ಇಚ್ಛಾಶಕ್ತಿ ಇದ್ದರೆ ಸರ್ಕಾರಿ ಸವಲತ್ತುಗಳನ್ನು ಜನರಿಗೆ ತಲುಪಿಸಲು ಸಾಧ್ಯ: ಬಾಲಕೃಷ್ಣ ಆಳ್ವ ಕೊಡಾಜೆ
ಗ್ರಾ.ಪಂ. ಜೊತೆ ಜನರು ಕೈಜೋಡಿಸಿದಾಗ ಕಾರ್ಯಕ್ರಮ ಯಶಸ್ಸಿಗೆ ಸಾಧ್ಯ: ಸುದೀಪ್ ಕುಮಾರ್ ಶೆಟ್ಟಿ
ವಿಟ್ಲ: ಇಚ್ಛಾಶಕ್ತಿ ಇದ್ದರೆ ಸರ್ಕಾರಿ ಸವಲತ್ತುಗಳನ್ನು ಜನರಿಗೆ ತಲುಪಿಸಲು ಸಾಧ್ಯವಿದೆ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಗ್ರಾಮ ಪಂಚಾಯತ್ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಇದು ಅಭಿನಂದನಾರ್ಹ ಎಂದು ಮಾಣಿ ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.

ಮಾಣಿ ಗ್ರಾಮ ಪಂಚಾಯತ್ ವತಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿರವರು ಮಾತನಾಡಿ ಜನರು ಪಂಚಾಯತ್ ಗೆ ಕಟ್ಟಬೇಕಾದ ತೆರಿಗೆ ಮತ್ತು ಶುಲ್ಕಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟಬೇಕು. ಆಗ ನಾವು ಜನರಿಗೆ ಸವಲತ್ತುಗಳನ್ನು ನೀಡಲು ಸಾಧ್ಯವಾಗುತ್ತದೆ. ಪಂಚಾಯತ್ ವತಿಯಿಂದ ನಾವು ಸಂಘಟಿಸುವ ಕಾರ್ಯಕ್ರಮಗಳಿಗೆ ಜನರು ನಮ್ಮ ಜೊತೆ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ, ವಿಕಲಚೇತನರಿಗೆ ಸಹಾಯಧನ ಮತ್ತು ವೈದ್ಯಕೀಯ ವೆಚ್ಚದ ಚೆಕ್ ಹಾಗೂ ನೀರಿನ ಟ್ಯಾಂಕ್ ವಿತರಿಸಲಾಯಿತು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ ತೋಟ, ರಮಣಿ.ಡಿ.ಪೂಜಾರಿ, ಪ್ರೀತಿ ಡಿನ್ನಾ ಪಿರೇರಾ, ಸೀತಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.
