ರೂ.26.95ಲಕ್ಷ ಲಾಭ, ಶೇ.14 ಡಿವಿಡೆಂಡ್ – ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕೆ ಘೋಷಣೆ
ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿ ಮತ್ತು ವಿಟ್ಲದಲ್ಲಿ ಶಾಖಾ ಕಚೇರಿ ಹೊಂದಿದ್ದು ಉತ್ತಮವಾಗಿ ವ್ಯವಹಾರ ನಡೆಸುತ್ತಿರುವ ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಘವು ವಷಾಂತ್ಯಕ್ಕೆ ರೂ. 26,95,105.18 ಲಾಭ ಗಳಿಸಿದೆ. ಲಾಭವನ್ನು ಉಪ ನಿಬಂಧನೆಯಂತೆ ಹಂಚಲಾಗಿದ್ದು, ಸದಸ್ಯರ ಅನುಮತಿ ಪಡೆದು ಶೇ.14ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕೆ ಅವರು ಘೋಷಣೆ ಮಾಡಿದರು.
ಪುತ್ತೂರು ಕೆ.ಪಿ.ಕಾಂಪ್ಲೆಕ್ಸ್ನಲ್ಲಿ ಸಂಘದ ಕೇಂದ್ರ ಕಚೇರಿಯ ಬಳಿಯ ಸಭಾಂಗಣದಲ್ಲಿ ಸೆ.11 ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯಲ್ಲಿ ಈಗಾಗಲೇ 3053ಸದಸ್ಯರಿದ್ದು, ಪಾಲು ಬಂಡವಾಳ ರೂ.32,83,000ಹೊಂದಿದ್ದು, ಸುಮಾರು ರೂ. 9 ಕೋಟಿಗೂ ಮೇಲ್ಪಟ್ಟು ವ್ಯವಹಾರ ನಡೆಸುತ್ತಿದೆ. ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವಂತಹ ಅರ್ಹ ಕುಟುಂಬದ ಸದಸ್ಯರನ್ನು ಸಂಘದ ಸದಸ್ಯತ್ವಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈಗಿರುವ ಸ್ವಸಹಾಯ ಗುಂಪುಗಳನ್ನು ವೃದ್ಧಿಸಿ ಗುಂಪುಗಳಿಗೆ ಸಕಾಲದಲ್ಲಿ ಸಾಲ ಒದಗಿಸಲು ಮತ್ತು ಸಂಘದ ಕಾರ್ಯವ್ಯಾಪ್ತಿಯಲ್ಲಿ ಹೆಚ್ಚು ಗುಂಪುಗಳನ್ನು ರಚಿಸಲು ಸಿಬ್ಬಂದಿಗಳಿಗೆ, ಪ್ರೇರಕರಿಗೆ, ಶಾಖೆಗಳಿಗೆ ನಿರ್ದೇಶನ ನೀಡಿದ್ದೇವೆ. ಸಕಾರಿಯ ಠೇವಣಿಯನ್ನು ರೂ.6.5 ಕೋಟಿಗೆ ಏರಿಸಿ ರೂ. 6ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ. ಸಂಘದ ಸೇವೆಯನ್ನು ಗ್ರಾಹಕರಿಗೆ ತಲುಪುವಂತೆ ಮಾಡುತ್ತೇವೆ. ಈ ಸಂಘದಲ್ಲಿ ಕಡಿಮೆ ಬಡ್ಡಿ ಠೇವಣಿಯನ್ನು ಸ್ವೀಕರಿಸಿ ಗ್ರಾಹಕರಿಗೆ ತಲುಪುವಂತೆ ಮಾಡುತ್ತೇವೆ ಎಂದ ಅವರು ಸಂಘದ ಒಟ್ಟು ವ್ಯವಹಾರದಿಂದ ಬಂದಿರುವ ಲಾಭಕ್ಕೆ ಸಂಬಂಧಿಸಿ ಶೇ.14 ಡಿವಿಡೆಂಡ್ ಸಂಘದ ಸದಸ್ಯರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮಂಜುನಾಥ್ ವಾರ್ಷಿಕ ವರದಿ ಸೇರಿದಂತೆ ವಿವಿಧ ನಿಯಮಾವಳಿಗಳನ್ನು ಸಭೆಗೆ ಮಂಡಿಸಿ ಸಭೆಯಿಂದ ಅನುಮೋದನೆ ಪಡೆದರು. ಸಂಘದ ಸದಸ್ಯರು ವಿವಿಧ ಸಲಹೆ ಸೂಚನೆ ನೀಡಿದರು. ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಶಕುಂತಳಾ ಟಿ ಶೆಟ್ಟಿ, ಕೆ.ಸಂಜೀವ ನಾಯಕ್, ವಿಶ್ವನಾಥ ರೈ ಎಮ್.ಬಿ, ಗಂಗಾರತ್ನ ವಿ ರೈ ಎಮ್, ಸರಸ್ವತಿ ಇ ಭಟ್, ಚಿದಾನಂದ ಸುವರ್ಣ ಜಿ, ಲೋಕೇಶ್ ಹೆಗ್ಡೆ ಯು, ಜನಾರ್ಧನ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳುಕ ಪ್ರಾರ್ಥಿಸಿದರು. ನಿರ್ದೇಶಕರಾದ ಬಾಲಕೃಷ್ಣ ಬೋರ್ಕರ್ ಸ್ವಾಗತಿಸಿ, ಜನಾರ್ದನ ಪೆರಾಜೆ ವಂದಿಸಿದರು. ವಿಟ್ಲ ಶಾಖೆಯ ಮ್ಯಾನೇಜರ್ ಲಕ್ಷ್ಮೀರಾಜ್, ಸುಮಿತ್ರ, ಮಂಗಳ, ಕಿಶೋರ್, ಹರೀಶ್, ಗೌತಮ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.