ಸರಕಾರಿ ಕೆಲಸದಲ್ಲಿ ನಿವೃತ್ತಿ ಅನಿವಾರ್ಯ : ಅಬ್ದುಲ್ ಖಾದರ್ ಮೇರ್ಲ
ಪುತ್ತೂರು: ಸರಕಾರಿ ಕೆಲಸ ಎಂದ ಮೇಲೆ ಅಲ್ಲಿ ವಯೋ ನಿವೃತ್ತಿ ಸಹಜ. ಅದರಂತೆ ಕಿರಣ್ರಾಜ್ರವರು ಕೂಡ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ. ಹಾಗಂತ ಅವರು ಮಾಡಿರುವ ಒಳ್ಳೆಯ ಕೆಲಸಗಳಿಗೆ ಯಾವತ್ತೂ ನಿವೃತ್ತಿ ಇಲ್ಲ. ಅವುಗಳು ಎಲ್ಲರ ಬಾಯಲ್ಲಿ ಸದಾ ಇರುತ್ತದೆ. ಕಿರಣ್ರಾಜ್ರವರು ತೆಗ್ಗು ಶಾಲೆಯ ಅಭಿವೃದ್ಧಿಯಲ್ಲಿ ಮಾಡಿರುವ ಕೆಲಸ ಶ್ಲಾಘನೀಯ ಎಂದು ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಹೇಳಿದರು.
ಅಬ್ದುಲ್ ಖಾದರ್ ರವರು ಜೂ.24 ರಂದು ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಮುಖ್ಯಗುರು ಕಿರಣ್ರಾಜ್ರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತೆಗ್ಗು ಶಾಲೆ ಒಂದೊಮ್ಮೆ ಮುಚ್ಚಿ ಹೋಗುವ ಬೀತಿಯಲ್ಲಿತ್ತು. ಶಾಲೆಯನ್ನು ಉಳಿಸಲು ನಾವೆಲ್ಲರೂ ಹೋರಾಟವನ್ನೇ ಮಾಡಬೇಕಾಯಿತು. ಇಂತಹ ಸಮಯದಲ್ಲಿ ಶಾಲೆಗೆ ಶಿಕ್ಷಕರಾಗಿ ನಿಯೋಜನೆಗೊಂಡವರು ಕಿರಣ್ರಾಜ್, ಇವರು ಶಾಲೆಯ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಶಾಲೆಯನ್ನು ಒಂದು ಹಂತಕ್ಕೆ ಮುಟ್ಟಿಸಿದರು ಎಂದ ಮೇರ್ಲ ರವರು, ಕಿರಣ್ರಾಜ್ರವರಿಗೆ ಶಾಲೆ ಹಾಗೂ ಮಕ್ಕಳ ಮೇಲಿದ್ದ ಪ್ರೀತಿಯಿಂದಾಗಿ ಇಂದು ಶಾಲೆ ಎಲ್ಲಾ ವಿಧದಲ್ಲೂ ಉತ್ತಮ ಶಾಲೆಯಾಗಿ ಹೆಸರು ಪಡೆದುಕೊಂಡಿದೆ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಬೇಂಗ್ರೆ ಶಾಲೆಯ ಶಿಕ್ಷಕಿ ಶುಭರವರು ಮಾತನಾಡಿ, ಕಿರಣ್ರಾಜ್ರವರಲ್ಲಿರುವ ಸಹನೆ, ತಾಳ್ಮೆ ಹಾಗೂ ಶಾಲೆ ಮತ್ತು ಮಕ್ಕಳ ಮೇಲಿನ ಪ್ರೀತಿಯನ್ನು ಹೊಗಳಿ ಶುಭ ಹಾರೈಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಿರಂಜನ್ರವರು ಮಾತನಾಡಿ, ಶಾಲೆಯ ಶಿಕ್ಷಕರ ಕೊರತೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಬೀಟ್ ಪೊಲೀಸ್ ದಯಾನಂದರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸನ್ಮಾನ/ ಶಾಲೆಗೆ ಗ್ರೈಂಡರ್ ಕೊಡುಗೆ
