ಸಾಮಾನ್ಯ ಸಾರಿಗೆ, ನಗರ ಸಾರಿಗೆ, ವೇಗದೂತ ಸಾರಿಗೆ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ; ‘ಶಕ್ತಿ’ ಯೋಜನೆ ಬಗ್ಗೆ ಕೆಎಸ್‌ಆರ್‌ಟಿಸಿ ಡಿಸಿ ಬಿ.ಜಯಕರ ಶೆಟ್ಟಿ ಮಾಹಿತಿ

0

ಪುತ್ತೂರು:ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ಗೆ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿಯೂ ಸರಕಾರದ ನಿರ್ದೇಶನದಂತೆ ಚಾಲನೆ ನೀಡಲಾಗಿದೆ. ಈ ಯೋಜನೆಯಲ್ಲಿ ಸಾಮಾನ್ಯ ಸಾರಿಗೆ, ನಗರ ಸಾರಿಗೆ ಹಾಗೂ ವೇಗದೂತ ಸಾರಿಗೆ ಬಸ್‌ಗಳಲ್ಲಿ ಮಾತ್ರ ಮಾಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ರಾಜಹಂಸ, ನಾನ್ ಎಸಿ ಸ್ಲೀಪರ್ ಹಾಗೂ ಲಕ್ಸುರಿ ಬಸ್‌ಗಳು ಹಾಗೂ ಅಂತರ್‌ರಾಜ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಶಕ್ತಿ ಯೋಜನೆಯ ಬಗ್ಗೆ ‘ಸುದ್ದಿ’ ಗೆ ಮಾಹಿತಿ ನೀಡಿದ ಅವರು, ಪುತ್ತೂರು ವಿಭಾಗದಲ್ಲಿ 468 ಅನುಸೂಚಿಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ 19 ರಾಜಹಂಸ, 24 ನಾನ್ ಎಸಿ ಸ್ಲೀಪರ್ ಕಾರ್ಯಚರಿಸುತ್ತಿದ್ದು ಇವುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಮತಿಯಿಲ್ಲ. ಸಾಮಾನ್ಯ, ನಗರ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಪುತ್ತೂರು ಘಟಕಕ್ಕೆ ಸಂಬಂಧಿಸಿದಂತೆ ಅಂತರ್‌ರಾಜ್ಯ ಸಾರಿಗೆಗಳಾದ ಪುತ್ತೂರು-ಪಣಜಿ, ಪುತ್ತೂರು-ಕಾಸರಗೋಡು ಬಸ್ಸಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಇಂತಹ ಸಾರಿಗೆಗಳಲ್ಲಿ ಗಡಿ ಭಾಗ ಕೊಟ್ಯಾಡಿ, ಗಾಳಿಮುಖ ಪ್ರದೇಶಗಳ ತನಕ ಯಾವುದೇ ಸಮಸ್ಯೆಯಿಲ್ಲದೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಪುತ್ತೂರಿನಿಂದ ಕುರ್ಚಿಪಳ್ಳ, ಮಂಜೇಶ್ವರಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿಯೂ ಗಡಿಭಾಗದ ತನಕ ಉಚಿತವಾಗಿ ಪ್ರಯಾಣಿಸಿ, ಬಳಿಕ ಅಂತರ್ರಾಜ್ಯ ಪ್ರಯಾಣಕ್ಕೆ ಮಾತ್ರ ಟಿಕೆಟ್ ಪಡೆಯಬೇಕಾಗುತ್ತದೆ. ಪುತ್ತೂರು-ಪಣಜಿ, ಪುತ್ತೂರು-ಕಾಸರಗೋಡು, ಧರ್ಮಸ್ಥಳ-ತಿರುಪತಿ, ಮಡಿಕೇರಿ, ಊಟಿ, ವೆಲ್ಲಾಪುರಂಗಳಿಗೆ ತೆರಳುವಾಗ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶವಿಲ್ಲ. ಪುತ್ತೂರು-ಕಾಸರಗೋಡು, ಪುತ್ತೂರು-ಮಂಜೇಶ್ವರ, ಮಂಗಳೂರು-ಕಾಸರಗೋಡು ಮೊದಲಾದ ದೂರದ ಪ್ರಯಾಣದ ಸಂದರ್ಭದಲ್ಲಿ ರಾಜ್ಯದ ಗಡಿ ಭಾಗದ ತನಕವೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಪುತ್ತೂರು ಘಟಕದ ವ್ಯಾಪ್ತಿಯಲ್ಲಿ 116 ಅನುಸೂಚಿಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ 8 ನಾನ್ ಎಸಿ ಸ್ಲೀಪರ್ 2 ರಾಜಹಂಸ, 2 ಪಣಜಿ, 5 ಕಾಸರಗೋಡು ಬಸ್‌ಗಳಲ್ಲಿ ಹೊರತು ಪಡಿಸಿ ಉಳಿದಂತೆ ಎಲ್ಲಾ ಬಸ್‌ಗಳಲ್ಲಿಯೂ ಉಚಿತವಾಗಿ ಪ್ರಯಾಣಕ್ಕೆ ಅವಕಾಶವಿದೆ ಎಂದು ಹೇಳಿದರು.

