






ಪುತ್ತೂರು: ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 38 ವರ್ಷ ಸೇವೆ ಸಲ್ಲಿಸಿ ಮಾ.31ರಂದು ನಿವೃತ್ತರಾದ ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕ ರಘುರಾಮ ಎ. ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಗೌಡ, ಈ ಹಿಂದೆ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿರುವ ಗೀತಾ ಎ. ಮತ್ತು ಶಾಂತಿನಗರ ಪ್ರೌಢಶಾಲಾ ಸಹಶಿಕ್ಷಕ ಲಿಂಗಪ್ಪ ಎನ್. ಅವರು ರಘುರಾಮ ಎ. ಅವರ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.



ಬಳಿಕ ರಘುರಾಮ ಅವರನ್ನು ಶಾಲಾ ಮುಖ್ಯೋಪಾಧ್ಯಾಯ ವಿಷ್ಣುಪ್ರಸಾದ್ ಸಿ. ಅವರ ಉಪಸ್ಥಿತಿಯಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ರಘುರಾಮ ಅವರು ತನ್ನ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು ಹಾಗೂ ಸನ್ಮಾನಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯೋಪಾಧ್ಯಾಯ ವಿಷ್ಣುಪ್ರಸಾದ್ ಸಿ. ಸ್ವಾಗತಿಸಿ ಶಿಕ್ಷಕಿ ದೀಪಾ ಎಂ. ವಂದಿಸಿದರು. ಶಿಕ್ಷಕಿ ಜಯಂತಿ ಜೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಧನಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ನಿರ್ಮಲ ರೋಡ್ರಿಗಸ್ ಹಾಗೂ ಶಿಕ್ಷಕಿ ಗ್ರೇಸಿ ಡಿಸೋಜ ಸಹಕರಿಸಿದರು.










