ಉಪ್ಪಿನಂಗಡಿ: ಬುಧವಾರದಂದು ಪ್ರಕಟವಾದ ದ್ವಿತಿಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಗಮನಾರ್ಹ ಸಾಧನೆಯನ್ನು ತೋರಿದ್ದು, ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲಿ ಒಟ್ಟು 368 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕಾಲೇಜು ಶೇ.94 ಒಟ್ಟು ಫಲಿತಾಂಶವನ್ನು ದಾಖಲಿಸಿದೆ. ಮಾತ್ರವಲ್ಲದೆ, 40 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯುವುದರೊಂದಿಗೆ ಸರಕಾರಿ ಕಾಲೇಜೊಂದು ನಿರಂತರ ಪ್ರಗತಿಯತ್ತ ಸಾಗುತ್ತಿರುವ ದಾಖಲೆಯನ್ನು ಮೆರೆದಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 79 ವಿದ್ಯಾರ್ಥಿಗಳ ಪೈಕಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, ಶೇ.99 ಫಲಿತಾಂಶವನ್ನು ಗಳಿಸಿದೆ. ಈ ವಿಭಾಗದ ರಕ್ಷಿತಾ ಎನ್. 567 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 177 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 168 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 95 ಫಲಿತಾಂಶ ದಾಖಲಾಗಿದೆ. ಈ ಪೈಕಿ 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ವಿಭಾಗದ ಶ್ವೇತಾ 574 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಕಲಾ ವಿಭಾಗದಲ್ಲಿ 112 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 100 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.90 ಫಲಿತಾಂಶ ದಾಖಲಾಗಿದೆ. ಇವರಲ್ಲಿ 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ವಿಭಾಗದಲ್ಲಿ ಅಫ್ರಿನಾ 552 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೇ ಸೇರಿಸಿಕೊಂಡು ಫಲಿತಾಂಶದಲ್ಲಿ ಉತ್ತಮ ಸಾಧನೆ ಸಾಧಿಸಿದ್ದೇವೆ ಎನ್ನುವ ವಿದ್ಯಾಸಂಸ್ಥೆಗಳ ನಡುವೆ ತೀರಾ ಕನಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ಕಲ್ಪಿಸಿ ಅವರನ್ನು ಸಾಧನಾಶೀಲರನ್ನಾಗಿಸಿದ ಇಲ್ಲಿನ ಸರಕಾರಿ ಕಾಲೇಜಿನ ಉಪನ್ಯಾಸಕ ವರ್ಗವನ್ನು ನಾಗಕರಿಕ ಸಮೂಹ ಶ್ಲಾಘಿಸಿದೆ.