ಸದ್ಯಕ್ಕೆ ಯಾವುದೇ ಗುರುತಿನ ಚೀಟಿ ನೀಡಿ ಪ್ರಯಾಣಿಸಬಹುದು: ಕರ್ನಾಟಕ ರಾಜ್ಯದ ಪ್ರಜೆ ಎಂದು ಗುರುತಿಸುವ ನಿಟ್ಟಿನಲ್ಲಿ ಸರಕಾರ ನೀಡಿದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಓಟರ್ ಐಡಿ, ಹಿರಿಯ ನಾಗರಿಕ ಗುರುತಿನ ಚೀಟಿ ಮೊದಲಾದ ಯಾವುದೇ ಗುರುತಿನ ಚೀಟಿ ನೀಡಿ ಸದ್ಯ ಉಚಿತವಾಗಿ ಪ್ರಯಾಣಿಸಬಹುದು. ಮೂರು ತಿಂಗಳ ಬಳಿಕ ಸರಕಾರ ಸ್ಮಾರ್ಟ್ ಕಾರ್ಡ್ ನೀಡಲಿದ್ದು ಅದನ್ನು ಪಡೆದುಕೊಂಡು ಉಚಿತವಾಗಿ ಪ್ರಯಾಣಿಸಬಹುದು. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್‌ನ್ನು ಪಡೆದುಕೊಳ್ಳಬಹುದು ಎಂದರು.

ಉಚಿತ ಪ್ರಯಾಣಕ್ಕೂ ಟಿಕೆಟ್: ಸರಕಾರಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೂ ಶೂನ್ಯ ಬೆಲೆಯ ಟಿಕೆಟ್ ನೀಡಲಾಗುತ್ತಿದೆ. ಗುರುತಿನ ಚೀಟಿಗಳಿಗೆ ಬಹಳಷ್ಟು ಒತ್ತು ನೀಡದೇ ಪ್ರಾರಂಭದಲ್ಲಿ ಮೊಬೈಲ್‌ನಲ್ಲಿ ಐಡಿ ಪ್ರೂಫ್ ತೋರಿಸಿದರೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.‌ ಮುಂದೆ ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದು ಜಯಕರ ಶೆಟ್ಟಿ ಮಾಹಿತಿ ನೀಡಿದರು.

