






ಉಪ್ಪಿನಂಗಡಿ: ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಸೈಬರ್ ಅಪರಾಧಗಳು, ಪೋಕ್ಸೋ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಸುತೇಶ್ ಕೆ.ಪಿ.ಅವರು ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು ಯಾವುದೇ ರೀತಿಯ ಆಕರ್ಷಣೆ ಹಾಗೂ ದುಶ್ಚಟಗಳ ದಾಸ್ಯಕ್ಕೆ ಒಳಗಾಗಬಾರದು. ಇಂದಿನ ಡಿಜಿಟಲ್ ಯುಗದಲ್ಲಿ ಜಾಲತಾಣಗಳ ಸುರಕ್ಷಿತ ಬಳಕೆ ಅತ್ಯಂತ ಅಗತ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಅಶ್ಲೀಲ ಚಿತ್ರಗಳನ್ನು ಕಳುಹಿಸುವುದು, ಅನಾಚಾರ ಅಥವಾ ಅಸಮರ್ಪಕ ಸಂದೇಶಗಳನ್ನು ಹಂಚಿಕೊಳ್ಳುವುದು ಕಾನೂನಾತ್ಮಕವಾಗಿ ಅಪರಾಧವಾಗುವುದು ಎಂದು ಹೇಳಿದರು.



ತಮ್ಮ ಸುರಕ್ಷತೆ, ಉತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಭವಿಷ್ಯಕ್ಕಾಗಿ ತಂದೆ, ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಗೌರವಿಸಬೇಕ. ಜಾಲತಾಣಗಳಲ್ಲಿ ಕಾಣಿಸುವ ಜಾಹೀರಾತುಗಳು ಮತ್ತು ಆಕರ್ಷಣೆಗಳಿಗೆ ಮರುಳಾಗದೆ ವಾಸ್ತವಿಕತೆಯನ್ನು ಅರಿತು ನಡೆದುಕೊಳ್ಳುವಂತೆ ತಿಳಿಸಿದರು.

ಪೊಲೀಸ್ ಅಧಿಕಾರಿ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ., ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯಪೂರ್ಣ ಜೀವನ ನಡೆಸಿ ದುಶ್ಚಟಗಳಿಂದ ದೂರವಿದ್ದು ಉತ್ತಮ ಸಂಸ್ಕಾರ ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಶಿಕ್ಷಕಿ ಸವಿತಾ ಪಿ.ಸಿ. ಸ್ವಾಗತಿಸಿದರು. ಶಕುಂತಲಾ ಕೆ. ವಂದಿಸಿದರು. ಶಿಕ್ಷಕರಾದ ಮೋಹನ್ ಎಚ್., ಭವ್ಯ, ಸಂಧ್ಯಾ ವೈ.ಎಂ., ಡೊಂಬಯ ಗೌಡ ಸಹಕರಿಸಿದರು.










