ಸಂಪ್ಯ: ಅಕ್ಷಯ ಕಾಲೇಜಿನ ರಾ.ಸೇ.ಯೋ.ಘಟಕಗಳ ವಾರ್ಷಿಕ ವಿಷೇಶ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮೇಗಿನಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳು ನಡೆದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಧ್ಯಕ್ಷರು ಜಯಂತ ನಡುಬೈಲು ಮಾತನಾಡಿ ನಮ್ಮ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವರು ಜವಾಬ್ದಾರಿಯುತ ನಾಗರಿಕರಾಗಲು ಸಿದ್ಧಗೊಳ್ಳುತ್ತಾರೆ. ಶಿಬಿರದಲ್ಲಿ ಕಲಿತ ಪಾಠಗಳು ಮುಂದಿನ ಜೀವನದಲ್ಲಿಯೂ ಪ್ರೇರಣೆಯಾಗಿ ಉಳಿಯಬೇಕು, ಎಲ್ಲಾ ವಿದ್ಯಾರ್ಥಿಗಳು ಈ ಸೇವಾ ಮನೋಭಾವವನ್ನು ಮುಂದುವರಿಸಿ, ಸಮಾಜದ ಒಳ್ಳೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಸಮಾರೋಪ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯ ರಾ.ಸೇ.ಯೋ. ಪುತ್ತೂರು ವಲಯದ ಸಂಚಾಲಕರಾದ ಡಾ. ಹರಿಪ್ರಸಾದ್ ಮಾತನಾಡಿ, ಏನ್.ಎಸ್.ಎಸ್ ಶಿಬಿರವು ಕೇವಲ ಏಳು ದಿನಗಳ ಸೇವೆಯಲ್ಲ, ಇದು ಜೀವನ ಪಾಠವಾಗಿದೆ, ಶಿಬಿರದ ಹಿನ್ನಲೆಯಲ್ಲಿ ಸ್ವಯಂಸೇವಕರು ತಮ್ಮ ಜೀವನವನ್ನೂ ಸಮಾಜಮುಖಿಯಾಗಿಸುವ ಬದ್ಧತೆ ಹೊಂದಬೇಕು ಎಂದು ಹೇಳಿದರು. ಘಟಕದ ಕಾರ್ಯತಂಡದ ಶ್ರಮವನ್ನು ಮೆಚ್ಚಿ, ಶಿಬಿರದ ಯಶಸ್ಸು ಎಲ್ಲಾ ವಿದ್ಯಾರ್ಥಿಗಳ ಸಹಕಾರದಿಂದ ಸಾಧ್ಯವಾಗಿದೆ, ಭವಿಷ್ಯದಲ್ಲಿಯೂ ಏನ್.ಎಸ್.ಎಸ್ ಘಟಕದ ಚಟುವಟಿಕೆಗಳು ಇನ್ನಷ್ಟು ಶಕ್ತಿಶಾಲಿಯಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿ ನಿತ್ಯಾನಂದ ನಾಯಕ್ ಮಾತನಾಡಿ, ಏನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಲು ಉತ್ತಮ ವೇದಿಕೆ. ಯುವಕರು ತಮ್ಮ ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು. ನಾವು ಸಮಾಜದ ಒಳಿತಿಗಾಗಿ ಮಾಡಿದ ಸಣ್ಣ ಸೇವೆಯೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬ ಸಂದೇಶ ನೀಡಿದರು. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಏನ್.ಎಸ್.ಎಸ್ ಘಟಕದ ಸೇವೆಗಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮೇಗಿನಪೇಟೆಯ ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಎಂ ಇಸ್ಮಾಯಿಲ್, ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ಭವಾನಿ, ಪ್ರಭಾರ ಮುಖ್ಯೋಪಾಧ್ಯಾಯರಾದ ಜಯಂತಿ, ಅಕ್ಷಯ ಕಾಲೇಜಿನ ಪ್ರಾಂಶಪಾಲರಾದ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್, ಉಪ ಪ್ರಾಂಶುಪಾಲ ರಕ್ಷನ್, ಶಿಬಿರಾಧಿಕಾರಿಗಳಾದ ಕಿಶೋರ್ ಕುಮಾರ್ ರೈ, ಕುಮಾರಿ ಮೇಘಶ್ರೀ, ಏನ್.ಎಸ್.ಎಸ್ ಘಟಕಗಳ ನಾಯಕ ಅಖಿಲೇಶ್ ಹಾಗೂ ನಾಯಕಿ ವರ್ಷಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಯಂ ಸೇವಕ ಕೀರ್ತನ ಕೃಷ್ಣ ಪ್ರಾರ್ಥಿಸಿ, ಸ್ವಯಂಸೇವಕಿ ವರ್ಷಿಣಿ ಸ್ವಾಗತಿಸಿ, ಶ್ರುತಿ ವಂದಿಸಿ, ವಿಂಧು ಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.