ರೂ.500ರ ಅಸಲಿ ನೋಟುಗಳೊಂದಿಗೆ ಝೆರಾಕ್ಸ್ ನೋಟುಗಳ ಹಾವಳಿ!

0

ಪುತ್ತೂರು: ಚಲಾವಣೆಯಲ್ಲಿದ್ದ ರೂ.2 ಸಾವಿರದ ನೋಟುಗಳನ್ನು ಹಿಂಪಡೆದುಕೊಳ್ಳುವ ಕುರಿತು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದ್ದು 2 ಸಾವಿರದ ನೋಟುಗಳ ವಿನಿಮಯ ಪ್ರಕ್ರಿಯೆ ಬ್ಯಾಂಕುಗಳಲ್ಲಿ ನಡೆಯುತ್ತಿದೆ. 2 ಸಾವಿರದ ನೋಟುಗಳ ಬದಲು ವ್ಯಾಪಕವಾಗಿ ರೂ.5೦೦ರ ನೋಟುಗಳ ಚಲಾವಣೆ ಅಧಿಕವಾಗುತ್ತಿರುವ ಮಧ್ಯೆಯೇ ಇದೀಗ ರೂ.500ರ ಝೆರಾಕ್ಸ್ ನೋಟುಗಳ ಹಾವಳಿ ಶುರುವಾಗಿದ್ದು ನಾಗರಿಕರನ್ನು ಆತಂಕಕ್ಕೀಡುಮಾಡಿದೆ.

ರಾಷ್ಟ್ರೀಕೃತ ಬ್ಯಾಂಕೊಂದರ ಪಿಗ್ಮಿ ಸಂಗ್ರಾಹಕನಿಗೆ ಯಾರೋ ರೂ.500ರ ಝೆರಾಕ್ಸ್ ನೋಟು ನೀಡಿದ್ದು ಜೂ.13ರಂದು ಅವರು ಬ್ಯಾಂಕಿಗೆ ಜಮೆ ಮಾಡಲೆಂದು ನೋಟುಗಳ ಎಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ಈ ಹಿಂದೆ ಖೋಟಾ ನೋಟುಗಳ ಹಾವಳಿ ಮಿತಿ ಮೀರಿದ್ದು ಒಂದು ಹಂತದಲ್ಲಿ ಇದಕ್ಕೆ ಕಡಿವಾಣ ಬಿದ್ದ ಬಳಿಕ ಇದೀಗ ಈ ರೀತಿ ಅಸಲಿ ನೋಟುಗಳ ಕಲರ್ ಝೆರಾಕ್ಸ್ ಮಾಡಿ ಚಲಾವಣೆಗೆ ಯತ್ನಿಸುತ್ತಿರುವುದು ಈ ಮೂಲಕ ಬೆಳಕಿಗೆ ಬಂದಿದೆ.

ಸುಲಭವಾಗಿ ಪತ್ತೆ ಹಚ್ಚಲಸಾಧ್ಯ

ರೂ.500ರ ಝೆರಾಕ್ಸ್ ನೋಟು ನೋಡಲು ಅಸಲಿ ನೋಟಿನಂತೆಯೇ ಇರುವುದರಿಂದ ಯಾರಿಗೂ ಸುಲಭವಾಗಿ ಇದನ್ನು ಗುರುತಿಸಲು ಸಾಧ್ಯವಿಲ್ಲ. ಝೆರಾಕ್ಸ್ ನೋಟಿನ ಕಾಗದದ ಗುಣಮಟ್ಟವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಇದು ಅಸಲಿ ನೋಟಿನ ಕಲರ್ ಝೆರಾಕ್ಸ್ ಎಂದು ಪತ್ತೆ ಮಾಡಬಹುದು. ಆದರೆ ಜನಸಾಮಾನ್ಯರ‍್ಯಾರೂ ಈ ರೀತಿ ನೋಟುಗಳನ್ನು ಸೂಕ್ಷ್ವವಾಗಿ ಗಮನಿಸದೇ ಇರುವುದರಿಂದ ಅಸಲಿ ನೋಟುಗಳ ಕಂತೆಯ ನಡುವೆ ಝೆರಾಕ್ಸ್ ನೋಟುಗಳನ್ನೂ ಸುಲಭವಾಗಿ ಚಲಾವಣೆ ಮಾಡಲೆತ್ನಿಸುವ ದುಷ್ಕೃತ್ಯದ ಹಿಂದಿರುವವರನ್ನು ಪತ್ತೆ ಮಾಡಿ ಜನ ನೆಮ್ಮದಿಯಿಂದ ವ್ಯವಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here