ವೃತ್ತಿಯಿಂದ ನಿವೃತ್ತಿಗೊಂಡ ಮುಖ್ಯಗುರು ಕಿರಣ್ರಾಜ್ರವರಿಗೆ ಸನ್ಮಾನ ಮಾಡಲಾಯಿತು. ಶಾಲು ಹೊದಿಸಿ,ಪೇಟಾ ತೊಡಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಕಿರಣ್ರಾಜ್ರವರು ಮಾತನಾಡಿ, ಒಬ್ಬ ಸರಕಾರಿ ಕೆಲಸಕ್ಕೆ ಸೇರಿದ ಮೇಲೆ ಆತನಿಗೆ ವಯೋ ನಿವೃತ್ತಿ ಸಹಜ ಅದರಂತೆ ನಾನು ಕೂಡ ಕೆಲಸದಿಂದ ನಿವೃತ್ತಿಯಾಗಿದ್ದೇನೆ. ಕೆಲಸದಲ್ಲಿ ನನಗೆ ಅತ್ಯಂತ ಖುಷಿ ಕೊಟ್ಟ ಶಾಲೆ ಎಂದರೆ ಅದು ತೆಗ್ಗು ಶಾಲೆ ಇಲ್ಲಿನ ಸರ್ವರಿಗೂ ನಾನು ಅಭಾರಿಯಾಗಿದ್ದೇನೆ. ಮುಂದೆಯೂ ಶಾಲೆಗೆ ನನ್ನಿಂದ ಆಗುವ ಸರ್ವ ಸಹಕಾರ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಶಾಲೆಗೆ ಗ್ರೈಂಡರ್ ಕೊಡುಗೆಯಾಗಿ ನೀಡಿದರು. ಅಲ್ಲದೆ ಶಾಲಾ ಅಡುಗೆ ಸಿಬ್ಬಂದಿಗಳಾದ ಸೀತಮ್ಮ ಮತ್ತು ಚೋಮು ಹಾಗೂ ಇಬ್ಬರು ಪುಟಾಣಿಗಳಿಗೆ ಕೊಡುಗೆ ನೀಡಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಿರಣ್ರಾಜ್ರವರ ಪತ್ನಿ ಸಂಗೀತಾರಾಜ್, ಪುತ್ರ ಸಮಿತ್ರಾಜ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ರಶ್ಮಿತಾರವರು ಮಾತನಾಡಿ, ಕಿರಣ್ರಾಜ್ರವರ ಓರ್ವ ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ. ನಾವು ಕಲಿಯುವಂತಹ ಬಹಳಷ್ಟು ಗುಣಗಳು ಇವರಲ್ಲಿದ್ದು ತಾಳ್ಮೆಗೆ ಇನ್ನೊಂದು ಹೆಸರೇ ಕಿರಣ್ರಾಜ್ ಎಂದು ಹೇಳಿ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜಯಂತಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿ ಶಿಕ್ಷಕರಾಗಿದ್ದ ರಹೀಮಾನ್, ಕೆಯ್ಯೂರು ಸಮುದಾಯ ಆರೋಗ್ಯ ಅಧಿಕಾರಿ ಭೀಮಾ ಶಂಕರ್ ಉಪಸ್ಥಿತರಿದ್ದರು. ಶಾಲಾ ಅತಿಥಿ ಶಿಕ್ಷಕಿ ನಳಿನಿ ಸ್ವಾಗತಿಸಿ, ಸಹ ಶಿಕ್ಷಕಿ ರಶ್ಮಿತಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಾಡಿನ ಮೂಲಕ ಶಿಕ್ಷಕರಿಗೆ ಶುಭ ಹಾರೈಸಲಾಯಿತು. ಎಸ್ಡಿಎಂಸಿ ಸದಸ್ಯರುಗಳು, ವಿದ್ಯಾರ್ಥಿಗಳ ಪೋಷಕರು, ಊರವರು ಉಪಸ್ಥಿತರಿದ್ದರು.