ಕೋಡಿಂಬಾಡಿ ಶಾಲೆಯಲ್ಲಿ ಉಪ್ಪಿನಂಗಡಿ ಕಾಲೇಜ್‌ನ ಎಎಸ್‌ಎಸ್ ಶಿಬಿರ

0

ಸೇವೆಯು ಭಗವಂತನ ಪ್ರೀತಿಗೆ ಪಾತ್ರವಾಗುವುದರಿಂದ ಸೇವೆ ನಮ್ಮೆಲ್ಲರ ಆದ್ಯ ಕರ್ತವ್ಯ : ಅರ್ಜೆನ್

ಉಪ್ಪಿನಂಗಡಿ : ಸೇವಾ ಮನೋಭಾವ ನಮ್ಮೆಲ್ಲರ ಬದುಕಿಗೆ ಅವರ್ಣನೀಯ ಸಂತಸದ ಬೆಳಕನ್ನು ಒದಗಿಸುವುದರಿಂದ ಮತ್ತು ಮಾನವನ ಜೀವನದಲ್ಲಿ ಸೇವೆಯು ಭಗವಂತನ ಪ್ರೀತಿಗೆ ಪಾತ್ರವಾಗುವುದರಿಂದ ಸೇವೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರಬೇಕೆಂದು ನೆದರ್ ಲ್ಯಾಂಡ್ ದೇಶದ ಉದ್ಯಮಿ ಹಾಗೂ ಸಾಮಾಜಿಕ ಸೇವಾ ಕಾರ್ಯಕರ್ತ ಅರ್ಜೆನ್ ಅಲಿಯಾಸ್ ಅರ್ಜುನ್ ಹೇಳಿದರು.


ಅವರು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕವು ಕೊಡಿಂಬಾಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಎನ್ ಎಸ್‌ ಎಸ್ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಈ ಭಾಗದಲ್ಲಿ ಹಿಮಚ್ಚಾದಿತ ಬೆಟ್ಟಗಳಿಲ್ಲ. ಆದರೆ ನೆದರ್ ಲ್ಯಾಂಡ್ ನಂತಹ ದೇಶಗಳಲ್ಲಿ ಹಿಮಚ್ಚಾದಿತ ಬೆಟ್ಟಗಳು ಹಲವಿದೆ. ಅಲ್ಲಿ ಬೆಟ್ಟದ ಮೇಲೇರಿ ಅಂಗೈಯಲ್ಲಿ ಒಂದಷ್ಟು ಮಂಜು ತೆಗೆದುಕೊಂಡು ಕೆಳಕ್ಕೆ ಎಸೆದರೆ ಅದು ಉರುಳಿಕೊಂಡು ಉರುಳಿಕೊಂಡು ನೆಲ ತಲುಪುವಾಗ ಹೆಬ್ಬಂಡೆಯಾಗಿ ಮಾರ್ಪಾಡಾಗುತ್ತಿರುತ್ತದೆ. ಅಂತೆಯೇ ನಮ್ಮ ಸಣ್ಣ ಸಣ್ಣ ಸೇವಾ ಕಾರ್ಯಗಳೂ ಕೂಡಾ ದೊಡ್ಡ ಫಲಿತಾಂಶಕ್ಕೆ ಕಾರಣವಾಗಬಲ್ಲದು. ಸೇವೆಗೆ ಹಣವನ್ನು ಅವಲಂಬಿತರಾಗಬಾರದು ಗುಣವನ್ನು ಅವಲಂಬಿತರಾಗಿ. ಮಾಡುವ ಸಣ್ಣ ಪುಟ್ಟ ಸಮಾಜಮುಖಿ ಕಾರ್ಯಗಳೇ ಮುಂದೊಂದು ದಿನ ಸಾವಿರಾರು ಜನರಿಗೆ ಸಹಾಯ ಮಾಡುವ ಶಕ್ತಿ ಚೈತನ್ಯವನ್ನು ನೀಡಿ ನಮಗೆ ದೈತ್ಯ ವ್ಯಕ್ತಿತ್ವವನ್ನು ಒದಗಿಸಬಹುದಾಗಿದೆ ಎಂದರು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇಲ್ಲಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿರುವ ಡಾ. ನಂದೀಶ್ ವೈ ಡಿ ಅವರು “ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಅರಿತುಕೊಂಡರೆ ಸಾಲದು, ಅವುಗಳನ್ನು ನಾವು ಆಚರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದರು.


