ಮಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುವುದರೊಳಗೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ದ.ಕ.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದ್ದಾರೆ.
ಮಂಗಳೂರಿನ ಪತ್ರಿಕಾ ಭವನದಲ್ಲಿ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಮಾಧ್ಯಮ ಸಂವಾದಗೋಷ್ಠಿಯಲ್ಲಿ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಅವರು ವಿವರಣೆ ನೀಡಿದರು.
ದ.ಕ.ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ನನಗೆ ನೀಡಿದ ಬಳಿಕ ತಾಲೂಕು ಸಮಿತಿಗಳನ್ನು ರಚನೆ ಮಾಡಿ ಕಚೇರಿಗಳನ್ನು ಆರಂಭಿಸಿದೆ. ಬಳಿಕ ಯೋಜನೆಯನ್ನು ಹೆಚ್ಚು ಪರಿಣಾಮಕಾರಿ ಅನುಷ್ಠಾನ ಮಾಡಲು ಸಾಧ್ಯವಾಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿದ.ಕ ಜಿಲ್ಲೆ ಶೇ 98 ಪ್ರಗತಿ ಸಾಧಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.ಈ ಯೋಜನೆಯ ಮೂಲಕ 5.51 ಲಕ್ಷ ಫಲಾನುಭವಿಗಳಿಗೆ ರೂ. 276.87 ಕೋಟಿ ರೂ.ಹಾಗೂ 2024ರ ನವೆಂಬರ್ ವರೆಗೆ 282.3ಕೋಟಿ ರೂ ಮೊತ್ತದ ಉಚಿತ ವಿದ್ಯುತ್ ನೀಡಲಾ ಗಿದೆ.ಗೃಹಲಕ್ಷ್ಮಿ ಯೋಜನೆಯಲ್ಲಿ 3,72,300 ಮಹಿಳೆಯರು ರೂ.943.41ಕೋಟಿ ಆರ್ಥಿಕ ಸಹಾಯ ಪಡೆದಿರುತ್ತಾರೆ. ಶಕ್ತಿ ಯೋಜನೆ ಯಲ್ಲಿ 6 ಕೋಟಿ 79 ಲಕ್ಷ ಮಹಿಳೆಯರು ಪ್ರಯಾಣ ಮಾಡಿ 219.86 ಕೋಟಿ ರೂ. ಆರ್ಥಿಕ ನೆರವು ಪಡೆದಿರುತ್ತಾರೆ.ಯುವನಿಧಿ ಯೋಜನೆ ಯಡಿ 4240 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು 3643 ಫಲಾನುಭವಿಗಳು 3,87,94,500 ರೂ.ನಿರುದ್ಯೋಗ ಭತ್ತೆ (ಅಕ್ಟೋಬರ್ 2024 ರವರೆಗೆ) ಪಡೆದಿರುತ್ತಾರೆ. ಅನ್ನ ಭಾಗ್ಯ ಯೋಜನೆಯಡಿಯಲ್ಲಿ 2,59,730 ಪಡಿತರ ಚೀಟಿ ಹೊಂದಿದವರ ಖಾತೆಗೆ 5.61 ಲಕ್ಷ ಅರ್ಹ ಫಲಾನುಭವಿಗಳಿದ್ದು 282.03 ಕೋಟಿ ರೂ. ವರ್ಗಾವಣೆ ಸೇರಿ ದ.ಕ.ಜಿಲ್ಲೆಗೆ 1464 .22 ಕೋಟಿ ರೂ. ಹಣ ಬಂದಿದೆ ಎಂದು ಭರತ್ ಮುಂಡೋಡಿ ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.