ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ನ 2023-24ನೇ ಸಾಲಿನ ಜಮಾಬಂಧಿ ಸಭೆ ಸೆ.10ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕುಶಕುಮಾರ್ ಜಮಾಬಂದಿ ಅಧಿಕಾರಿಯಾಗಿದ್ದರು. ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮಸ್ಥ ಧನಂಜಯ ಕುಲಾಲ್ ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನೀರಿನ ಬಿಲ್, ತೆರಿಗೆ ಮೊದಲಾದವುಗಳನ್ನು ಆಯಾ ಸಮಯದಲ್ಲಿ ಕ್ರಮಬದ್ದವಾಗಿ ಕಲೆಕ್ಟ್ ಮಾಡಿದರೆ ಗ್ರಾಮವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹಕಾರಿಯಾಗುತ್ತದೆ, ಸಣ್ಣ ಪುಟ್ಟ ಕಾರಣಗಳನ್ನು ಹೇಳಿ ನೀವು ಬಿಲ್ ಕಲೆಕ್ಟ್ ಮಾಡದಿದ್ದರೆ ಗ್ರಾ.ಪಂಗೆ ಬರುವ ಆದಾಯ ಹೇಗೆ ಬರಲು ಸಾಧ್ಯ,
ಮೆಸ್ಕಾಂನವರು ಬಿಲ್ ಕಟ್ಟದಿದ್ದರೆ ರಿಯಾಯಿತಿ ಕೊಡ್ತಾರಾ? ಅದೇ ರೀತಿ ನೀವೂ ಮಾಡಿ, ಇಚ್ಛಾ ಶಕ್ತಿಯ ಕೊರತೆಯಿಂದ ಬಿಲ್ ಸಂಗ್ರಹ ಬಾಕಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ಮಾತನಾಡಿ ವ್ಯವಸ್ಥೆಗಳೆಲ್ಲ ಸರಿಯಾಗಬೇಕಾದರೆ ಕೆಲವು ಸಮಯ ಬೇಕಾಗುತ್ತದೆ, ನೀರಿನ ಬಿಲ್ ಕಟ್ಟದವರ ಕನೆಕ್ಷನ್ ಕಟ್ ಮಾಡಿದರೆ ನೀವು ನೋಟೀಸು ಕೊಡದೆ ಹೇಗೆ ಕಟ್ ಮಾಡ್ತೀರಿ ಎಂದು ಕೇಳ್ತಾರೆ, ಹೀಗೆ ಕೆಲವು ಸಮಸ್ಯೆ ಇದೆ ಎಂದರು.
ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಮಾತನಾಡಿ ಗ್ರಾ.ಪಂ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ನೀರಿನ ವಿಚಾರ, ಪೈಪ್ ಲೈನ್ ಮತ್ತಿತರ ವಿಚಾರಗಳಲ್ಲಿ ಕೆಲವೊಂದು ತೊಡಕುಗಳು ಎದುರಾಗುವುದು ಸಹಜ, ಅವೆಲ್ಲವನ್ನೂ ಹಂತ ಹಂತವಾಗಿ ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು.
ಗ್ರಾ.ಪಂ ಉಪಾಧ್ಯಕ್ಷೆ ಯಶೊಧಾ ಅಜಲಾಡಿ, ಸದಸ್ಯರಾದ ಉಮೇಶ್ ಗೌಡ ಅಂಬಟ, ಮಹಮ್ಮದ್ ಆಲಿ, ದುಗ್ಗಪ್ಪ ಕಡ್ಯ ಹಾಗೂ ಕೆಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾ.ಪಂ ಸಿಬ್ಬಂದಿ ಶಶಿಧರ ಕೆ ಮಾವಿನಕಟ್ಟೆ ಲೆಕ್ಕಪತ್ರ ಮಂಡಿಸಿದರು. ಪಿಡಿಒ ಅಜಿತ್ ಜಿ.ಕೆ ಸ್ವಾಗತಿಸಿದರು. ಕಾರ್ಯದರ್ಶಿ ಸೂರಪ್ಪ, ಸಿಬ್ಬಂದಿಗಳಾದ ಸತೀಶ ಹಿಂದಾರು, ಮೋಕ್ಷಾ, ಶ್ರದ್ಧಾ, ಸತೀಶ್ ಕುಮಾರ್ ಸಹಕರಿಸಿದರು.