ಕೋಡಿಂಬಾಡಿ ಗ್ರಾ.ಪಂ.ಸಾಮಾನ್ಯ ಸಭೆ – ಡಿವೈಡರ್‌ನಲ್ಲಿ ನೆಟ್ಟಿರುವ ಗಿಡಗಳಿಗೆ ನೀರುಣಿಸುವುದಕ್ಕೆ ಆಕ್ಷೇಪ

0

ಉಪ್ಪಿನಂಗಡಿ: ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುವ ಪುತ್ತೂರು- 34 ನೆಕ್ಕಿಲಾಡಿ ರಾಜ್ಯ ಹೆದ್ದಾರಿಯ ಡಿವೈಡರ್‌ನಲ್ಲಿ ನೆಟ್ಟಿರುವ ಗಿಡಗಳಿಗೆ ನೀರು ಒದಗಿಸುವುದಕ್ಕೆ ಡಿ.16ರಂದು ನಡೆದ ಕೋಡಿಂಬಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.


ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ರಾಮಚಂದ್ರ ಪೂಜಾರಿ ಹಾಗೂ ರಾಮಣ್ಣ ಗೌಡ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, 150 ಮನೆಗಳಿಗೆ ದಿನಕ್ಕೆ ಒಂದು ಗಂಟೆ ನೀರು ಪೂರೈಕೆ ಮಾಡಲು ಹರಸಾಹಸ ಪಡಲಾಗುತ್ತಿದೆ. ಈ ನಡುವೆ ರಸ್ತೆಯ ಮಧ್ಯೆಯ ಡಿವೈಡರ್‌ನಲ್ಲಿ ನೆಟ್ಟ ಗಿಡಗಳಿಗೆ ಗ್ರಾ.ಪಂ.ನ ಕುಡಿಯುವ ನೀರನ್ನು ಒದಗಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.ಇದಕ್ಕೆ ಉತ್ತರಿಸಿದ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ರಸ್ತೆ ಮಧ್ಯದಲ್ಲಿ ಹೂವಿನ ಗಿಡಗಳು ಇದ್ದರೆ ಅದು ನಮ್ಮ ಊರಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅವುಗಳು ಬದುಕಬೇಕಾದರೆ ನೀರುಣಿಸುವುದು ಅನಿವಾರ್ಯ ಎಂದು ಹೇಳಿದರು. ಆಕ್ಷೇಪದ ಬಗ್ಗೆ ಚರ್ಚೆ ನಡೆದು ಗಿಡಗಳಿಗೆ ನೀರುಣಿಸಲು ಗುತ್ತಿಗೆದಾರರು ಬದಲಿ ವ್ಯವಸ್ಥೆ ಮಾಡಲಿ ಎಂಬ ಅಭಿಪ್ರಾಯ ವ್ಯಕ್ತವಾಯಿತು.


ಗ್ರಾಮ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಜಗನ್ನಾಥ ಶೆಟ್ಟಿ ರಾಜೀನಾಮೆ ನೀಡಿದ ಪತ್ರವನ್ನು ಸಭೆಯಲ್ಲಿ ಓದಿ ಹೇಳಿದಾಗ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಇದನ್ನು ಈಗ ಅಂಗೀಕಾರ ಮಾಡಬೇಡಿ. ತಿಂಗಳ ಗಡುವಿನೊಳಗೆ ಇಲ್ಲಿ ಬಂದಿರುವ ಸಮಸ್ಯೆಯನ್ನು ಸರಿಪಡಿಸುವ ಭರವಸೆ ನೀಡಿದರು. ಅದಕ್ಕೆ ಜಗನ್ನಾಥ ಶೆಟ್ಟಿಯವರು ಮಾತನಾಡಿ, ತಾನು ರಾಜೀನಾಮೆಯನ್ನು ಹಿಂದೆಗೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.


ಬಳಿಕ ಮಾತನಾಡಿದ ಜಯಪ್ರಕಾಶ್ ಬದಿನಾರು, ಕುಡಿಯುವ ನೀರಿನ ಪಂಪು ಸ್ವಯಂ ಚಾಲಿತಕ್ಕೆ ಆಧುನಿಕ ರಿಮೋಟ್ ವ್ಯವಸ್ಥೆ ಬಂದಿದೆ. ಅಲ್ಲದೆ ಸ್ವಯಂ ಚಾಲಿತ ವ್ಯವಸ್ಥೆ ಯಾವ ಸ್ಥಳದಲ್ಲಿದ್ದರೂ ನಿಭಾಯಿಸಲು ಸಾಧ್ಯ. ಇದಕ್ಕೆ ಯಾವುದೇ ನಿರ್ವಾಹಕ ಅಗತ್ಯ ಇಲ್ಲ ಎಂದಾಗ ಸದಸ್ಯ ರಾಮಚಂದ್ರ ಪೂಜಾರಿ ರಿಮೋಟ್ ವ್ಯವಸ್ಥೆ ಅಳವಡಿಸುವುದು ಮುಖ್ಯವಲ್ಲ, ಈ ವ್ಯವಸ್ಥೆಯಿಂದ ಪಂಪು ಕೆಟ್ಟು ಹೋದರೆ ಯಾರು ಹೊಣೆ? ಪಂಚಾಯತ್ ಈಗ ಇರುವ ಆದಾಯದಲ್ಲಿ ಇದು ಸಾಧ್ಯವೇ ಎಂದು ಪ್ರಶ್ನಿಸಿದರು. ಇದಕ್ಕೆ ಜಯಪ್ರಕಾಶ್ ಬದಿನಾರು, ಇಂತಹ ಗ್ಯಾರಂಟಿಯುಳ್ಳ ಉಪಕರಣವನ್ನು ಪ್ರಾಯೋಗಿಕವಾಗಿ ತನ್ನ ವಾರ್ಡಿಗೆ ಅಳವಡಿಸುವಲ್ಲಿ ಸಭೆಯ ಒಪ್ಪಿಗೆ ಕೇಳಿದರು.
ಸಭೆಯಲ್ಲಿ ಸದಸ್ಯರಾದ ಉಷಾ, ಪುಷ್ಪಾ, ಮೋಹಿನಿ, ಗೀತಾ, ಪೂರ್ಣಿಮಾ ಉಪಸ್ಥಿತರಿದ್ದರು. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಕಾರ್ಯದರ್ಶಿ ಅಣ್ಣು ವಂದಿಸಿದರು.

LEAVE A REPLY

Please enter your comment!
Please enter your name here