




- ಬಿಜೆಪಿಯ ಮತವನ್ನೇ ಹಾಳು ಮಾಡಿ ಕಾಂಗ್ರೆಸ್‌ಗೆ ಬೆಂಬಲ ಕೊಡುವಂತದ್ದು ಹಿಂದುತ್ವನಾ-ಡಾ. ಕಲ್ಲಡ್ಕ ಪ್ರಭಾಕರ್ ಭಟ್
- ಬೃಹತ್ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಭಾರತ ಮಾತ ಪೂಜನಾ
ಕಾಣಿಯೂರು: ಭಾರತದ ಇತಿಹಾಸ ಸಾವಿರಾರು ವರ್ಷ. ಭಾರತ ಆಧ್ಯಾತ್ಮಿಕ ಚಿಂತನೆ ಮಾಡಿಕೊಂಡು ಬಂದಿರುವ ದೇಶ. ಧರ್ಮ, ಸಂಸ್ಕೃತಿ ಆಧಾರದಲ್ಲಿ ಜೀವನ ಮೌಲ್ಯ ಇಟ್ಟುಕೊಂಡು ಬಂದಿರುವ ದೇಶ ಎಂದು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.



ಅವರು ಮೇ 3ರಂದು ಸಂಜೆ ಪುತ್ತಿಲ ಕೆರೆಮನೆ ಕಟ್ಟೆಯಲ್ಲಿ ನಡೆದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಈ ದೇಶ ಹಿಂದೂಗಳ ದೇಶ. ಹಿಂದುತ್ವವೇ ಮೂಲ ಚಿಂತನೆ ಎಂದು ಬೆಳೆದುಕೊಂಡು ಬಂದಿರುವ ಪಕ್ಷ ಬಿಜೆಪಿ. ಅದಕ್ಕೋಸ್ಕರ ಭಾರತೀಯ ಜನತಾ ಪಾರ್ಟಿಯನ್ನು ಬೆಳೆಸಿಕೊಂಡು ಬರಲಾಗಿದೆ. ಪಿಎಫ್‌ಐಯಂತಹ ದೇಶದ್ರೋಹದ ಸಂಘಟನೆಯನ್ನು ದಮನ ಮಾಡಲು ಮೇ 10 ಒಳ್ಳೆಯ ಕಾಲ ಎಂದು ಹೇಳಿದ ಅವರು, ಪಕ್ಷ ಇಲ್ಲ, ಸಂಘಟನೆ ಇಲ್ಲ. ಅಂತಹವರು ಏನು ಮಾಡಬಹುದು ಎಂಬುದು ಅರ್ಥ ಆಗ್ತಾ ಇಲ್ಲ. ಪಕ್ಷೇತರರಾಗಿ ನಿಂತವರು ಸ್ವಂತ ಸಾಮರ್ಥ್ಯದಿಂದ ಮತ ಕೇಳಲಿ. ಮೋದಿಜಿ, ಯೋಗಿಜಿ ಹೆಸರು ಹೇಳಿಕೊಂಡು ಮತ ಕೇಳುವುದು ಬೇಡ ಎಂದು ಅವರು ಪರೋಕ್ಷವಾಗಿ ಅರುಣ್ ಕುಮಾರ್ ಪುತ್ತಿಲರಿಗೆ ಹೇಳಿದರು.





ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುವ ಚುನಾವಣೆ ಇದು: ಇದು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನಡೆಯುವ ಚುನಾವಣೆ, ಪಕ್ಷದ ಆಧಾರದಲ್ಲಿ ಸರಕಾರ ರಚನೆ ಆಗುತ್ತೆ ಹೊರತು, ವ್ಯಕ್ತಿ ಆಧಾರದಲ್ಲಿ ಸರಕಾರ ರಚನೆ ಆಗಲು ಸಾಧ್ಯನೇ ಇಲ್ಲ. ವ್ಯಕ್ತಿ ಏನೇ ಆಗಿರಲಿ ಅವನಿಗೆ ಯಾವುದೇ ರೀತಿಯ ಚೌಕಟ್ಟು ಇರುವುದಿಲ್ಲ. ಅವನನ್ನು ಕೇಳುವುದಕ್ಕೆ ಯಾರು ಇದ್ದಾರೆ, ಅವನು ಹೋದದ್ದೆ ದಾರಿ, ನಡೆದದ್ದೆ ದಾರಿ ಎಂದ ಡಾ. ಪ್ರಭಾಕರ ಭಟ್ ಅವರು, ಪಕ್ಷಕ್ಕೆ ಆದರೆ ಕೇಳುವವರು ಇದ್ದಾರೆ, ಅವನು ತಪ್ಪು ಮಾಡಿದರೆ ಸರಿ ದಾರಿಯಲ್ಲಿ ಹೋಗು ಎಂದು ಹೇಳುವವರು ಇದ್ದಾರೆ, ಯಾವ ಕೆಲಸವನ್ನು ಮಾಡು ಎಂದು ದೃಷ್ಠಿಕೋನ ಕೊಡುವವರು ಇದ್ದಾರೆ, ಯಾರೋ ಒಬ್ಬ ಸ್ವತಂತ್ರವಾಗಿ ಚುನಾವಣೆಗೆ ನಿಂತರೆ ಅವನನ್ನು ಯಾರು ಕೇಳುತ್ತಾರೆ. ಅವನು ಏನು ಬೇಕಾದರೂ ಮಾಡಬಹುದು ಸ್ವತಂತ್ರವಾಗಿರುವವರಿಗೆ ಯಾವುದೇ ಅಸ್ತಿತ್ವವಿರುವುದಿಲ್ಲ ನೆನಪಿಟ್ಟುಕೊಳ್ಳಿ ಎಂದರು.
ಬಿಜೆಪಿಯ ವಿರೋಧವೇ ಹೋದವರು ಮತ್ತೆ ಬಿಜೆಪಿಗೆ ಬೆಂಬಲ ನೀಡುತ್ತಾರಂತೆ: ಅವರಿಗೆ ತಾನು ಗೆಲ್ಲಬೇಕು ಯಾರ ಆಧಾರದಲ್ಲಿ ಎಂದು ಕೇಳಿದರೆ ಅದು ಮೋದಿಯವರ ಆಧಾರದಿಂದ, ಅಮಿತ್ ಶಾ ಅವರ ಆಧಾರದಿಂದ, ಯೋಗಿಯ ಆಧಾರದಿಂದ ಎಂತ ದೌರ್ಭಾಗ್ಯ ಬಂದಿದೆ ನಿಮಗೆ. ನೀವು ಅವರನ್ನೇ ವಿರೋಧ ಮಾಡುತ್ತಿರುವುದು. ಬಿಜೆಪಿಯನ್ನೇ ವಿರೋಧ ಮಾಡುತ್ತಿರುವುದು, ಬಿಜೆಪಿಯ ನಾಯಕನೇ ಮೋದಿಯವರು, ಬಿಜೆಪಿಯ ನಾಯಕರೇ ಅಮಿತ್ ಶಾ, ಬಿಜೆಪಿಯ ನಾಯಕನೇ ಯೋಗಿಯವರು. ಅವರಿಗೆ ಬಿಜೆಪಿ ಬಿಟ್ಟರೆ ಅಸ್ತಿತ್ವ ಇದೆಯಾ, ಅವರ ಅಸ್ತಿತ್ವವಿರುವುದೇ ಬಿಜೆಪಿಯಲ್ಲಿ. ನಿಮ್ಮ ಅಸ್ತಿತ್ವ ಎಲ್ಲಿ. ನೀವು ಯೋಚನೆ ಮಾಡಬೇಕಿತ್ತಲ್ವಾ, ಇದು ನಾಚಿಕೆ ಅಲ್ವ, ನನಗೆ ಗೆಲ್ಲಲು ಸಾಧ್ಯವಿಲ್ಲ ನೀವೇ ಏನಾದರೂ ಆಶೀರ್ವಾದ ಮಾಡಬೇಕು ಎನ್ನುವ ಕೀಳು ಮಟ್ಟದ ರಾಜಕೀಯ ಯಾಕೆ ಮಾಡಬೇಕು. ಈಗಲೂ ಈ ರೀತಿ ಮಾಡುವವರು ಮುಂದಿನ ದಿನಗಳಲ್ಲಿ ಏನು ಮಾಡುತ್ತೀರಾ ಎಂದು ಪ್ರಭಾಕರ್ ಭಟ್ ಪ್ರಶ್ನಿಸಿದರು.
