ಉಪ್ಪಿನಂಗಡಿ: ಭಾರತೀಯ ಭೂ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಪಿಲಿಗೂಡು ಗ್ರಾಮದ ಪೆಲತ್ತಾಜೆ ದಿ. ಜನಾರ್ದನ ಪೂಜಾರಿ ಮತ್ತು ಅಪ್ಪಿ ದಂಪತಿಯ ಪುತ್ರ ಹವಾಲ್ದಾರ್ ಜಯಾನಂದ ಪೂಜಾರಿ ಅವರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ ನೀಡಲಾಯಿತು.
2004ರಿಂದ 2006ರವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭೂಸೇನೆಯ ತರಬೇತಿ ಮುಗಿಸಿ, ಉತ್ತರ ಪ್ರದೇಶದ ಮೀರತ್, 23 ರಾಷ್ಟ್ರೀಯ ರೈಫಲ್, ಆಗ್ರಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ಮಾಡಿದ್ದ ಜಯಾನಂದ ಪೂಜಾರಿಯವರು ಬೆಂಗಳೂರಿನ 515 ಆರ್ಮಿ ಬೇಸ್‌ನಲ್ಲಿ ಸೇವೆ ಸಲ್ಲಿಸಿ ಕಳೆದ ಮಾ.31ರಂದು ನಿವೃತ್ತಿ ಪಡೆದುಕೊಂಡಿದ್ದರು. ಕರ್ತವ್ಯದಲ್ಲಿದ್ದಾಗ ಇವರಿಗೆ 9 ವರ್ಷದ ಲಾಂಗ್ ಸರ್ವೀಸ್ ಅವಾರ್ಡ್, ಸ್ಪೆಷಲ್ ಸರ್ವೀಸ್ ಮೆಡಲ್, ಸೈನ್ಯ ಸೇವಾ ಪದಕ, 75ನೇ ಸ್ವಾತಂತ್ರ್ಯೋತ್ಸವದ ಪದಕ, ಬೆಸ್ಟ್ ಹಾರ್ಡ್ ವರ್ಕ್ ಪ್ರಶಸ್ತಿ ಸೇರಿದಂತೆ ಹಲವು ಪದಕಗಳನ್ನು ಪಡೆದಿದ್ದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರಕ್ಕೆ ಆಗಮಿಸಿದ ಇವರನ್ನು ಅಲ್ಲಿ ಸ್ವಾಗತಿಸಿ, ಬಳಿಕ ಹುಟ್ಟೂರಿಗೆ ವಾಹನ ಜಾಥಾದ ಮೂಲಕ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭ ಉದ್ಯಮಿ ನಟೇಶ್ ಪೂಜಾರಿ ಪುಳಿತ್ತಡಿ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪ್ರಮುಖರಾದ ಗುಣಕರ ಅಗ್ನಾಡಿ, ಯೋಧನ ತಾಯಿ ಅಪ್ಪಿ, ಪತ್ನಿ ಪವಿತ್ರ, ಮಕ್ಕಳಾದ ತನ್ವಿ ಮತ್ತು ತಸ್ವಿ, ಸಹೋದರರಾದ ಹರೀಶ್ ಪೂಜಾರಿ, ಚಿದಾನಂದ, ಸಹೋದರಿ ವೀಣಾ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.