ಬಸ್ಸುಗಳ ಕಡಿತವಿಲ್ಲ: ಗ್ರಾಮೀಣ ಭಾಗಗಳಿಗೆ ಈ ಹಿಂದಿನಂತೆ ಬಸ್‌ಗಳು ಕಾರ್ಯಾಚರಿಸುತ್ತಿದೆ. ಯಾವುದೇ ಕಡಿತ ಮಾಡಿಲ್ಲ. ಪುತ್ತೂರು-ಮಂಗಳೂರು ಮಧ್ಯೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳಿಂದ ಮಹಿಳೆಯರು ಸಾರಿಗೆ ಬಸ್‌ಗಳಿಗೆ ಬರುವ ಸಾಧ್ಯತೆಗಳಿದ್ದು ಬೆಳಿಗ್ಗೆ ಸಂಜೆ ಒತ್ತಡ ಬರುವ ಸಾಧ್ಯತೆಗಳಿವೆ. ಆದರೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್‌ಗಳನ್ನು ಕಾರ್ಯಾಚರಿಸಲು ಪ್ರಯತ್ನಿಸಲಾಗುವುದು. ಪುತ್ತೂರಿನ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್‌ಗಳೇ ಕಾರ್ಯಾಚರಿಸುತ್ತಿದ್ದು ಯಾವುದೇ ಭಾಗಗಳಿಗೆ ಬಸ್‌ಗಳ ಕೊರತೆ ಉಂಟಾಗಲು ಸಾಧ್ಯವಿಲ್ಲ. ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರ ಒತ್ತಡ ಹೆಚ್ಚಾಗಿರುವುದರಿಂದ ಹೆಚ್ಚುವರಿ ಬಸ್‌ಗಳ ಅವಶ್ಯಕತೆಯಿದ್ದು ಶಾಸಕರಿಗೆ ಮನವಿ ಮಾಡಲಾಗಿದೆ. ಮನವಿಗೆ ಪೂರಕ ಸ್ಪಂದನೆ ನೀಡಿರುವ ಶಾಸಕರು ಹೆಚ್ಚುವರಿ ಬಸ್, ಸಿಬ್ಬಂದಿಗಳನ್ನು ಒದಗಿಸುವ ಭರವಸೆ ನೀಡಿದ್ದು ಜನರ ನಿರೀಕ್ಷೆಯಂತೆ ಸೇವೆ ನೀಡಲು ಬದ್ದರಾಗಿದ್ದೇವೆ. ಕೇವಲ ಅಂತರ್‌ರಾಜ್ಯ ಬಸ್‌ಗಳಲ್ಲಿ ಮಾತ್ರ, ‘ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ’ ಎಂದು ಸ್ಟಿಕ್ಕರ್ ಅಳವಡಿಸಲಾಗಿದೆ. ಉಳಿದಂತೆ ಯಾವುದೇ ಬಸ್ಸುಗಳಲ್ಲಿ ಸ್ಟಿಕ್ಕರ್ ಅಳವಡಿಸಿಲ್ಲ ಎಂದು ತಿಳಿಸಿದರು.

ಸಿಬ್ಬಂದಿಗಳಿಗೆ ಸೂಚನೆ: ವಿದ್ಯಾರ್ಥಿಗಳಿರುವಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂಬ ಕುರಿತು ಕೆಲವು ದೂರುಗಳು ಬಂದಿದೆ. ಇದರ ಬಗ್ಗೆ ಸಿಬ್ಬಂದಿಗಳಿಗೆ ಸಾಕಷ್ಟು ತಿಳುವಳಿಕೆ ನೀಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಕರು ತುಂಬಿರುವಾಗ ಹತ್ತಿಸಿಕೊಳ್ಳುವುದು ಅಸಾಧ್ಯವಾಗಿರುತ್ತದೆ. ಅಲ್ಲದೆ ಹಿಂದೆ ಬೇರೆ ಬಸ್‌ಗಳು ಬರುವ ಮಾಹಿತಿ ಸಿಬ್ಬಂದಿಗಳಿಗಿರುವುದರಿಂದ ಅವರು ನಿಲ್ಲಿಸದೇ ಹೋಗುತ್ತಾರೆ. ಆದರೂ ವಿದ್ಯಾರ್ಥಿಗಳನ್ನು ಬಿಟ್ಟು ಬಾರದಂತೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಾಥಮಿಕ ವಿದ್ಯಾರ್ಥಿಗಳಿಗೆ ಈಗಾಗಲೇ ಉಚಿತ ಬಸ್‌ಪಾಸ್ ನೀಡಲಾಗುತ್ತಿದ್ದು ಪ್ರೊಸೆಸಿಂಗ್ ಶುಲ್ಕ ಮಾತ್ರ ವಿಧಿಸಲಾಗುತ್ತಿತ್ತು. ಪಾಸ್ ಪಡೆದುಕೊಳ್ಳದ ವಿದ್ಯಾರ್ಥಿನಿಯರೂ ಉಚಿತ ಪ್ರಯಾಣದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಡಿಸಿಯವರು ಹೇಳಿದ್ದಾರೆ.

