ಪುತ್ತೂರು: : ಸುಮಾರು 300 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಅತ್ಯಂತ ಕಾರಣಿಕತೆಯಿಂದ ಕೂಡಿರುವ ಕೆಯ್ಯೂರು ಗ್ರಾಮದ ತೆಗ್ಗು ಶಾಲಾ ಬಳಿಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.29 ರಂದು ನಡೆಯಲಿದೆ. ಕೋಡಂಬು ಕುಟುಂಬಸ್ಥರಾದ ಪಕೀರರವರು ಆರಾಧಿಸಿಕೊಂಡು ಬಂದಿರುವ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲವನ್ನು ಅವರ ಬಳಿಕ ಪೊಡಿಯ, ಕುಂಞರವರು ನಡೆಸಿಕೊಂಡು ಬಂದರು.
ಪ್ರಸ್ತುತ ಬಾಬು ತೆಗ್ಗು ಹಾಗೂ ಕುಟುಂಬಸ್ಥರು ಊರಪರವೂರ ಭಕ್ತಾದಿಗಳ, ದಾನಿಗಳ ಸಹಕಾರ ಪಡೆದುಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಅಪಾರ ಕಾರಣಿಕತೆಯನ್ನು ಹೊಂದಿರುವ ಇಲ್ಲಿನ ಶ್ರೀ ವಿಷ್ಣುಮೂರ್ತಿ ದೈವವು ನಂಬಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ ಇದೆ. ಶ್ರೀ ದೈವದ ಒತ್ತೆಕೋಲವು ಮಾ.29 ರಂದು ನಡೆಯಲಿದೆ. ಬೆಳಿಗ್ಗೆ ಗಣಪತಿ ಹೋಮ ನಡೆದು ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಊರ ಹಾಗೂ ಪರವೂರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಲಿದೆ. ಇದೇ ಸಂದರ್ಭದಲ್ಲಿ ಮೇಲೆರಿಗೆ ಅಗ್ನಿಸ್ಪರ್ಶ ಕಾರ್ಯಕ್ರಮ ನಡೆಯಲಿದೆ.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ತಂಡ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ ನೃತ್ಯತಂಡ ಮಂಜು ಬ್ರದರ್ಸ್ ಸುಳ್ಯ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ಬಳಿಕ ಕುಳಿಚ್ಚಾಟು ದೈವದ ನರ್ತನ ಸೇವೆ ನಡೆಯಲಿದೆ. ಮಧ್ಯರಾತ್ರಿ 1 ಗಂಟೆಯಿಂದ ಶಾರದಾ ಆರ್ಟ್ಸ್ ತಂಡ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ, ಜಿಲ್ಲಾ ಪ್ರಶಸ್ತಿ ವಿಜೇತ ತಂಡ ರವಿ ರಾಮಕುಂಜ ನಾಯಕತ್ವದಲ್ಲಿ ‘ ಮಲ್ಲ ಸಂಗತಿಯೇ ಅತ್ತ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.30ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಬೆಳಿಗ್ಗೆ ಗುಳಿಗ ಕೋಲ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಗಂಧ ಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸುವಂತೆ ಬಾಬು ತೆಗ್ಗು ಮತ್ತು ಕುಟುಂಬಸ್ಥರು ಮತ್ತು ಊರಪರವೂರ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.