ಪುತ್ತೂರು: ಕರ್ನಾಟಕ ರಾಜ್ಯ ಸರಕಾರದ ವಾಹನ ಚಾಲಕರ ಸಂಘ(ರಿ.) ಬೆಂಗಳೂರು ಇದರ ಪುತ್ತೂರು ಶಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರಿನ ಹೃದಯ ಭಾಗವಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಳಿಯಿರುವ ಸಾರಥಿ ಭವನದ ಬೆಳ್ಳಿಹಬ್ಬದ ಸಮಾರಂಭವು ಡಿ.14 ರಂದು ಮಿನಿ ವಿಧಾನಸೌಧದ ಬಳಿಯ ತಾಲೂಕು ಸರಕಾರಿ ನೌಕರರ ಸಮುದಾಯ ಭವನದಲ್ಲಿ ಜರಗಲಿದೆ.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈಯವರು ಕಾರ್ಯಕ್ರಮವನ್ನು ಉದ್ಘಾಟನೆಗೈಯಲಿದ್ದಾರೆ. ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ರವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಹಣಕಾಸು ಇಲಾಖೆಯ ನಿವೃತ್ತ ಉಪ ಕಾರ್ಯದರ್ಶಿಗಳಾದ ಕೆ.ನಂದ ಕುಮಾರ್, ಬೆಂಗಳೂರು ವಿಧಾನಸೌಧದ ನಿವೃತ್ತ ಉಪ ಕಾರ್ಯದರ್ಶಿ ಇಬ್ರಾಹಿಂ ಗೂನಡ್ಕ ಉಪಸ್ಥಿತರಿರುವರು. ಬೆಂಗಳೂರು ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್, ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಪದ್ಮನಾಭ ಜೋಗಿ, ಪುತ್ತೂರು ಶಾಖೆಯ ಅಧ್ಯಕ್ಷ ಶಿವಾನಂದ ಆಚಾರ್ಯ, ನಿವೃತ್ತ ಕಂದಾಯ ನಿರೀಕ್ಷಕ ಎಚ್.ಪದ್ಮಕುಮಾರ್, ಸಾರಥಿ ಭವನದ ಸ್ಥಾಪಕಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಸಾರಥಿ ಭವನದ ಮಾಜಿ ಅಧ್ಯಕ್ಷ ಸಿ.ಸೀತಾರಾಮರವರು ಭಾಗವಹಿಸಲಿದ್ದಾರೆ. ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಲೀಲಯ್ಯರವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಬೆಳ್ಳಿಹಬ್ಬದ ಸಮಾರಂಭದ ಪ್ರಯುಕ್ತ ಬೆಳಿಗ್ಗೆ ಗಣಹೋಮ ನೆರವೇರಲಿರುವುದು. ಬಳಿಕ ನಡೆಯುವ ಸಮಾರಂಭದಲ್ಲಿ ಬೆಳ್ಳಿಹಬ್ಬದ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ಮೆಸ್ಕಾಂ ಪವರ್ಮ್ಯಾನ್ಗಳಿಗೆ ಸನ್ಮಾನ, ನಗರಸಭೆ ಪೌರ ಕಾರ್ಮಿಕರಿಗೆ ಸನ್ಮಾನ, ಕೆ.ಎಸ್.ಆರ್.ಟಿ.ಸಿ ಚಾಲಕರಿಗೆ ಸನ್ಮಾನ, ನಿವೃತ್ತ ಸರಕಾರಿ ನೌಕರರಿಗೆ ಸನ್ಮಾನ, ನಿವೃತ್ತ ಚಾಲಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ನಿವೃತ್ತ ವಾಹನ ಚಾಲಕರಿಗೆ ಗೌರವಾರ್ಪಣೆ ನೆರವೇರಲಿದೆ.