`ಭಾರತೀಯ ನ್ಯಾಯಾಂಗ ವ್ಯವಸ್ಥೆ ವಿಶ್ವಶ್ರೇಷ್ಠ’

0

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 35ನೇ ವಾರ್ಷಿಕೋತ್ಸವದಲ್ಲಿ ನ್ಯಾ|ವಿಶ್ವಜಿತ್ ಶೆಟ್ಟಿ

ಪುತ್ತೂರು:ವಿವೇಕಾನಂದ ಕಾನೂನು ಮಹಾವಿದ್ಯಾಲಯದ 35ನೇ ವಾರ್ಷಿಕೋತ್ಸವವು ನಡೆಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿ ಅವರು ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿ, ಭಾರತೀಯ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅತ್ಯಮೂಲ್ಯ ಸ್ಥಾನವಿದೆ.ದೇಶದ ಅಭಿವೃದ್ಧಿಯಲ್ಲಿ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ಇಡೀ ವಿಶ್ವದಲ್ಲಿಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆ ಸರ್ವ ಶ್ರೇಷ್ಠ ಹಾಗೂ ಸದೃಢವಾಗಿದೆ.ಕಾನೂನು ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ಆ ವ್ಯವಸ್ಥೆಯೊಳಗೆ ಜ್ಞಾನವಂತರಾಗಿ ಬರಬೇಕು ಎಂದರು.ವಿವಿಧ ಹಂತಗಳ ನ್ಯಾಯಾಲಯದ ಕಾರ್ಯಕಲಾಪಗಳನ್ನು ನೋಡಿಕೊಂಡು, ಅದರ ಮಹತ್ವವನ್ನು ಅರಿತುಕೊಂಡು ಬರಬೇಕು ಎಂದರು.ದೇಶದ ರಕ್ಷಣೆಯ ನೊಗ ಹೊತ್ತ ಸೈನಿಕ ಗಡಿ ಕಾದರೆ ವಕೀಲರು ಸಮಾಜ ಕಾಯುವುದರ ಜತೆಗೆ ದೀನ ದಲಿತರಿಗೆ ಹಾಗೂ ನಿರ್ಗತಿಕರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಾರೆ.ದಾರಿ ತಪ್ಪಿದ ವ್ಯಕ್ತಿ ಹಾಗೂ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ವಕೀಲರು ಮಾಡುತ್ತಾರೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೆ.ಎಂ.ಕೃಷ್ಣ ಭಟ್ ಮಾತನಾಡಿ, ಕಾನೂನು ಅಭ್ಯಾಸ, ಮಾಹಿತಿ ಇಲ್ಲದೆ ವಕೀಲ ವೃತ್ತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ.ಕಾನೂನು ಅರಿವೇ ಪ್ರಮುಖ ಸಾಮರ್ಥ್ಯ.ಹಾಗಾಗಿ ಕಾನೂನು ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಬೇಕು.ಜೊತೆಗೆ ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡಲು ಸದಾ ಸಿದ್ಧರಿರುವಂತಹ ಸುದೃಢ ವಕೀಲರು ತಯಾರಾಗಬೇಕು.ಅಂತಹ ಕಾನೂನು ತಜ್ಞರನ್ನು ತಯಾರು ಮಾಡುವ ಕೆಲಸವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಕಳೆದ ೩೫ ವರ್ಷಗಳಿಂದ ಮಾಡುತ್ತಿದೆ ಎಂದರು.


ಪುತ್ತೂರಿನ ಹಿರಿಯ ನ್ಯಾಯವಾದಿ ಎಂ.ರಾಮ್‌ಮೋಹನ್ ರಾವ್ ಅವರು ಮಾತನಾಡಿ ಶುಭಹಾರೈಸಿದರು.ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರನ್ನು ಮಹಾವಿದ್ಯಾಲಯದ ವತಿಯಿಂದ ಈ ಸಂದರ್ಭ ಗೌರವಿಸಲಾಯಿತು.ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ವರದಿ ವಾಚಿಸಿದರು.ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಅಭಿಷೇಕ್ ಲಾಲ್ ವಿದ್ಯಾರ್ಥಿ ಪರಿಷತ್‌ನ ವಾರ್ಷಿಕ ವರದಿಯನ್ನು ವಾಚಿಸಿದರು.ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ.ಎಂ., ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ್ ಬಿ.ಆರ್., ಕಾನೂನು ವಿಭಾಗದ ನಿರ್ದೇಶಕರಾದ ಡಾ|ರವೀಂದ್ರ ಬಿ.ಕೆ.,ವಿದ್ಯಾರ್ಥಿ ಪರಿಷತ್‌ನ ಪೂಜಾ ಕೆ ಉಪಸ್ಥಿತರಿದ್ದರು.ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ಸಂಗೀತಾ ಎಸ್.ಎಂ. ಸ್ವಾಗತಿಸಿ, ವಿದ್ಯಾರ್ಥಿ ಪರಿಷತ್‌ನ ಪ್ರಜ್ವಲ್ ವಂದಿಸಿದರು.

ಕಾರ್ಯಕ್ರಮವನ್ನು ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸಂಧ್ಯಾ ಪಿ.ಎಂ.ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ನ್ಯಾಯವಾದಿಗಳು, ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸದಾ ಕಲಿಕೆಯಿಂದ ಜ್ಞಾನ ಸಂಪಾದನೆಯ ಜೊತೆಗೆ ಸುಳಿವುಗಳು ತಿಳಿಯುತ್ತವೆ.ವಕೀಲಿ ವೃತ್ತಿ ಅತ್ಯುತ್ತಮ ವೃತ್ತಿ ಶ್ರೇಷ್ಠತೆ ಹೊಂದಿದೆ.ವಕೀಲಿ ವೃತ್ತಿಯಲ್ಲಿ ಶ್ರೇಷ್ಠ ಜೀವನ ಮೌಲ್ಯ ಅಳವಡಿಸಿಕೊಂಡಿರಬೇಕಾಗುತ್ತದೆ.ವೃತ್ತಿಯ ಬಗೆಗಿನ ಮಹತ್ವಾಕಾಂಕ್ಷೆಯು ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಪ್ರೇರಣೆಯಾಗುತ್ತದೆ.ಇದನ್ನು ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ಅರಿತುಕೊಂಡು ನ್ಯಾಯಾಂಗ ವ್ಯವಸ್ಥೆಯೊಳಗೆ ಬಂದಾಗ ಇನ್ನಷ್ಟು ಉತ್ತಮವಾಗಿ ನ್ಯಾಯ ಕೊಡಬಹುದು-
ನ್ಯಾ|ಸವಣೂರು
ವಿಶ್ವಜಿತ್ ಶೆಟ್ಟಿ

LEAVE A REPLY

Please enter your comment!
Please enter your name here