ಮೋದಿ ಆಡಳಿತದಿಂದ ಭಾರತ ಪ್ರಕಾಶಿಸುತ್ತಿದೆ : ನಳಿನ್ ಕುಮಾರ್
ಪುತ್ತೂರು: ಪ್ರಧಾನಿ ಮೋದಿಯವರ ಜನಪರ ಯೋಜನೆಗಳಿಂದಾಗಿ ಇಂದು ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಸ್ವಾತಂತ್ರ್ಯದ ಬಳಿಕದ ಬದಲಾವಣೆಗಳನ್ನು ಗಮನಿಸುತ್ತಾ ಬಂದರೆ ಮೋದಿಯವರ 10 ವರ್ಷದ ಆಡಳಿತದಲ್ಲಿ ಭಾರತ ಎಲ್ಲಾ ದೇಶಗಳಿಗೂ ವಿಶ್ವಗುರು ಸ್ಥಾನದಲ್ಲಿ ನಿಲ್ಲುವ ಹಾಗೇ ಆಗಿದೆ. ದೇಶದಲ್ಲಿರುವ ಅದೆಷ್ಟೋ ಕೋಟಿ ಬಡವರು ಇಂದು ಶ್ರೀಮಂತರಾಗಿದ್ದಾರೆ. ಇದೆಲ್ಲವೂ ಮೋದಿಯವರ ಆಡಳಿತದಿಂದ ಸಾಧ್ಯವಾಗಿದೆ. ಇದೇ ವಿಕಸಿತ ಭಾರತದ ಪರಿಕಲ್ಪನೆಯಾಗಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಗ್ರಾಮ ಪಂಚಾಯತ್ ಒಳಮೊಗ್ರು ಮತ್ತು ಬ್ಯಾಂಕ್ ಆಫ್ ಬರೋಡಾದ ಸಹಯೋಗದೊಂದಿಗೆ ಜ.18ರಂದು ಬೆಳಿಗ್ಗೆ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅದೆಷ್ಠೋ ಕೋಟಿ ಕುಟುಂಬಗಳಿಗೆ ಉಚಿತ ಉಜ್ವಲ್ ಗ್ಯಾಸ್ ಸಂಪರ್ಕ, ಆಯುಷ್ಮಾನ್ ಭವ ಮೂಲಕ ಆರೋಗ್ಯ, ಕೋವಿಡ್ ಬಳಿಕವೂ ಕುಟುಂಬಗಳಿಗೆ 5 ಕೆಜಿ ಅಕ್ಕಿ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಆ ಮೂಲಕ ಬಡಜನರನ್ನು ಶ್ರೀಮಂತರನ್ನಾಗಿಸುವ ಕೆಲಸ ನಡೆದಿದೆ ಎಂದ ಕಟೀಲ್ರವರು ಕೋವಿಡ್ನ ಸಂಕ್ಪಷ್ಟದ ಸಮಯದಲ್ಲಿ ನಮ್ಮನ್ನು ರಕ್ಷಣೆ ಮಾಡಿದ್ದು ಮೋದಿ, ಅವರಿಂದಾಗಿ ಇಂದು ನಾವು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಆದ್ದರಿಂದ ಮತ್ತೊಮ್ಮೆ ಮೋದಿಯೇ ಈ ದೇಶದ ಪ್ರಧಾನಿಯಾಗಬೇಕಾಗ ಅಗತ್ಯತೆ ಇದೆ ಎಂದು ಕಟೀಲ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರುರವರು, ವ್ಯಕ್ತಿಯ ಅಭಿವೃದ್ಧಿಯೊಂದಿಗೆ ಭೌಗೋಳಿಕ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಕೊಡುವ ಕೆಲಸ ಕೇಂದ್ರ ಸರಕಾರದಿಂದ ಆಗಿದೆ. ಜನರು ಸ್ವಾವಲಂಭಿ ಜೀವನ ನಡೆಸಬೇಕು ಎನ್ನುವ ಉದ್ದೇಶದೊಂದಿಗೆ ಪ್ರಧಾನಿ ಮೋದಿಯವರು ಅದೆಷ್ಟೋ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರನ್ನು ಶ್ರೀಮಂತರನ್ನಾಗಿಸುವ ಕೆಲಸ ಮಾಡಿದ್ದಾರೆ. ಕೋರೋನ ಸಂಕಷ್ಟದ ಸಮಯದಲ್ಲೂ ಜನರನ್ನು ರಕ್ಷಣೆ ಮಾಡುವ ಕೆಲಸವನ್ನು ಮೋದಿಯವರು ಮಾಡಿದ್ದು, ಭಾರತದಲ್ಲೇ ವ್ಯಾಕ್ಸಿನ್ ಕಂಡು ಹಿಡಿದು ಕೋರೋನದ ವಿರುದ್ಧ ಹೋರಾಡುವ ಧೈರ್ಯವನ್ನು ಕೊಟ್ಟಿದ್ದಾರೆ. ಅದೆಷ್ಟೋ ಜನಪರ ಯೋಜನೆಗಳಿಂದ ಇಂದು ಭಾರತ ಹಾಗೂ ಭಾರತದ ಪ್ರಜೆಗಳು ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಭಾರತ ಯಾವ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಇಂದು ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಮೋದಿಯವರೇ ಕಾರಣರಾಗಿದ್ದಾರೆ. ದೇಶದ ಬಡಜನರು ಶ್ರೀಮಂತರಾಗುವುದರೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆಗಳು ತಲುಪಬೇಕು