಂಚಲಾಯಿತು.