






ಪುತ್ತೂರು ; ಮೇ. 22ರಂದು ವಾಹನ ಅಪಘಾತದಲ್ಲಿ ನಿಧನರಾದ ಯಕ್ಷಗುರು ಬೆಳ್ಳಾರೆ ವಾಸುದೇವ ರೈ ಮತ್ತು ಶರ್ಮಿಳಾ ವಿ. ರೈ ದಂಪತಿಯ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಸವಣೂರು ಅಂಬಾ ಬ್ರದರ್ಸ್ ತಂಡದ ಸದಸ್ಯ ಸೂರಜ್ ರೈಯವರಿಗೆ ನುಡಿನಮನ ಕಾರ್ಯಕ್ರಮ ಜೂ. 1ರಂದು ಬೆಳ್ಳಾರೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.



ಮೃತರಿಗೆ ನುಡಿನಮನ ಸಲ್ಲಿಸಿದ ಸುಳ್ಯ ಬಂಟರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ರೈ ತೋಟ ಮಾತನಾಡಿ, ವಾಸುದೇವ ರೈ ದಂಪತಿಗಳು ತಮ್ಮ ಮಕ್ಕಳ ಏಳಿಗೆಗಾಗಿ ತುಂಬಾ ಶ್ರಮಪಟ್ಟಿದ್ದರು. ತಮ್ಮ ಜೀವನದಲ್ಲಿ ಒಂದು ಹಂತಕ್ಕೆ ಬಂದ ಸಂದರ್ಭದಲ್ಲಿಯೇ ಸೂರಜ್ ರೈ ಅವರನ್ನು ಆಕಸ್ಮಿಕವಾಗಿ ಕಳೆದುಕೊಳ್ಳುವಂತಾಯಿತು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಸದ್ಗತಿಯನ್ನು ಕರುಣಿಸಲಿ, ಸೂರಜ್ ರೈಯವರ ಕುಟುಂಬ ವರ್ಗಕ್ಕೆ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲೆಂದು ಪ್ರಾರ್ಥಿಸುವ ಎಂದರು.





ಸೂರಜ್ ರೈ ಅವರ ಪತ್ನಿ ಸ್ನೇಹ ಎಸ್. ರೈ, ತಂದೆ ಯಕ್ಷಗುರು ವಾಸುದೇವ ರೈ ವಿ, ತಾಯಿ ಶರ್ಮಿಳಾ ವಿ. ರೈ, ಸಹೋದರ ಸುದೀಪ್ ರೈ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಸವಣೂರು ಅಂಬಾ ಬ್ರದರ್ಸ್ ತಂಡದ ಸದಸ್ಯರು ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.










