ಮನೆ ಮನೆ ಗಾರ್ಡನ್..ಮನೆಯಂಗಳದ ಔಷಧೀಯ ಸಸ್ಯ-ಕರಿಬೇವು (ಬೇ ಸೊಪ್ಪು)

0

Scientific Name : Murraya koenigi

ತಮಿಳುನಾಡಿನಲ್ಲಿ ಎಕರೆಗಟ್ಟಲೆ ಜಾಗದಲ್ಲಿ ಇದನ್ನು ಬೆಳೆಸುತ್ತಾರೆ. ಆಹಾರ ಹಾಗೂ ಔಷದಿ ಜಗತ್ತಿನಲ್ಲಿ ಇದಕ್ಕೆ ಬೇಡಿಕೆ ಇದೆ. ಮಧುಮೇಹದ ಔಷದಿಗಳಲ್ಲಿ ಇದನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಎಲ್ಲಾ ಉಷ್ಣಾಂಶಗಳಲ್ಲಿಯೂ ಉತ್ತಮವಾಗಿ ಚಿಗುರೊಡೆದು ಬೆಳೆಯುವ ಸಣ್ಣ ಮರವಾಗಿದೆ. 13ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ಉಷ್ಣಾಂಶದಲ್ಲಿ ಸ್ವಲ್ಪ ಬೆಳವಣಿಗೆ ಕುಂಠಿತವಾಗುತ್ತದೆ. ಒಂದು ಅಡಿ ಉದ್ದ ಅಗಲ ಎತ್ತರದ ಹೊಂಡ ಮಾಡಿ, 3 ಅಡಿ ಅಥವಾ 4 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಿ ಸಾವಯವ ಗೊಬ್ಬರ ಅಲ್ಪ ಸ್ವಲ್ಪ ನೀರಿನಲ್ಲಿಯೂ ಚೆನ್ನಾಗಿ ಚಿಗುರು ಎಲೆಗಳು ಬರುತ್ತವೆ. ಹಸಿ ಹಾಗು ಒಣ ಎಲೆಗಳಿಗೆ ಔಷಧಿಯಾಗಿ ಉತ್ತಮ ಬೇಡಿಕೆ ಇದೆ.

