ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಿಂದ ಗೇರು ಹಣ್ಣಿನ ಪ್ರಾಮುಖ್ಯತೆ, ಮೌಲ್ಯವರ್ಧನೆ” ತರಬೇತಿ

0

ಪುತ್ತೂರು: ಭಾ.ಕೃ.ಸಂ.ಪ ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇದರ ವತಿಯಿಂದ “ಗೇರು ಹಣ್ಣಿನ ಪ್ರಾಮುಖ್ಯತೆ ಮತ್ತು ಪೌಷ್ಠಿಕಾಂಶದ ಭದ್ರತೆಗಾಗಿ ಅದರ ಮೌಲ್ಯವರ್ಧನೆ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗೇರು ಹಣ್ಣು, ಉಷ್ಣವಲಯದ ಹಣ್ಣು ಇದು ಫೈಬರ್, ಫೈಟೊನ್ಯೂಟ್ರಿಯೆಂಟ್‌ಗಳು ಖನಿಜಗಳು ಮತ್ತು ವಿಟಮಿನ್ ಸಿ.ಯ ಪ್ರಮುಖ ಮೂಲವಾಗಿದೆ. ಆದರೆ ಗೇರು ಹಣ್ಣು ಕಡಿಮೆ ಪ್ರಮಾಣದಲ್ಲಿ ಬಳಸಲ್ಪಡುತ್ತದೆ. ಈ ಹಿನ್ನಲೆಯಲ್ಲಿ ನಿರ್ದೇಶನಾಲಯವು “ಫುಡ್ ಚೈನ್” ಸಂಸ್ಧೆಯ ಸಹಯೋಗದಲ್ಲಿ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಗೃಹ ವಿಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಸೆ.6ರಂದು ಹಮ್ಮಿಕೊಂಡಿತ್ತು.

ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಉದ್ಯಮಶೀಲತೆಯ ಮಹತ್ವ ಮತ್ತು ಹೊಸ ಉದ್ಯಮಗಳನ್ನು ಆರಂಭಿಸಲು ಗೇರು ಹಣ್ಣಿನ ಮೌಲ್ಯವರ್ಧನೆಯು ಹೇಗೆ ಮುಖ್ಯ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಕೃಷಿ ಉದ್ಯಮಶೀಲ ತರಬೇತಿ ಕೇಂದ್ರದ ಸೌಲಭ್ಯದ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.

ಕೃಷಿ ವಿಸ್ತರಣೆಯ ವಿಜ್ಞಾನಿ ಡಾ. ಅಶ್ವತಿ ಚಂದ್ರಕುಮಾರ್ ತರಬೇತಿಯ ಬಗ್ಗೆ ತಿಳಿಸಿದರು. ಆಹಾರ ತಂತ್ರಜ್ಞಾನ ವಿಜ್ಞಾನಿ ಡಾ. ಜ್ಯೋತಿ ನಿಷಾದ್ ಗೇರಿನ ಪೌಷ್ಠಿಕಾಂಶದ ಪ್ರಾಮುಖ್ಯತೆ ಮತ್ತು ಮೌಲ್ಯವರ್ಧನೆಯ ಕುರಿತು ವಿವರಿಸಿದರು. ನಿರ್ದೇಶನಾಲಯದಲ್ಲಿ ತಯಾರಿಸಿದ ಗೇರು ಹಣ್ಣಿನ ಉತ್ಪನ್ನಗಳ ತಯಾರಿಕೆಯ ಕ್ರಮ ತಿಳಿಸಿ ನಿರ್ದೇಶನಾಲಯದಲ್ಲಿ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿದರು. ಉತ್ಪನ್ನಗಳ ಲೇಬಲಿಂಗ್ ಮತ್ತು ಪ್ಯಾಕೇಜಿಂಗ್‌ಗೆ FSSAI ಅವಶ್ಯಕತೆಗಳನ್ನು ತಿಳಿಸಿದರು. ಆಹಾರ ವಿಜ್ಞಾನ ಮತ್ತು ಗೃಹ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ನಂತರ ಲಭ್ಯವಿರುವ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ಗೇರು ಮ್ಯೂಸಿಯಂಗೆ ಭೇಟಿ ನೀಡಿದರು.

ವಿಜ್ಞಾನಿಗಳು ಗೇರು ಬೆಳೆ ಮತ್ತು ಸಂಸ್ಥೆಯ ಪರಿಚಯವನ್ನು ಮಾಡಿಕೊಟ್ಟರು. ನಿರ್ದೇಶನಾಲಯದಲ್ಲಿ ಇಂಟರ್ನ್‌ಶಿಪ್ ಮಾಡುವ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಆಹಾರ ತಂತ್ರಜ್ಞಾನ ಪ್ರಯೋಗಾಲಯದಲ್ಲಿ ಆಹಾರ ಸಂಸ್ಕರಣೆಗಾಗಿ ಲಭ್ಯವಿರುವ ವಿವಿಧ ಯಂತ್ರೋಪಕರಣಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಒಟ್ಟು 29 ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here