ಪುತ್ತೂರು: ತಾಲೂಕಿನ ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಕಛೇರಿಯಲ್ಲಿ ವರ್ಷಗಟ್ಟಲೆ ಕಡತ ವಿಲೇವಾರಿ ಮಾಡದೆ ಸಾರ್ವಜನಿಕರನ್ನು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಪುತ್ತೂರು ಶಾಸಕರಿಗೆ ದೂರು ನೀಡಲಾಗಿದೆ.
ಪುತ್ತೂರು ತಾಲೂಕು ಕಛೇರಿಯಿಂದ ದಿನಾಂಕ 05.09.2022ರಂದು ಆರ್.ಐ ಕಛೇರಿಗೆ 3 ಕಡತಗಳನ್ನು ಸ್ಥಳ ತನಿಖಾ ವರದಿಗಳಿಗೆ ಕಳುಹಿಸುತ್ತಾರೆ ಆದರೆ ಯಾವುದೇ ಕಡತಗಳು ವಾಪಸ್ಸಾಗಿರುವುದಿಲ್ಲ. ಗ್ರಾಮಕರಣಿಕರು ತನಿಖಾ ವರದಿಗಳನ್ನು ಆರ್.ಐ ಕಛೇರಿಗೆ ಕಳುಹಿಸಿದ್ದರೂ ಆರ್.ಐ ಕಛೇರಿ ತಿಂಗಳುಗಟ್ಟಲೇ ಈ ಕಡತಗಳನ್ನು ತಮ್ಮಲ್ಲೇ ಇರಿಸಿಕೊಂಡು ಜನರನ್ನು ಸತಾಯಿಸುತ್ತಿದ್ದಾರೆ. ಲಂಚ ನೀಡದ ಕಡತಗಳು ಈ ರೀತಿ ಪೆಂಡಿಂಗ್ ಆಗುವುದು ಕಂಡು ಬರುತ್ತಿದೆ. ನಮ್ಮ ಸಮಿತಿಯ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ. ದೂರವಾಣಿ ಮೂಲಕ ಆರ್.ಐ. ಅವರನ್ನು ಸಂಪರ್ಕ ಮಾಡಿದರೆ ಕರೆಗಳನ್ನು ಕಟ್ ಮಾಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.