ಉಪ್ಪಿನಂಗಡಿ:ದಲಿತ ದೌರ್ಜನ್ಯ ಪ್ರಕರಣ; ಆರೋಪಿಗಳ ಬಂಧಿಸದಿದ್ದರೆ ಠಾಣೆ ಮುಂದೆ ಧರಣಿ -ದಲಿತ್ ಸೇವಾ ಸಮಿತಿಯಿಂದ ಎಚ್ಚರಿಕೆ

0

ಪುತ್ತೂರು:ನೆಕ್ಕಿಲಾಡಿ ಗ್ರಾಮದ ಅಲಿಮಾರ್ ನಿವಾಸಿ ಲೀಲಾ ಆದಿದ್ರಾವಿಡ ಅವರ ಕುಟುಂಬಕ್ಕೆ ವಂಚನೆ ಆಗಿರುವ ಹಾಗೂ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿರುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿ 10 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಪೊಲೀಸರು ಆರೋಪಿಗಳನ್ನು ಬಂಧಿಸದಿದ್ದರೆ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ನೊಂದ ಕುಟುಂಬದೊಂದಿಗೆ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬಡ ಕುಟುಂಬದ ಪ. ಜಾತಿಗೆ ಸೇರಿದ ಲೀಲಾ ಅವರ ಮುಗ್ಧತೆಯನ್ನು ಬಳಸಿಕೊಂಡು ಅದೇ ಗ್ರಾಮದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಮಾಜಿ ಸದಸ್ಯೆ ಸತ್ಯವತಿ ಎಂಬವರು ಲೀಲಾ ಅವರ ಹೆಸರಿನಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಿದ್ದ ಕುರಿತು ಜಿಲ್ಲಾಧಿಕಾರಿ ಮತ್ತು ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿತ್ತು. ಸತ್ಯವತಿ ಅವರು ಲೀಲಾ ಅವರ ಅತ್ತೆಯ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯ ಮೂಲಕ ಕೊಳವೆ ಬಾವಿ ಮಂಜೂರು ಮಾಡಿಸಿಕೊಟ್ಟು ಲೀಲಾ ಅವರ ಕೃಷಿಗೆ ಉಪಯೋಗ ಮಾಡಬೇಕಿದ್ದ ನೀರನ್ನು ತಾವೇ ಉಪಯೋಗ ಮಾಡಿಕೊಂಡು ಬೆದರಿಕೆ ಹಾಕಿದ್ದ ಆರೋಪವೂ ಇದೆ. ಸತ್ಯವತಿ ದಂಪತಿ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಬಂಧನಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಬೆದ್ರಕಾಡು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಲೀಲಾ, ಅಣ್ಣಿ ಆದಿದ್ರಾವಿಡ, ಅರುಣ್ ಬಿ. ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here