ಸಾರ್ವಜನಿಕರು ಸೌಜನ್ಯದಿಂದ ವರ್ತಿಸಿ: ಪುತ್ತೂರು ವಿಭಾಗಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯಗಳಿಗೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಬಸ್ಸುಗಳಲ್ಲಿ ಬರುವ ನಿರೀಕ್ಷೆಯಿದೆ. ಈ ಹಿಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಲ್ಲಿ ಇನ್ನು ಮುಂದೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗುವ ಸಾಧ್ಯತೆಗಳಿವೆ. ವಾರಾಂತ್ಯ, ರಜಾ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿ ಒತ್ತಡ ಬೀಳುವ ಸಾಧ್ಯತೆಯಿದೆ. ಈ ಸಮಯದಲ್ಲಿ ಪ್ರಯಾಣಿಕರು ಚಾಲನಾ ಸಿಬ್ಬಂದಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಸಹಕರಿಸಬೇಕು ಎಂದು ಜಯಕರ ಶೆಟ್ಟಿ ವಿನಂತಿಸಿದರು

ಸಾರ್ವಜನಿಕರ ಸಹಕಾರ ಅಗತ್ಯ


ಪುತ್ತೂರಿನಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 100ಕ್ಕಿಂತ ಅಧಿಕ ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶೇ.50 ಸೀಟುಗಳನ್ನು ಪುರುಷರಿಗೆ ಮೀಸಲಿಟ್ಟು ಅನುಷ್ಟಾನ ಮಾಡುವುದು ಕಷ್ಟ ಸಾಧ್ಯ. ಸೀಟ್‌ನಲ್ಲಿ ಕುಳಿತವರನ್ನು ಎಬ್ಬಿಸುವುದು ನಿರ್ವಾಹಕರಿಗೆ ಕಷ್ಟದ ಕೆಲಸ. ಹೀಗಾಗಿ ಜನರೇ ತಿಳುವಳಿಕೆಯಿಂದ ಯಾವುದೇ ಗೊಂದಲವಾಗದಂತೆ ಸಹಕರಿಸಬೇಕು. ಪ್ರಯಾಣದ ವೇಳೆ ಸಾರ್ವಜನಿಕರು ಚಾಲನ ಸಿಬ್ಬಂದಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಸಹಕರಿಸಬೇಕು. ಒಂದೇ ಬಾರಿಗೆ ಹೆಚ್ಚುವರಿ ಬಸ್ ನೀಡುವುದು ಸರಕಾರಕ್ಕೂ ಅಸಾಧ್ಯ. ಹೀಗಾಗಿ ಇರುವ ಬಸ್‌ಗಳಲ್ಲಿ ಪ್ರಯಾಣಿಸಿ, ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿಯೇ ಒತ್ತಡ ಹಾಕದೇ ಸಾಧ್ಯವಿದ್ದಲ್ಲಿ, ಒತ್ತಡವಿಲ್ಲದ ಮಧ್ಯಾಹ್ನದ ಸಮಯದಲ್ಲಿ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕರ ಶೆಟ್ಟಿ ವಿನಂತಿಸಿದರು.

LEAVE A REPLY

Please enter your comment!
Please enter your name here