ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸ್ಕೌಟ್ಸ್, ಗೈಡ್ಸ್,ಕಬ್ ಬುಲ್ ಬುಲ್ ವಾರ್ಷಿಕ ಮೇಳವು ಫೆ.24ರಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರು, ಸ್ಕಾಟ್, ಗೈಡ್ಸ್ ನಲ್ಲಿ ರಾಜ್ಯ ಪುರಸ್ಕೃತರಾಗಿರುವ ಕಿಶೋರ್ ಕುಮಾರ್ ಬೊಟ್ಯಾಡಿ, ಸಮಾಜದ ಜೊತೆಗೆ ನಾವು ಹೇಗೆ ಬದುಕಬೇಕು ಎನ್ನುವುದನ್ನು ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪ್ರಕೃತಿಯ ಜೊತೆಗೆ ಸೌಹಾರ್ಧಯುತವಾಗಿ ಯಾವ ರೀತಿ ಬದುಕಬೇಕು ಕಲಿಸುವುದೇ ಉದ್ದೇಶ. ಸಮಾಜದಲ್ಲಿ ಸ್ವಾವಲಂಬಿಯಾಗಿ, ಗೌರವಯುತವಾಗಿ ಬದುಕುವುದು, ಕೈಲಾದಷ್ಟು ಸಹಾಯ ನೀಡುವುದು, ದೇಶಕ್ಕಾಗಿ ಬದ್ಧತೆಯಿಂದ ಬದುಕುವುದು ಸೇರಿದಂತೆ ಬಹಳಷ್ಟು ವಿಚಾರಗಳನ್ನು ತಿಳಿಸುತ್ತದೆ. ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ವಿದ್ಯಾರ್ಥಿ ಜೀವನದ ಬಳಿಕ ನಾವು ಸಮಾಜದಲ್ಲಿ ಯಾವ ರೀತಿ ಇರಬೇಕು ಎನ್ನುವುದನ್ನು ತಿಳಿಸುತ್ತದೆ. ಜೀವನದಲ್ಲಿ ಯಾವುದೇ ಸನ್ನಿವೇಶಗಳು ಬಂದರೂ ನಿರ್ಲಿಪ್ತ ಭಾವದಿಂದ ಸ್ವೀಕರಿಸಿಕೊಂಡು ಸಚ್ಚಾರಿತ್ರಿಕವಾಗಿ ಬದುಕುವುದನ್ನು ಕಲಿಸುತ್ತದೆ ಎಂದ ಅವರು ಲಿಟ್ಲ್ ಫ್ಲವರ್ ಶಾಲೆಯು ಜಿಲ್ಲೆಯಲ್ಲಿಯೇ ಅತೀ ಹೆಚ್ಚು 350 ಮಕ್ಕಳನ್ನು ಸ್ಕೌಟ್, ಗೈಡ್ಸ್‌ನಲ್ಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಗರ ಸಭಾ ಉಪಾಧ್ಯಕ್ಷ, ಹಿರಿಯ ವಿದ್ಯಾರ್ಥಿ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ರಾಜಕೀಯವೇ ನಮ್ಮ ಜೀವನವಲ್ಲ. ಜೀವನದಲ್ಲಿ ರಾಜಕೀಯವನ್ನು ಅಳವಡಿಸಿಕೊಂಡಿದ್ದೇವೆ. ಸ್ಕೌಟ್, ಗೈಡ್ಸ್ ಮೂಲಕ ಭವ್ಯ ಭಾರತದ ಪ್ರಜೆಯಾಗಲಿರುವ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಚಕ್ರಪಾಣಿ ಮಾತನಾಡಿ, ಕ್ರೀಡೆ, ಶೈಕ್ಷಣಿಕ ಚಟುವಟಿಕೆಗಳು ಸಂಸ್ಕಾರಯುತ ಜೀವನಕ್ಕೆ ಪೂರಕವಾಗಿದೆ ಎಂದರು.
ಸ್ಥಳೀಯ ಸಂಸ್ಥೆಯ ಸುನೀತಾ ಎಲ್.ಟಿ., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ ಶುಭಹಾರೈಸಿದರು. ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡಾದ ಅನುಭವ್ ಶ್ರೀವಾಸ್ತವ್, ದರ್ಬೆ ಕೋಸ್ಟಲ್ ಹೋಂನ ಮ್ಹಾಲಕ ಸಂದೇಶ್ ರೈ, ರಂಗ ನಿರ್ದೇಶಕ ಉದಯ ಸಾರಂಗ ಹಾಗೂ ಸ್ಕೌಟ್ಸ್, ಗೈಡ್ಸ್‌ನ ವಿಲ್ಮಾ ಫೆರ್ನಾಂಡೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ವಂದಿಸಿದರು, ಮುಖ್ಯ ಶಿಕ್ಷಕಿ ವೆನಿಶಾ ಬಿ.ಎಸ್ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.