ಎಂಬ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಮೋದಿಯವರಿಂದ ಮಾತ್ರ ನಮ್ಮ ದೇಶ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ನರೇಗಾದ ತಾಲೂಕು ಸಂಯೋಜಕ ಭರತ್ರಾಜ್, ಬರೋಡಾ ಬ್ಯಾಂಕ್ ಕುಂಬ್ರ ಶಾಖೆಯ ಮ್ಯಾನೇಜರ್ ಜಕನ್ರಾಜ್, ಸಿಬ್ಬಂದಿ ಶಾಲಿನಿ ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಸ್ವಾಗತಿಸಿದರು. ಗ್ರಾಪಂ ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಪ್ರದೀಪ್, ಲತೀಫ್ ಟೈಲರ್, ರೇಖಾ, ವನಿತಾ, ಎಂಬಿಕೆ ಚಂದ್ರಿಕಾ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಗ್ರಾಪಂ ಸದಸ್ಯ ಮಹೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ವಂದಿಸಿದರು. ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಸಹಕರಿಸಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ರಾಜಕೀಯ ಗಣ್ಯರು, ಉದ್ಯಮಿಗಳು, ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಬ್ಯಾಂಕ್ ಸಿಬ್ಬಂದಿಗಳಿಗೆ ವಿವಿಧ ರೀತಿಯ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಾಧಕರಿಗೆ ಸನ್ಮಾನ
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ನಾರಾಯಣ ನಾಯ್ಕ ಏಕತ್ತಡ್ಕ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ನಾರಾಯಣ ಕುಂಬ್ರ, ಉದ್ಯಮ ಕ್ಷೇತ್ರದ ಸಾಧಕ ಮೋಹನ್ದಾಸ್ ರೈ ಕುಂಬ್ರ ಹಾಗೂ ಕ್ರೀಡಾಪಟು ಧನುಷಾ ಶೆಟ್ಟಿ ಗೋವಿಂದಮೂಲೆರವರುಗಳನ್ನು ಈ ಸಂದರ್ಭದಲ್ಲಿ ಸಂಸದರು ಶಾಲು,ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಸ್ವಸ್ಥ ಬಾಲಕ್ ಗೌರವ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ವತಿಯಿಂದ ವಯಸ್ಸಿಗನುಗುಣವಾಗಿ ಎತ್ತರ ಮತ್ತು ತೂಕವಿರುವ ಗಂಡು ಮಕ್ಕಳನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಜ್ಜಿಕಲ್ಲು ಅಂಗನವಾಡಿಯ ರಿತ್ವಿನ್ ರೈ, ಕೈಕಾರ ಅಂಗನವಾಡಿಯ ಸನ್ವಿತ್, ದರ್ಬೆತ್ತಡ್ಜ ಅಂಗನವಾಡಿಯ ಜನಿತ್, ಪರ್ಪುಂಜದ ಶಾಶ್ವತ್ ನಾಯಕ್, ಕುಂಬ್ರದ ಹಿತೇಶ್, ಕೊಲತ್ತಡ್ಕದ ಚಾರ್ವಿ, ಅಜಲಡ್ಕದ ಗಾಯನ್ ಹಾಗೂ ಕುಟ್ಟಿನೋಪಿನಡ್ಕ ಅಂಗನವಾಡಿಯ ಮಹಮ್ಮದ್ ಸಿಯಾನ್ರವರುಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಶ್ರೀನಿವಾಸ ಮಲ್ಯರ ನಂತರ ಸ್ಥಾನದಲ್ಲಿ ನಳಿನ್ ಕುಮಾರ್ ಕಟೀಲ್
ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಗಮನಿಸುತ್ತಾ ಹೋದರೆ ಹಿಂದಿನ ಸಂಸದ ಶ್ರೀನಿವಾಸ ಮಲ್ಯರ ಬಳಿಕ ಅಭಿವೃದ್ಧಿ ಕೆಲಸದಲ್ಲಿ ಅತೀ ಹೆಚ್ಚು ಅನುದಾನವನ್ನು ಜಿಲ್ಲೆಗೆ ಕೊಟ್ಟ ಏಕೈಕ ಸಂಸದ ನಳಿನ್ ಕುಮಾರ್ ಕಟೀಲ್ ಆಗಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ನಳಿನ್ರವರು ಅಭಿವೃದ್ಧಿ ಕೆಲಸಗಳನ್ನು ಹೇಳುತ್ತಾ ಹೋದರೆ ಒಂದು ದಿನ ಸಾಲದು ಎಂದರು.