ಸಣ್ಣ ಸಣ್ಣ ಮರಗಳಂತೆ ಬೆಳೆದು ಕಡು ಹಸಿರಿನ ಗೊಂಚಲು ಎಲೆಗಳ ಕೊಂಬೆಗಳಿಂದ ಕೂಡಿರುತ್ತದೆ. ಎಲೆಗಳು ಜೋಡಿಯಾಗಿ ಇರದೆ ಸ್ವಲ್ಪ ಮೇಲೆ ಕೆಳಗೆ ವ್ಯವಸ್ಥಿತವಾಗಿ ಜೋಡಿಕೊಂಡಿರುತ್ತದೆ. ಕೊಂಬೆಯ ತುದಿಯಲ್ಲಿ ಎಲೆಗಳು ವೃತ್ತಾಕಾರದಲ್ಲಿ ದಟ್ಟವಾಗಿ ತುಂಬಿಕೊಂಡಿರುತ್ತದೆ. ಎಲೆಗಳಡಿಯಲ್ಲಿ ತೈಲ ಗ್ರಂಥಿಗಳಿರುತ್ತವೆ. ಈ ತೈಲದ ಪರಿಮಳವೇ ನಮ್ಮ ಮೂಗಿನ ನೇರಕ್ಕೆ ಬಡಿದು ಊಟ ಮಾಡಬೇಕೆಂಬ ಪ್ರಚೋದನೆಯಾಗುತ್ತದೆ. ಚೆನ್ನಾಗಿ ಬೆಳೆದ ಕೊಂಬೆಯ ತುದಿಯಲ್ಲಿ ಸಣ್ಣ ಸಣ್ಣ ಬಿಳಿ ಹೂಗಳು ಕಂಡುಬರುತ್ತವೆ. ಸಣ್ಣ ಸಣ್ಣ ಎಲೆಗಳು ಹಾಗೂ ಸ್ವಲ್ಪದೊಡ್ಡ ಎಲೆಗಳಾಗಿ 2 ವಿಧದ ಕರಿಬೇವುಗಳನ್ನು ನೋಡಬಹುದು. ಸಣ್ಣ ಎಲೆಯು ಹೆಚ್ಚು ಪರಿಮಳ ಅಡುಗೆಗೆ ಹೆಚ್ಚು ಸೂಕ್ತ.
ಜೀರ್ಣವೃದ್ದಿಗಾಗಿ, ವಿಷನಾಶಕವಾಗಿ ಮೂತ್ರ ಉರಿಯಲಿ, ಪೌಷ್ಠಿಕವಾಗಿ, ಮಧುಮೇಹದಲ್ಲಿ, ಕೂದಲು ಉದುರುವಿಕೆಯಲ್ಲಿ, ದೃಷ್ಠಿ ದೋಷದಲ್ಲಿ ಹಲ್ಲಿನ ವಸಡಿನ ರಕ್ಷಕವಾಗಿ ಏಕ ಮೂಲಿಕೆಯಂತೆ ಉತ್ತಮ ಪರಿಣಾಮಕಾರಿಯಾಗಿದೆ.
ದಕ್ಷಿಣ ಭಾರತದ ತಿಂಡಿ ತಿನಿಸುಗಳು ಹೆಚ್ಚು ವೈಜ್ಞಾನಿಕವಾಗಿದೆ. ಎಲ್ಲವೂ ಆರೋಗ್ಯಕ್ಕೆ ಪೂರಕ. ಒಗ್ಗರಣೆ ಅಡುಗೆಯ ಒಂದು ಅಂಶ ಅಷ್ಟೆ. ಆದರೆ ಅದಕ್ಕೆ ಬಹಳ ಮಹತ್ವವಿದೆ.ಇದರಲ್ಲಿ ತೆಂಗಿನೆಣ್ಣೆ, ಸಾಸಿ, ಕರಿಬೇವು ಇರುತ್ತದೆ. ಸಾಸಿವೆಯು ಕ್ರಿಮಿನಾಶಕಗುಣ ಹೊಂದಿದೆ. ಕರಿಬೇವಿನ ಎಲೆಗೂ ಸಣ್ಣ ಪುಟ್ಟ್ಣ ವಿಷಗಳು ಆಹಾರದಲ್ಲಿ ಸೇರಿಕೊಂಡರೆ ಅದನ್ನೂ ನಾಶ ಮಾಡುವ ಗುಣವಿದೆ. ಅದಕ್ಕಾಗಿಯೇ ಸಾರು ಸಾಂಬಾರ್ ತಯಾರಾದ ಬಳಿಕ ಒಗ್ಗರಣೆ ಹಾಕುತ್ತೇವೆ. ಕರಿಬೇವಿನಲ್ಲಿ ಇರುವ ತೈಲದ ಪರಿಣಾಮದಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಊಟ ಮಾಡುವಾಗ ಸಿಗುವ ಕರಿಬೇವಿನ ಎಲೆಗಳನ್ನು ಎಲೆ ಬದಿಗೆ ಇಡದೆ ಅದನ್ನು ಆಹಾರದೊಂದಿಗೆ ಸೇರಿಸಿ ಸೇವಿಸಬೇಕು.