ಪಕ್ಷದಲ್ಲಿ ಅವಕಾಶ ನೀಡುತ್ತೇವೆ ಎಂದರೂ ಒಪ್ಪಿಕೊಂಡಿಲ್ಲ, ನೀವು ಅಮಿತ್ ಶಾಕ್ಕಿಂತ ದೊಡ್ಡವರಾಗಿ ಬಿಟ್ಟಿರಲ್ಲ: ತುಂಬಾ ಜನ ಹೇಳುತ್ತಿದ್ದಾರೆ ನೀವು ಅರುಣ್ ಕುಮಾರ್ ಜೊತೆ ಮಾತನಾಡಬಹುದಿತ್ತು ಎಂದು. ಆದರೆ ನಾನು ಮತ್ತು ರಂಗಮೂರ್ತಿಯವರು ಅವರಲ್ಲಿ ಮಾತನಾಡಿದ್ದೇವೆ. ಚುನಾವಣೆ ಬಂದಾಗ ನನಗೆ ಒಂದು ಸೀಟು ಕೊಡಿ ಎಂದು ಕೇಳುತ್ತಿದ್ದರು. ಹತ್ತು ವರ್ಷದ ಹಿಂದೆ ಅವರು ಬಂದಾಗ ನೀವು ಬಿಜೆಪಿಯಲ್ಲಿ ಏನಾದರೂ ಜವಾಬ್ದಾರಿ ತೆಗೆದುಕೊಳ್ಳಿ, ನಿಮಗೆ ಬೇಕು ಎಂದಾದರೆ ಈ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುತ್ತೇವೆ. ಇದನ್ನು ಮೊನ್ನೆ ಅಭ್ಯರ್ಥಿಯಾಗಿ ನಿಲ್ಲುವ ಮೊದಲು ಅವರ ಜೊತೆ ಮಾತನಾಡಿದ್ದೇವೆ ಹೌದ ಅಲ್ವ ಎಂದು ಅವರಲ್ಲಿ ಕೇಳಿ. ಒಟ್ಟಿಗೆ ಕೆಲಸ ಮಾಡುವ, ನಿಮಗೆ ಅವಕಾಶಗಳನ್ನು ಕೊಡುತ್ತೇವೆ ಎಂದಿದ್ದೇವೆ. ಬಿಜೆಪಿಯಲ್ಲಿ ಇದ್ದಾರೆ ಮಾತ್ರ ಹೊರತು ಸ್ವತಂತ್ರವಾಗಿ ಇದ್ದರೆ ಇಲ್ಲ. ನಮ್ಮದ್ದು ಎಲ್ಲಾ ನಿಷ್ಠೆ ಇರುವುದು ಪಕ್ಷಕ್ಕೆ, ದೇಶಕ್ಕೆ. ಬರೀ ವ್ಯಕ್ತಿಗೋಸ್ಕರ ಅಲ್ವೇ ಅಲ್ಲ, ಈ ಪ್ರಯತ್ನವನ್ನೇ ನಮ್ಮ ಕಡೆಯಿಂದ ಮಾಡಿದ್ದು. ಅದರೆ ನಾನು ಸ್ವತಂತ್ರವಾಗಿ ಇರುವುದು, ಆಗಲೀ ನೀವು ಸ್ವತಂತ್ರವಾಗಿ ಇರಿ, ಆದರೆ ಯಾಕೆ ಮೋದಿಯ ಹೆಸರು, ಯಾಕೆ ಮತ್ತೆ ಯೋಗಿಯ ಹೆಸರು, ಯಾಕೆ ಮತ್ತೆ ಅಮಿತ್ ಶಾ ಅವರ ಹೆಸರು ಎಂದರು. ಹಿರಿಯರು ಒಬ್ಬರು ಅವರ ಜೊತೆ ಮಾತನಾಡಿದರು. ಆದರೆ ಅವರು ಮಾತನಾಡಿಲ್ಲ ಎಂದು ಹೇಳಿದ್ದಾರೆ, ನಮ್ಮ ಜೊತೆ ರೆಕಾರ್ಡ್ ಇದೆ. ನಿಮಗೆ ಬೇರೆ ಬೇರೆ ಅವಕಾಶವನ್ನು ಕೊಡುವ ಎಂದು ಕೇಂದ್ರ ಮಟ್ಟದ 8ನೇ ಟಾಪ್‌ನಲ್ಲಿರುವರು ಕೂಡ ಮಾತನಾಡಿದರು. ಬಳಿಕ ಅಮಿತ್ ಶಾ ನಿಮ್ಮಲ್ಲಿ ಮಾತನಾಡಬೇಕು ಎಂದಿದ್ದಾರೆ, ಈಗ ಕಾನ್ಪರೆನ್ಸ್ ಕಾಲ್‌ನಲ್ಲಿ ಅವರನ್ನು ಕರೆಯಲಾ ಎಂದಾಗ ನಾನು ನನ್ನ ಕಾರ್ಯಕರ್ತರಲ್ಲಿ ಮಾತನಾಡಿ ಅರ್ಧ ಗಂಟೆಯಲ್ಲಿ ತಿಳಿಸುತ್ತೇನೆ ಎಂದವರು ಇವತ್ತಿನವರೆಗೂ ತಿಳಿಸಿಲ್ಲ. ಈಗ ಹೇಳುತ್ತಾರೆ ಅಮಿತ್ ಶಾ ನನ್ನಲ್ಲಿ ಮಾತನಾಡಿಲ್ಲ ಎನ್ನುತ್ತಾರೆ ಎಂದರು ಅಮಿತ್ ಶಾ ಅವರು ಮಾತನಾಡಲು ನೀವು ಅವಕಾಶ ಮಾಡಿ ಕೊಟ್ಟಿಲ್ಲ ಅಲ್ವ, ನೀವು ಅಮಿತ್ ಶಾ ಅವರಿಗಿಂತ ದೊಡ್ಡವರಾದ್ರಲ್ವಾ ಎಂದರು.
ಬಿಜೆಪಿಯ ಮತವನ್ನೇ ಹಾಳು ಮಾಡಿ ಕಾಂಗ್ರೆಸ್‌ಗೆ ಬೆಂಬಲ ಕೊಡುವಂತದ್ದು ಹಿಂದುತ್ವನ: ಅನೇಕರು ಹೇಳುತ್ತಾರೆ ಗೆದ್ದರೆ ಬಿಜೆಪಿಗೆ ಸೇರುತ್ತಾರೆ ಅಂತೆ ಈಗಲೂ ಬಿಜೆಪಿಗೆ ಸೇರಬಹುದಲ್ವಾ, ಅದಕ್ಕೆ ಕಾಯುವುದು ಯಾಕೆ. ಬಿಜೆಪಿಗೆ ಬರುವುದಾದರೆ ಸ್ವಾಗತ, ಅದರಲ್ಲಿ ಎರಡು ಪ್ರಶ್ನೆಯಿಲ್ಲ. ಬಿಜೆಪಿಯ ಓಟು ಹಾಳು ಮಾಡಿ ಕಾಂಗ್ರೆಸ್‌ಗೆ ಬೆಂಬಲ ಕೊಡುವಂತಹ ಪ್ರಯತ್ನ, ತಾನು ಗೆಲ್ಲುವುದಿಲ್ಲ. ಬಿಜೆಪಿಯನ್ನು ಗೆಲ್ಲಲ್ಲು ಬಿಡುವುದಿಲ್ಲ. ಮತ್ತೆ ಇವರು ಮೋದಿಯ ಶಿಷ್ಯನಾಗುವುದು ಹೇಗೆ, ಯೋಗಿಯ ಶಿಷ್ಯನಾಗುವುದು ಹೇಗೆ, ನಾನು ಸ್ವತಂತ್ರ ಎಂದು ಹೇಳಿಕೊಂಡು ಏನು ಬೇಕಾದರೂ ಮಾಡುವುದಕ್ಕೆ ಆಗುವುದಿಲ್ಲ, ಅವರಿಗೆ ಯಾವುದು ಚೌಕಟ್ಟು ಇರುವುದಿಲ್ಲ. ನಾವು ಅಂತವರಿಗೆ ಬೆಂಬಲ ಕೊಡಲು ಹೋದರೆ ಅದು ದೇಶ ದ್ರೋಹದ ಕೆಲಸ ಆದಿತ್ತು, ಅದು ಹಿಂದುತ್ವಕ್ಕೆ ಹೊಡೆತ ಕೊಡುವ ಕೆಲಸ ಎಂದ ಡಾ. ಪ್ರಭಾಕರ ಭಟ್‌ರವರು ಭಾಜಪದ ಹಿಂದುತ್ವ ದೊಡ್ಡದಾ? ಅಲ್ಲ ವ್ಯಕ್ತಿಯ ಹಿಂದುತ್ವ ದೊಡ್ಡದ ಎಂದು ಆಲೋಚಿಸಿ. ಹಿಂದುತ್ವ ನಿಜವಾದ ಅರ್ಥದಲ್ಲಿ ಇರುವುದು ಬಿಜೆಪಿ ಮಾತ್ರ ಬಿಜೆಪಿಗೆ ಬೆಂಬಲ ಮಾಡಿದರೆ ಅದು ಪುಣ್ಯದ ಕೆಲಸ ಎಂದರು.
ಇದು ಭ್ರಷ್ಟಾಚಾರ, ಹಣದ ಭ್ರಷ್ಠಚಾರದ ಜತೆಗೆ ಮಾನಸಿಕ ಭೃಷ್ಠಚಾರ. ಒಂದು ರಾಷ್ಟ್ರೀಯ ಶಕ್ತಿಗೆ ಮಾಡುತ್ತಿರುವಂತಹ ಅತ್ಯಂತ ದೇಶ ದ್ರೋಹದ ಕೆಲಸ ಇದು, ನಮ್ಮ ತರುಣರನ್ನು ಸೋಷಿಯಲ್ ಮೀಡಿಯಾದ ಮುಖಾಂತರ ಮರುಳು ಮಾಡಿ ಈ ರೀತಿಯ ಅನ್ಯಾಯಕ್ಕೆ ಪೋಷಣೆ ಮಾಡುವಂತಹ, ಅಧರ್ಮಕ್ಕೆ ಪೋಷಣೆ ಮಾಡುವಂತಹ, ದೇಶ ದ್ರೋಹಕ್ಕೆ ಪೋಷಣೆ ಮಾಡುವಂತಹ ಕಾಂಗ್ರೆಸ್‌ಗೆ ಬೆಂಬಲವನ್ನು ಕೊಡುವಂತಹ ಪ್ರಯತ್ನ ಇದು. ಒಳಗಿಂದ ಒಳಗೆ ಯೋಜನೆ ಆಗಿರಬಹುದು ಅದು ಗೊತ್ತಿಲ್ಲ, ಅದಕೋಸ್ಕರ ಈ ಒಂದು ಪ್ರಯತ್ನಕ್ಕೆ ತಡೆ ಹಾಕುವಂತಹ ಕೆಲಸ ಆಗಬೇಕು ಎಂದರು.