ದ.ಕ.ಜಿ.ಪ ಪಂ.ಸ.ಪ್ರಾ ಶಾಲೆ ಕೋಡಿಂಬಾಡಿ ಇಲ್ಲಿನ ಸಹ ಶಿಕ್ಷಕಿ ಕವಿತಾ ಇವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಸಿಯಾ, ಕೋಡಿಂಬಾಡಿ ಅಂಗನವಾಡಿ ಕಾರ್ಯಕರ್ತೆ ಸುಮಲತಾ, ಕಾಲೇಜಿನ ಪ್ರಾಂಶುಪಾಲರಾದ ಪ್ರೋ ರವಿರಾಜ ಎಸ್, ಶಿಬಿರಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಕೇಶವ ಕುಮಾರ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿ ದುರ್ಗಾ ಪ್ರಸಾದ್ ಸ್ವಾಗತಿಸಿದರು. ರಮ್ಯಾ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಪ್ರದೀಪ್ ವಂದಿಸಿದರು ಮತ್ತು ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು.


ನೆದರ್ ಲ್ಯಾಂಡ್ ಪ್ರಜೆ ಅರ್ಜೆನ್ ಅರ್ಜುನ್ ಆದ ಬಗೆ ಇದು. .
ನೆದರ್ ಲ್ಯಾಂಡ್ ನಲ್ಲಿ ಸಾಪ್ಟ್ ವೇರ್ ಡೆವಲಪ್ಪರ್ ಆಗಿ ಲಾಭದಾಯಕ ಉದ್ಯಮವನ್ನು ನಡೆಸುತ್ತಿರುವ ಅರ್ಜೆನ್ ಬಾಲ್ಯದಿಂದಲೇ ಸೇವಾ ಮನೋಭಾವವನ್ನು ಹೊಂದಿದ್ದ ವ್ಯಕ್ತಿ. ಅವರು ಕಳೆದ ಹದಿನೈದು ವರ್ಷಗಳಿಂದ ಭಾರತದಲ್ಲಿ ಹೆಚ್ ಐ ವಿ ಸೋಂಕಿತ ಮಕ್ಕಳ ಪರವಾಗಿ ಕೆಲಸ ಮಾಡುತ್ತಾ ಭಾರತದಲ್ಲಿ ತನ್ನ ಸೇವಾ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಬಗ್ಗೆ ಒಲವು ಹೊಂದಿರುವ ಇವರು, ಭಾರತೀಯಳನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ತನ್ನ ಹೆಸರು ಅರ್ಜೆನ್ ಎನ್ನುವುದು ಭಾರತೀಯರ ಮೆಚ್ಚಿನ ಮದ್ಯಮ ಪಾಂಡವನಾದ ಅರ್ಜುನನ ಹೆಸರಿಗೆ ಸಾಮ್ಯತೆ ಇರುವುದರಿಂದ ತನ್ನ ಹೆಸರನ್ನು ಭಾರತದಲ್ಲಿ ಅರ್ಜುನ್ ಎಂದು ಕರೆಯಿಸಿಕೊಳ್ಳುವಲ್ಲಿ ಆಸಕ್ತರಾಗಿ ಎಲ್ಲೆಡೆ ಗುರುತಿಸಿಕೊಳ್ಳುವಲ್ಲಿ ಇದೇ ಹೆಸರನ್ನು ಸೂಚಿಸುತ್ತಾರೆ. ಭಾರತದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದೇಶದಿಂದ ಅಗತ್ಯ ಸಹಾಯ ಸಹಕಾರ ಒದಗಿಸುವಲ್ಲಿಯೂ ಇವರು ಪ್ರಯತ್ನಶೀಲರಾಗಿದ್ದಾರೆ.

LEAVE A REPLY

Please enter your comment!
Please enter your name here