ಪೌಷ್ಠಿಕ:
ಇದರಲ್ಲಿ vit.A,vit.B ಕ್ಯಾಲ್ಸಿಯಂ, ಅಮೈನೋಆಸಿಡ್, ಫಾಲಿಕ್‌ಆಸಿಡ್, ಫೈಬರ್‍ಸ್ ಇರುವುದರಿಂದ ಶರೀರದ ಕೆಲವು ಕೊರತೆಗಳನ್ನು ನೀಗಿಸುತ್ತದೆ. ಸ್ವಚ್ಚ ಎಲೆಯನ್ನು ಒಂದು ಲೋಟ ಮಜ್ಜಿಗೆಯೊಂದಿಗೆ ಅರ್ಧ ಚಮಚ ಜೀರಿಗೆ ಸೇರಿಸಿ ಅರೆದು ಬೆಳಗ್ಗೆ ೧-೨ ತಿಂಗಳು ಕುಡಿಯಬೇಕು.Vit.A, p. Carotin ಇರುವುದರಿಂದ ದೃಷ್ಠಿ ದೋಷದಲ್ಲಿಯೂ ಪ್ರಯೋಜನಕಾರಿಯಾಗಿದೆ.


ಮೂತ್ರ ಉರಿ:
ಸ್ವಲ್ಪ ಕರಿಬೇವಿನ ಎಲೆಗೆ ಕಾಲು ಚಮಚ ಎಳ್ಳು, ಕೊತ್ತಂಬರಿ ಸೇರಿಸಿ ಅರೆದು ಕುಡಿಯುವುದರಿಂದ ಉರಿಮೂತ್ರ ಕಡಿಮೆ ಆಗುವುದು. ರಕ್ತ ಸಹಿತ ಮೂತ್ರಸ್ರಾವವಾದರೂ ಪ್ರಾರಂಭಿಕ ಅವಸ್ಥೆಯಲ್ಲಿ ಹೀಗೆಯೇ ಸೇವಿಸಬೇಕು. ಇದನ್ನು ೩ರಿಂದ ೭ ದಿನ ಕುಡಿಯಬೇಕು.


ಕೂದಲು ಉದುರುವಿಕೆ :
ತಲೆ ತುರಿಕೆ, ತಲೆ ಹೊಟ್ಟು, ಕೂದಲು ಉದುರುವಿಕೆ ಇರುವಾಗ ಇದರ ಎಲೆಯ ರಸ ತೆಗೆದು ಕರಿ ಜೀರಿಗೆ (ಕಪ್ಪು ಜೀರಿಗೆ) ಪುಡಿಮಾಡಿ ಸೇರಿಸಿ ಸರಿಯಾದ ತೈಲ ಪಾಕಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಉದುರುವುದನ್ನು ತಡೆಗಟ್ಟುವುದು.ಕೂದಲ ಬೆಳವಣಿಗೆಗೆ ಸಹಕಾರಿಯಾಗುವುದು.


ಹಲ್ಲಿನ ರಕ್ಷಣೆ:
ಎಲೆಯನ್ನು ಪುಡಿ ಮಾಡಿ ಸ್ವಲ್ಪ ಉಪ್ಪು ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲಿನ ಹಾಗೂ ವಸಡಿನ ರಕ್ಷಣೆ ಮಾಡುವುದು. ಎಲೆಯಲ್ಲಿರುವ ವಿಶಿಷ್ಠ ತೈಲವು ಕ್ರಿಮಿನಾಶಕವಾಗಿ ಕೆಲಸ ಮಾಡುವುದು.

ಮಧುಮೇಹ:
ಹಸಿರೆಲೆಯ ೧ ಚಮಚ ರಸ ಅಥವಾ ನೆರಳಲ್ಲಿ ಒಣಗಿಸಿ ಪುಡಿ ಮಾಡಿದ ಎಲೆಯ ಪುಡಿಯನ್ನು ಒಂದು ಚಮಚದಷ್ಟು ಒಂದು ಲೋಟ ನೀರಿನಲ್ಲಿ ಕಲಸಿ ದಿನಕ್ಕೊಂದು ಸಲ ಕುಡಿದರೆ ಸಣ್ಣ ಪ್ರಮಾಣದ ಮಧು ಮೇಹ ನಿಯಂತ್ರಣಕ್ಕೆ ಬರುವುದು.

LEAVE A REPLY

Please enter your comment!
Please enter your name here