ದೇವಸ್ಥಾನದಲ್ಲಿ ನಡೆಯುವ ವೈದಿಕ ಕಾರ್ಯಕ್ರಮಕ್ಕೆ ಕೋರ್ಟಿನಿಂದ ತಡೆಯಾಜ್ಞೆ ತರುವುದು ಹಿಂದುತ್ವವೇ- ಡಾ.ಎಂ.ಕೆ.ಪ್ರಸಾದ್ ಭಂಡಾರಿ : ಹಿಂದೂ ಜಾಗರಣಾ ವೇದಿಕೆಯ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಭಂಡಾರಿಯವರು ಮಾತನಾಡಿ, ಎಲ್ಲಾ ಸೇರಿ ಒಳ್ಳೆಯ ಮನಸ್ಸಿನಿಂದ ಹಿಂದೂ ಸಮಾಜ ಕಟ್ಟುತ್ತಿದ್ದೇವೆ. ದೇಶ ಹಿಂದೂ ರಾಷ್ಟ್ರ ಆಗಬೇಕು. ಆದರೆ ಹಿಂದೂಗಳ ಕಷ್ಟಗಳು ಉಲ್ಭಣ ಆಗಿದೆ. ನಮ್ಮ ಉಸಿರು ಹಿಂದೂ ಆಗಬೇಕು ಎಂಬ ನಿಟ್ಟಿನಲ್ಲಿ ಹಿಂದೂಗಳಿಗೆ ತರಬೇತಿ ನಡೆದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಆದರೆ ಪ್ರಭಾಕರ ಭಟ್ಟರು ಕಲ್ಲಡ್ಕದಲ್ಲಿ ರಾಮಮಂದಿರ ಕಟ್ಟಿದರು. ಇಂದು ಹಿಂದೂ ಧರ್ಮ ಒಡೆಯುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ ಎಂದ ಅವರು, ದೇವಸ್ಥಾನದಲ್ಲಿ ನಡೆಯುವ ವೈದಿಕ ಕಾರ್ಯಕ್ರಮಕ್ಕೆ ಕೋರ್ಟಿನಿಂದ ತಡೆಯಾಜ್ಞೆ ತರುವುದು ಹಿಂದುತ್ವವೇ, ಹಿಂದೂ ನಾಯಕ ಆಗಬೇಕಾದರೆ ಎಂಎಲ್‌ಎ ಆಗಬೇಕೇ? ಹುದ್ದೆಗೋಸ್ಕರ ಹಿಂದುತ್ವ ಮಾಡಬಾರದು ಡೋಂಗಿ ಹಿಂದುತ್ವದವರಿಗೆ ಚಾನ್ಸ್ ಕೊಡ್ಬೇಡಿ ಎಂದರು. ಕಾಂಗ್ರೆಸ್ ನವರು ದೇಶಕ್ಕೆ ಯಾವುದೇ ಒಳ್ಳೆಯ ಕೆಲಸ ಮಾಡುವುದನ್ನು ವಿರೋಧಿಸುತ್ತಾರೆ. ಮತಾಂತರ, ಇನ್ನಿತರ ದೇಶದ್ರೋಹ ಕೆಲಸ ಮಾಡುವುದೇ ಅವರ ಜಾಯಮಾನ. ಮೋದಿ ಪ್ರಧಾನಿ ಆದ ಮೇಲೆ ಇದಕ್ಕೆ ಕಡಿವಾಣ ಬಿದ್ದಿದೆ ಎಂದು ಪ್ರಸಾದ್ ಭಂಡಾರಿ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ನಾಗೇಶ್ ಸೇರಾಜೆ ಅವರನ್ನು ಗೌರವಿಸಲಾಯಿತು. ಕಿಶೋರ್ ಕುಮಾರ್ ಬೊಟ್ಯಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಅಕ್ಷತಾ ವೈಯುಕ್ತಿಕ ಗೀತೆ ಹಾಡಿದರು.
ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿ..
ಪುತ್ತಿಲದ ಕೆರೆಮನೆ ಕಟ್ಟೆಯ ಸಮೀಪ ನಡೆದ ಭಾರತ ಮಾತ ಪೂಜನಾ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಮೊದಲಿಗೆ ಭಕ್ತಕೊಡಿ ಕಲ್ಲಮ ಶ್ರೀಗುರುರಾಘವೇಂದ್ರ ಮಠದಿಂದ ಮೆರವಣಿಗೆ ಸಾಗಿ ಬಳಿಕ ಪುತ್ತಿಲ ಕೆರೆಮನೆ ಕಟ್ಟೆಯಲ್ಲಿ ಸಮಾಪ್ತಿಗೊಂಡಿತ್ತು. ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು.
ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಏನು ಹೇಳಿದರು..
- ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುವ ಚುನಾವಣೆ ಇದು
- ದೇಶ ದ್ರೋಹದ ಸಂಘಟನೆಯ ದಮನಕ್ಕೆ ಮೇ 10 ಸಕಾಲ
- ತಾಕತ್ತು ಇದ್ದರೆ ಬಜರಂಗದಳ ನಿಷೇಧಿಸಿ ನೋಡಿ
- ಗೆದ್ದ ಮೇಲೆ ಬಿಜೆಪಿಗೆ ಬರುವುದಕ್ಕಿಂತ ಈಗಲೇ ಬರಬಹುದಲ್ವಾ
- ಪಕ್ಷಕ್ಕೆ ಓಟು ಕೊಡಬೇಕಾ.. ವ್ಯಕ್ತಿಗೆ ಓಟು ನೀಡಬೇಕಾ
- ಬಿಜೆಪಿಯ ಓಟು ಹಾಳು ಮಾಡಿ ಕಾಂಗ್ರೆಸ್‌ಗೆ ಬೆಂಬಲ ಕೊಡುವಂತಹ ಪ್ರಯತ್ನ
- ಪಕ್ಷದಲ್ಲಿ ಅವಕಾಶ ನೀಡುತ್ತೇವೆ ಎಂದರೂ ಒಪ್ಪಿಕೊಂಡಿಲ್ಲ
- ಬಿಜೆಪಿಯ ವಿರೋಧವೇ ಹೋದವರು ಮತ್ತೆ ಬಿಜೆಪಿಗೆ ಬೆಂಬಲ ನೀಡುತ್ತಾರೆ ಅಂತೆ..
- ನೀವು ಅಮಿತ್ ಶಾ ಅವರಿಗಿಂತ ದೊಡ್ಡವರಾಗಿ ಬಿಟ್ಟಿರಲ್ಲ
- ಹಣದ ಭ್ರಷ್ಟಾಚಾರದ ಜತೆಗೆ ಮಾನಸಿಕ ಭ್ರಷ್ಟಾಚಾರ
- ರಾಷ್ಟ್ರೀಯ ಶಕ್ತಿಗೆ ಮಾಡುತ್ತಿರುವಂತಹ ಅತ್ಯಂತ ದೇಶ ದ್ರೋಹದ ಕೆಲಸ
- ಸೋಷಿಯಲ್ ಮೀಡಿಯಾ ಮೂಲಕ ತರುಣರನ್ನು ಮರುಳು ಮಾಡುವ ಕೆಲಸ
ತಾಕತ್ತು ಇದ್ದರೆ ಬಜರಂಗದಳ ನಿಷೇಧಿಸಿ ನೋಡಿ
ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆಯನ್ನು ತರಾಟೆಗೆತ್ತಿಕೊಂಡ ಪ್ರಭಾಕರ ಭಟ್ ಅವರು, ತಾಕತ್ತು ಇದ್ದರೆ ನಿಷೇಧಿಸಿ ನೋಡಿ, ಇದು ಸಾಧ್ಯವಾಗುವ ಮಾತಾ ಎಂದರು.







